ಗೋಣಿಕೊಪ್ಪಲು, ಜು. ೪: ವಾಣಿಜ್ಯ ನಗರ ಗೋಣಿಕೊಪ್ಪಲುವಿನ ಪ್ರತಿಷ್ಠಿತ ಬಡಾವಣೆಗಳಾದ ಕಾವೇರಿ ಹಿಲ್ಸ್, ವಿಜಯನಗರ ಹಾಗೂ ಶಾಂತಿ ನಗರಕ್ಕೆ ಸಂಪರ್ಕಿಸುವ ಮತ್ತು ಸಂತ ಥೋಮಸ್ ಶಾಲೆಗೆ ತೆರಳುವ ಪ್ರಮುಖ ರಸ್ತೆಯು ಅಭಿವೃದ್ಧಿಗೊಂಡ ನಂತರ ಕೆಲವೇ ದಿನಗಳಲ್ಲಿ ಸುರಿದ ಮಳೆಗೆ ಕಿತ್ತು ಬಂದಿದ್ದು ಕಳಪೆ ಕಾಮಗಾರಿಗೆ ಸಾಕ್ಷಿಯಾಗಿದೆ.

ಕಳೆದ ೨ ತಿಂಗಳ ಹಿಂದೆ ಈ ರಸ್ತೆಯ ಅಭಿವೃದ್ಧಿಗಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಶಾಸಕರ ಬಳಿ ಪ್ರಸ್ತಾವನೆ ಸಲ್ಲಿಸಿದ್ದರು. ಇದನ್ನು ಪರಿಗಣಿಸಿದ ಕ್ಷೇತ್ರದ ಶಾಸಕ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಎ.ಎಸ್. ಪೊನ್ನಣ್ಣ ಅನುದಾನವನ್ನು ಮೀಸಲಿಟ್ಟು ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದರು.

ರಸ್ತೆ ಕಾಮಗಾರಿ ಆರಂಭಿಸಿದ ಗುತ್ತಿಗೆದಾರರು ಡಾಂಬರು ಹಾಕಿ ರಸ್ತೆ ಸುಗಮ ಸಂಚಾರಕ್ಕೆ ಆರಂಭದಲ್ಲಿ ಅನುಕೂಲ ಕಲ್ಪಿಸಿದ್ದರು. ಇತ್ತೀಚೆಗೆ ಸುರಿದ ಮಳೆಗೆ ರಸ್ತೆಯು ಅಲ್ಲಲ್ಲಿ ಕಿತ್ತು ಬಂದಿದ್ದು ಸಾರ್ವಜನಿಕ ಸಂಚಾರಕ್ಕೆ ಹಾಗೂ ವಾಹನ ಸಂಚಾರಕ್ಕೆ ಅಡಚಣೆ ಉಂಟಾಗಿದೆ.

ಶಾಸಕ ಪೊನ್ನಣ್ಣನವರು ಈ ರಸ್ತೆ ಅಭಿವೃದ್ಧಿಗಾಗಿ ರೂ. ೫ ಲಕ್ಷ ಅನುದಾನವನ್ನು ಮಂಜೂರು ಮಾಡಿದ್ದರು. ಇದೀಗ ರಸ್ತೆ ಕಾಮಗಾರಿ ಮುಗಿದ ಕೆಲವೇ ಸಮಯದಲ್ಲಿ ರಸ್ತೆಯು ಹಲವು ಕಡೆಗಳಲ್ಲಿ ಕಿತ್ತು ಬಂದಿದೆ. ಕಾಮಗಾರಿಯು ಕಳಪೆ ಮಟ್ಟದಿಂದ ಕೂಡಿರುವುದರಿಂದ ರಸ್ತೆಯು ಹಾಳಾಗಿದೆ ಎಂದು ಇಲ್ಲಿನ ನಾಗರಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ರಸ್ತೆಯಲ್ಲಿ ನೂರಾರು ವಿದ್ಯಾರ್ಥಿಗಳು, ಬಡಾವಣೆಗೆ ತೆರಳುವ ನಾಗರಿಕರು ಸೇರಿದಂತೆ ವಾಹನಗಳು ಪ್ರತಿನಿತ್ಯ ಹೆಚ್ಚಿನ ಸಂಖ್ಯೆಯಲ್ಲಿ ಸಂಚರಿಸುತ್ತವೆ. ಇದೀಗ ರಸ್ತೆ ಹಾಳಾಗಿರುವುದರಿಂದ ಓಡಾಟಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಸಂಬAಧಿಸಿದ ಅಧಿಕಾರಿಗಳು ಗುಣಮಟ್ಟದ ರಸ್ತೆ ಕಾಮಗಾರಿ ಮಾಡಿಸುವಂತೆ ಇಲ್ಲಿನ ನಿವಾಸಿಗಳು ಆಗ್ರಹಿಸಿದ್ದಾರೆ.

-ಹೆಚ್.ಕೆ. ಜಗದೀಶ್