ಸಿದ್ದಾಪುರ, ಜು. ೪: ಕರ್ನಾಟಕ ರಾಜ್ಯ ಕಾಫಿ ರೈತ ಸಂಘ ಹಾಗೂ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ನೆಲ್ಲಿಹುದಿಕೇರಿ ಕಟ್ಟಡ ಕಾರ್ಮಿಕರ ಕಚೇರಿಯಲ್ಲಿ ನೂತನ ಗ್ರಾಮ ಸಮಿತಿ ರಚನೆ ಹಾಗೂ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಅಖಿಲ ಭಾರತ ಸಣ್ಣ ಕಾಫಿ ರೈತ ಸಂಘದ ಅಧ್ಯಕ್ಷ ಲತೀಫ್ ನೇತೃತ್ವದಲ್ಲಿ ನೆಲ್ಲಿಹುದಿಕೇರಿ ಸಣ್ಣ ಕಾಫಿ ರೈತ ಸಂಘದ ಹನ್ನೊಂದು ಸದಸ್ಯರ ಗ್ರಾಮ ಸಂಚಲನಾ ಸಮಿತಿಯನ್ನು ರಚನೆ ಮಾಡಲಾಯಿತು. ಸಂಚಾಲಕರಾಗಿ ಉದಯ, ವಸಂತ, ಚಂದ್ರನ್, ಸೆಬಾಸ್ಟಿನ್, ಮೋಣಪ್ಪ, ಅಂದುಮಾಯಿ, ಸುಬ್ರಮಣಿ, ಫಿಲೋಮಿನ, ಧನೇಶ್, ಅಶೋಕ್, ಮೋಣಪ್ಪ, ಮುನಿಯಪ್ಪ ಆಯ್ಕೆಯಾದರು. ಸಭೆಯಲ್ಲಿ ಅಖಿಲ ಭಾರತ ಸಣ್ಣ ಕಾಫಿ ರೈತ ಸಂಘದ ಪ್ರಧಾನ ಕಾರ್ಯದರ್ಶಿ ಕೃಷ್ಣ ಪ್ರಸಾದ್ ಮಾತನಾಡಿ, ಸಣ್ಣ ರೈತರಿಗೆ ಬೆಳೆದ ಬೆಳೆಗಳಿಗೆ ಸೂಕ್ತ ಬೆಲೆ ಸಿಗದೇ ನಷ್ಟ ಅನುಭವಿಸುತ್ತಿದ್ದಾರೆ. ಅಲ್ಲದೆ ಕಾಡಾನೆ ಹಾವಳಿಗೆ ಬೆಳೆಗಾರರು ತಮ್ಮ ಬೆಳೆಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ದಾಖಲಾತಿಗಳಿಲ್ಲದೆ ಸರಕಾರದ ಸೌಲಭ್ಯಗಳಿಂದ ಸಣ್ಣ ಕಾಫಿ ಬೆಳೆಗಾರರು ದೂರ ಉಳಿದಿದ್ದಾರೆ. ಈ ಹಿನ್ನೆಲೆಯಲ್ಲಿ ಸಣ್ಣ ಕಾಫಿ ಬೆಳೆಗಾರರು ಸಂಘಟಿತರಾಗಿ ಹೋರಾಟ ನಡೆಸಬೇಕೆಂದು ಕರೆ ನೀಡಿದರು. ಈ ಸಂದರ್ಭ ಸಣ್ಣ ಕಾಫಿ ರೈತ ಸಂಘಟನೆಯ ಮುಖಂಡರಾದ ನವೀನ್‌ಕುಮಾರ್, ಪಿ.ಆರ್. ಭರತ್, ವಸಂತ್‌ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.