ಪೊನ್ನಂಪೇಟೆ, ಜು. ೪ : ಪೊನ್ನಂಪೇಟೆ ತಾಲೂಕನ್ನು ರಾಜ್ಯದಲ್ಲಿ ಮಾದರಿ ತಾಲೂಕನ್ನಾಗಿ ಮಾಡಿ ಸಾರ್ವಜನಿಕರಿಗೆ ಉತ್ತಮ ಸೇವಾ ಸೌಲಭ್ಯವನ್ನು ದೊರಯುವಂತೆ ಮಾಡಲು ಕ್ಷೇತ್ರದ ಶಾಸಕರ ಸಹಕಾರದೊಂದಿಗೆ ನಿರಂತರ ಹೋರಾಟವನ್ನು ನಡೆಸಲಾಗುವುದೆಂದು ಇಂದು ನಡೆದ ಪೊನ್ನಂಪೇಟೆ ನಾಗರಿಕ ವೇದಿಕೆ ೧೨ನೇ ವಾರ್ಷಿಕ ಮಹಾಸಭೆಯಲ್ಲಿ ವೇದಿಕೆಯ ಅಧ್ಯಕ್ಷ ಸಿ.ಎಸ್ ವಿಶ್ವನಾಥ್ ಹೇಳಿದರು.
೧೮೬ ಸದಸ್ಯರನ್ನು ಹೊಂದಿರುವ ನಾಗರಿಕ ವೇದಿಕೆಯು ಕಳೆದ ೧೨ ವರ್ಷಗಳಿಂದ ಸಾರ್ವಜನಿಕ ಸೇವೆಯಲ್ಲಿ ತೊಡಗಿಸಿಕೊಂಡಿದ್ದು, ನೂತನ ತಾಲೂಕು ರಚನೆಯಲ್ಲಿ ನಿರಂತರ ಹೋರಾಟದಿಂದ ಸಫಲತೆಯನ್ನು ಪಡೆದಿದೆ. ಇದೀಗ ಸರಕಾರದ ಎಲ್ಲಾ ಇಲಾಖೆಗಳ ಸೇವೆ ಸಾರ್ವಜನಿಕರಿಗೆ ದೊರೆಯು ವಂತಾಗಬೇಕು. ಈ ನಿಟ್ಟಿನಲ್ಲಿ ಸಾರ್ವಜನಿಕರು ನಾಗರಿಕ ವೇದಿಕೆಯೊಂದಿಗೆ ಕೈ ಜೋಡಿಸಬೇಕು ಎಂದು ಮನವಿ ಮಾಡಿದರು.
ಇಂದಿನ ಸಭೆಯಲ್ಲಿ ವೇದಿಕೆಯ ನಿರ್ಗಮಿತ ಉಪಾಧ್ಯಕ್ಷ ಚೆಪ್ಪುಡೀರ ಸೋಮಯ್ಯ, ವೇದಿಕೆಯ ಸದಸ್ಯರು ಹಾಗೂ ಚಿನ್ನದ ಪದಕ ವಿಜೇತ ಹಿರಿಯ ಅಂತರಾಷ್ಟಿçÃಯ ಓಟಗಾರ ಪೆಮ್ಮಂಡ ಅಪ್ಪಯ್ಯ ಅವರನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಪೊನ್ನಂಪೇಟೆ ಗೋಣಿಕೊಪ್ಪ ರಸ್ತೆ ವಾಹನಗಳಿಂದ ಅಪಘಾತ ಹಾಗೂ ವಿಳಂಬ ಪ್ರಯಾಣದಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಬದಲಿ ರಸ್ತೆ ಅಥವಾ ಮೇಲ್ಸೇತುವೆ ನಿರ್ಮಾಣ ಹಾಗೂ ಪೊಲೀಸ್ ಇಲಾಖೆಯಿಂದ ನಗರದ ವ್ಯಾಪ್ತಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಲು ಗಮನ ಸೆಳೆಯಲು ಚರ್ಚಿಸಲಾಯಿತು.
ವಿಶ್ವನಾಥ್ ಸ್ವಾಗತಿಸಿ, ಕಾರ್ಯದರ್ಶಿ ಕೃಷ್ಣರಾಜೇಂದ್ರ ವರದಿ ಮಂಡಿಸಿದರು. ಉಪಕಾರ್ಯದರ್ಶಿ ಪುಚ್ಚಿಮಾಡ ದಿನೇಶ್ ವಂದಿಸಿದರು.