ಸೋಮವಾರಪೇಟೆ, ಜು. ೩: ಸರ್ಕಾರದ ವಿವಿಧ ಯೋಜನೆಗಳಡಿ ನಿಗದಿಗೊಳಿಸಿರುವ ಅನುದಾನ ಇಲಾಖೆಗಳಿಗೆ ಬರಲಿದ್ದು, ವಾರ್ಷಿಕ ಕ್ರಿಯಾ ಯೋಜನೆಯಡಿ ಸಮರ್ಪಕ ವಾಗಿ ವಿನಿಯೋಗಿಸಬೇಕೆಂದು ಜಿಲ್ಲಾ ಮುಖ್ಯ ಯೋಜನಾಧಿಕಾರಿ ಮತ್ತು ಮುಖ್ಯ ಲೆಕ್ಕಾಧಿಕಾರಿ ಝೀವಲ್ ಖಾನ್ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಇಲ್ಲಿನ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪ್ರತಿಯೊಂದು ಇಲಾಖಾ ಕಚೇರಿಗಳಲ್ಲಿ ಅಗತ್ಯವಾಗಿ ಸಿ.ಸಿ. ಕ್ಯಾಮೆರಾ ಅಳವಡಿಸಿಕೊಳ್ಳಬೇಕು. ಇದರೊಂದಿಗೆ ಹಾಜರಾತಿಗಾಗಿ ಬಯೋಮೆಟ್ರಿಕ್ ಅಳವಡಿಸಿಕೊಳ್ಳಲು ಅಧಿಕಾರಿಗಳು ಮುಂದಾಗಬೇಕು ಎಂದರು.
ತಾಲೂಕಿನಲ್ಲಿ ಡೆಂಗ್ಯೂ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಬಗ್ಗೆ ಸಭೆಯಲ್ಲಿ ಆರೋಗ್ಯಾಧಿಕಾರಿ ಇಂದೂಧರ್ ತಿಳಿಸಿದರು. ಕಾಯಿಲೆ ಬಗ್ಗೆ ಜನರಿಗೆ ಆಶಾ ಕಾರ್ಯಕರ್ತರ ಮೂಲಕ ಹಾಗೂ ಬೆಳಿಗ್ಗೆ ತ್ಯಾಜ್ಯ ಸಂಗ್ರಹಿಸುವ ವಾಹನದಲ್ಲಿ ಪ್ರಚಾರ ಮಾಡುವ ಮೂಲಕ ಅರಿವು ಮೂಡಿಸಲಾಗುತ್ತಿದೆ ಎಂದು ತಿಳಿಸಿದರು.
ಗ್ರಾಮೀಣ ಜನರಿಗೆ ಡೆಂಗ್ಯೂ ಬಗ್ಗೆ ಹೆಚ್ಚಿನ ಅರಿವು ಮೂಡಿಸಬೇಕಿದೆ. ಜ್ವರ ಕಂಡು ಬಂದ ತಕ್ಷಣ ಪರೀಕ್ಷೆ ಮಾಡಿಸಿ, ಪ್ರಾರಂಭದಲ್ಲಿಯೇ ಗುಣಪಡಿಸಲು ಇಲಾಖೆ ಮುಂದಾಗಬೇಕು. ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಕಾಯಿಲೆ ಬಗ್ಗೆ ಮಾಹಿತಿ ನೀಡಬೇಕೆಂದು ಯೋಜನಾಧಿಕಾರಿ ತಿಳಿಸಿದರು.
ಪಶುವೈದ್ಯಕೀಯ ಇಲಾಖೆಯ ಮೂಲಕ ಕಾಲುಬಾಯಿ ರೋಗಕ್ಕೆ ಈಗಾಗಲೇ ಒಂದು ಬಾರಿ ಲಸಿಕೆ ನೀಡಲಾಗಿದ್ದು, ಎರಡನೇ ಲಸಿಕೆ ಮುಂದಿನ ದಿನಗಳಲ್ಲಿ ನೀಡಲಾಗುವುದು. ಜಾನುವಾರುಗಳಿಗೆ ಆವರಿಸುವ ಕಾಯಿಲೆಗಳಿಗೆ ಇಲಾಖೆಯಲ್ಲಿ ಲಸಿಕೆ ಸಂಗ್ರಹ ಇದೆ ಎಂದು ಇಲಾಖೆಯ ವೈದ್ಯಾಧಿಕಾರಿ ನಾಗರಾಜು ಸಭೆಗೆ ತಿಳಿಸಿದರು.
ಹೈನುಗಾರಿಕೆ ರೈತರ ಉಪಕಸುಬಾಗಿದ್ದು, ಜಾನುವಾರುಗಳಿಗೆ ಯಾವುದೇ ಕಾಯಿಲೆ ಬಾರದ ಹಾಗೆ ಮುಂಜಾಗ್ರತೆ ವಹಿಸಬೇಕು. ಸಮಯಕ್ಕೆ ಸರಿಯಾಗಿ ಚುಚ್ಚುಮದ್ದುಗಳನ್ನು ನೀಡಬೇಕು. ಪಶು ವಿಮೆಯ ಬಗ್ಗೆ ಕೃಷಿಕರಿಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿ ತಿಳಿಸಿದರು.
ತಾಲೂಕಿನಲ್ಲಿ ಶಾಲೆಯಿಂದ ಹೊರಗುಳಿದಿದ್ದ ೧೪ ವಿದ್ಯಾರ್ಥಿಗಳ ಪೈಕಿ ಈರ್ವರನ್ನು ಮತ್ತೆ ಕರೆತರುವ ಕೆಲಸವಾಗಿದೆ. ಉಳಿದ ೧೨ ವಿದ್ಯಾರ್ಥಿಗಳ ವಿಳಾಸ ಸರಿಯಾಗಿ ತಿಳಿಯದ ಕಾರಣ ಸಂಬAಧಿಸಿದ ಶಿಕ್ಷಕರು ವಿಳಾಸ ಪತ್ತೆಗೆ ಪ್ರಯತ್ನಿಸುತ್ತಿದ್ದಾರೆ ಎಂದು ಬಿಇಓ ಭಾಗ್ಯಮ್ಮ ಮಾಹಿತಿ ನೀಡಿದರು.
ಎಲ್ಲ ಶಾಲೆಗಳಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಹಾಗೂ ಸಿ.ಸಿ. ಕ್ಯಾಮೆರಾ ಅಳವಡಿಸಿಕೊಳ್ಳಲು ಕ್ರಮ ವಹಿಸಬೇಕೆಂದು ಯೋಜನಾಧಿಕಾರಿ ಸೂಚಿಸಿದರು.
ಜಲ ಜೀವನ್ ಮಿಷನ್ ಯೋಜನೆಯಲ್ಲಿ ತಾಲೂಕಿನಲ್ಲಿ ೨೪೭ ಕುಡಿಯುವ ನೀರಿನ ಯೋಜನೆಗಳನ್ನು ಹಮ್ಮಿಕೊಂಡಿದ್ದು, ಅದರಲ್ಲಿ ೨೦೨ ಕಾಮಗಾರಿಗಳು ಮುಗಿದು ಜನರಿಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಉಳಿದವುಗಳನ್ನು ಡಿಸೆಂಬರ್ ತಿಂಗಳಿನೊಳಗೆ ಮುಗಿಸಲಾಗುವುದು ಎಂದು ಜಿ.ಪಂ. ಅಭಿಯಂತರ ವಿರೇಂದ್ರ ತಿಳಿಸಿದರು. ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ, ಶಿಶು ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಕೃಷಿ ಸೇರಿದಂತೆ ವಿವಿಧ ಇಲಾಖಾಧಿಕಾರಿಗಳು ಹಾಜರಿದ್ದು, ತಮ್ಮ ಇಲಾಖೆಯ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ವೇದಿಕೆಯಲ್ಲಿ ಕಾರ್ಯನಿರ್ವಹಣಾಧಿಕಾರಿ ಕೆ.ಪಿ. ವೀರಣ್ಣ ಇದ್ದರು.