ವೀರಾಜಪೇಟೆ, ಜು. ೩: ಕಳೆದ ಒಂದು ವಾರಗಳಿಂದ ನಿರಂತರವಾಗಿ ಮಳೆ ಸುರಿದ ಹಿನ್ನೆಲೆ ವೀರಾಜಪೇಟೆ ತಾಲೂಕಿನ ಕೆದಮುಳ್ಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರು ರಸ್ತೆ ಜಂಕ್ಷನ್ ಮೂಲಕ ತೋರ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆ ಮದ್ಯಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ.
ಮುಖ್ಯ ರಸ್ತೆಯ ಪುತ್ತಮಕ್ಕಿ ಸೇತುವೆ ಬಳಿಯಿಂದ ತೆರ್ಮೆಮೊಟ್ಟೆ ಎಂಬಲ್ಲಿಗೆ ತೆರಳುವ ಮಾರ್ಗದವರೆಗೆ ಈ ಹಿಂದೆ ಕಾಂಕ್ರಿಟ್ ರಸ್ತೆ ನಿರ್ಮಾಣ ಮಾಡಲಾಗಿತ್ತು. ನಿರಂತರವಾಗಿ ಸುರಿದ ಮಳೆಯ ಕಾರಣ ರಸ್ತೆಯ ಕೆಳಭಾಗ ಭೂಮಿಯಲ್ಲಿ ಅತಿಯಾದ ನೀರಿನ ಹರಿವು ಉಂಟಾದ್ದರಿAದ ಕಾಂಕ್ರಿಟ್ ರಸ್ತೆಗೆ ನಿರ್ಮಿಸಲಾದ ಸ್ಲಾಬ್ ಮದ್ಯದಲ್ಲಿ ಬಿರುಕು ಕಾಣಿಸಿಕೊಂಡಿದೆ. ಅಲ್ಲದೆ ರಸ್ತೆ ಬದಿಯ ಚರಂಡಿ ಇರುವ ಭಾಗದ ಮಣ್ಣು ಕುಸಿಯುವ ಹಂತದಲ್ಲಿದೆ. ಇದೇ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಸ್ಥಳೀಯ ಯುವಕರು ಬಿರುಕು ಬಿಟ್ಟ ಸ್ಥಳಕ್ಕೆ ಕೊಂಬೆಗಳನ್ನು ಹಾಕಿ ಸವಾರರಿಗೆ ಅಪಾಯದ ಸೂಚನೆ ನೀಡಿದ್ದಾರೆ.