ಮಡಿಕೇರಿ, ಜು. ೩: ಲೋಕಸಭಾ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ‘ಸಮಾಜದಲ್ಲಿ ಹಿಂದುತ್ವ ಹಿಂಸೆÀ, ದ್ವೇಷವನ್ನು ಪ್ರಚೋದಿಸುತ್ತಿದೆ’ ಎಂಬ ಮಾತುಗಳನ್ನು ಲೋಕಸಭೆಯ ಕಲಾಪದಲ್ಲಿ ಹೇಳುವ ಮೂಲಕ ಸಹಸ್ರಾರು ಹಿಂದೂಗಳ ಭಾವನೆಯನ್ನು ಕೆರಳಿಸಿದ್ದಾರೆ ಎಂದು ಮಾಜಿ ಶಾಸಕ ಕೆ.ಜಿ. ಬೋಪಯ್ಯ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಂಟಿ ಅಧಿವೇಶನ ಉದ್ದೇಶಿಸಿ ರಾಷ್ಟçಪತಿ ದ್ರೌಪದಿ ಮುರ್ಮು ಭಾಷಣದ ಮೇಲಿನ ವಂದನಾ ನಿರ್ಣಯ ಚರ್ಚೆಯಲ್ಲಿ ರಾಹುಲ್ ಮಾತನಾಡುವ ಸಂದರ್ಭ ಹಿಂದೂ ಸಮಾಜದ ಭಾವನೆಯನ್ನು ಕೆರಳಿಸಿದ್ದಾರೆ. ಸರಕಾರದ ನ್ಯೂನ್ಯತೆ, ಮುಂದಿನ ಕಾರ್ಯಯೋಜನೆಗಳು, ಟೀಕೆ-ಸಲಹೆಗಳನ್ನು ಮಾಡಲು ವಿಪಕ್ಷಗಳಿಗೆ ಮುಕ್ತ ಅವಕಾಶವಿದೆ. ರಾಹುಲ್ ಬಾಲಿಶ ಹೇಳಿಕೆ ಮೂಲಕ ಸಮಾಜದ ಸ್ವಾಸ್ಥö್ಯ ಕದಡುವ ಕೆಲಸಕ್ಕೆ ಕೈ ಹಾಕಿದ್ದಾರೆ. ಹಿಂದೂ ಧರ್ಮವನ್ನು ಟೀಕೆ ಮಾಡಲು ಸದನವನ್ನು ವೇದಿಕೆ ಮಾಡಿಕೊಂಡಿರುವುದು ಖಂಡನೀಯ ಎಂದು ಕಿಡಿಕಾರಿದರು.

೧೦ ವರ್ಷಗಳ ನಂತರ ಕಾಂಗ್ರೆಸ್‌ಗೆ ವಿಪಕ್ಷ ನಾಯಕ ಸ್ಥಾನ ದೊರೆತಿದೆ. ಇದನ್ನು ಉಪಯೋಗಿಸಿಕೊಳ್ಳಬೇಕಾದ ರಾಹುಲ್ ಗಾಂಧಿ ಹಿಂದೂ ಧರ್ಮದ ಬಗ್ಗೆ ಕೀಳುಮಟ್ಟದ ಮಾತುಗಳನ್ನಾಡಿ ಭಾವನೆಗೆ ಧಕ್ಕೆ ತಂದಿದ್ದಾರೆ. ಇದು ಜನರಿಗೆ ನೋವು ತಂದಿದೆ. ಅವರು ಹಿಂದೂಗಳು ಹಾಗೂ ದೇಶದ ಜನತೆಯ ಕ್ಷಮೆಯಾಚಿಸಬೇಕೆಂದು ಆಗ್ರಹಿಸಿದರು.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದ ಅವ್ಯವಹಾರ ಪ್ರಕರಣದ ಸಮಗ್ರ ತನಿಖೆಯಾಗಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕರಣವನ್ನು ಸಿಬಿಐಗೆ ವಹಿಸಬೇಕೆಂದು ಒತ್ತಾಯಿಸಿದ ಅವರು, ಕರ್ನಾಟಕ ವಿಧಾನಸಭಾ ವಿಪಕ್ಷ ನಾಯಕ ಆರ್. ಅಶೋಕ್ ತಮ್ಮ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುತ್ತಿದ್ದಾರೆ. ಅವರ ಸ್ಥಾನ ಬದಲಾವಣೆ ವದಂತಿ ಸುಳ್ಳು ಎಂದರು.

ಚುನಾವಣಾ ಗ್ಯಾರಂಟಿ ಅಷ್ಟೆ

ಚುನಾವಣಾ ಪೂರ್ವ ನೀಡಿದ ಪಂಚ ಗ್ಯಾರಂಟಿಗಳು ಗೆಲುವಿಗಾಗಿ ನೀಡಿದ ಗ್ಯಾರಂಟಿ ಅಷ್ಟೆ. ಇದರಿಂದ ರಾಜ್ಯದ ಆರ್ಥಿಕ ಪರಿಸ್ಥಿತಿ ಬುಡಮೇಲಾಗಿದೆ.

(ಮೊದಲ ಪುಟದಿಂದ) ಹೀಗೆ ಮುಂದುವರೆದರೆ ಸರಕಾರಿ ನೌಕರರಿಗೆ ಸಂಬಳ ನೀಡುವುದು ಕಷ್ಟದಾಯಕ ಎಂದು ಬೋಪಯ್ಯ ವಾಗ್ದಾಳಿ ನಡೆಸಿದರು.

ಈ ಹಿಂದೆಯೇ ಇದೊಂದು ಚುನಾವಣಾ ಗ್ಯಾರಂಟಿ ಎಂದು ಬಿಜೆಪಿ ಹೇಳಿತ್ತು. ನಿರೀಕ್ಷಿತ ಅಭಿವೃದ್ಧಿ ಕಾಣುತ್ತಿಲ್ಲ ಎಂದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ನಾಪಂಡ ರವಿಕಾಳಪ್ಪ ಮಾತನಾಡಿ, ರಾಹುಲ್ ಗಾಂಧಿ ಶಿವ ದೇವರ ಫೋಟೋ ಹಿಡಿದು ಶಿವನ ಕೊರಳಲ್ಲಿರುವ ಹಾವು, ಕೈಯಲ್ಲಿರುವ ತ್ರಿಶೂಲ ಹಿಂಸೆಯನ್ನು ಪ್ರಚೋದಿಸುತ್ತದೆ ಎಂದು ಹೇಳಿರುವುದು ಸರಿಯಲ್ಲ. ಯಾವುದೇ ಚಿಂತನೆಗಳಿಲ್ಲದೆ ಮಾತನಾಡುವ ರಾಹುಲ್ ನಾಯಕತ್ವ ಒಪ್ಪಿಕೊಂಡಿರುವುದು ಹಾಸ್ಯಾಸ್ಪದ. ಧರ್ಮದ ಮೇಲೆ ಅಭಿಮಾನ ಇಲ್ಲದಿದ್ದರೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಲಿ ಎಂದು ಆಗ್ರಹಿಸಿದ ಅವರು, ವಿದೇಶದಲ್ಲೂ ಭಾರತವನ್ನು ತೆಗಳುವ ಕೆಲಸ ರಾಹುಲ್‌ರಿಂದ ಆಗಿದೆ ಎಂದು ಅತೃಪ್ತಿ ವ್ಯಕ್ತಪಡಿಸಿದರು.

ಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಉಪಾಧ್ಯಕ್ಷ ಮನು ಮಂಜುನಾಥ್, ಜಿಲ್ಲಾ ವಕ್ತಾರ ಬಿ.ಕೆ. ಅರುಣ್ ಕುಮಾರ್, ಮಾಧ್ಯಮ ಜಿಲ್ಲಾ ಪ್ರಮುಖ ಶಜಿಲ್ ಪಿ. ಕೃಷ್ಣ ಹಾಜರಿದ್ದರು.