ಚೆಯ್ಯಂಡಾಣೆ, ಜು. ೩: ಸ್ಥಳೀಯ ನರಿಯಂದಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೋಟಗಳಲ್ಲಿ ಬೀಡು ಬಿಟ್ಟು ಉಪಟಳ ನೀಡುತಿದ್ದ ಕಾಡಾನೆಯನ್ನು ಕಾಡಿಗೆ ಓಡಿಸುವ ಕಾರ್ಯಾಚರಣೆ ಮಂಗಳವಾರ ಹಾಗೂ ಬುಧವಾರ ಅರಣ್ಯ ಇಲಾಖೆಯಿಂದ ಹಮ್ಮಿಕೊಳ್ಳಲಾಗಿತ್ತು. ನಿನ್ನೆ ಕರಡ ಹಾಗೂ ಪಾಲಂಗಾಲ ವ್ಯಾಪ್ತಿಯ ತೋಟಗಳಲ್ಲಿದ್ದ ೬ ಕಾಡಾನೆಯನ್ನು ಅರಣ್ಯ ಇಲಾಖೆ ಕಾಡಿಗಟ್ಟುವಲ್ಲಿ ಯಶಸ್ವಿಯಾದರೆ ಇಂದು ಚೆಯ್ಯಂಡಾಣೆ, ನರಿಯಂದಡ, ಕೊಕೇರಿ, ಚೇಲಾವರದ ತೋಟಗಳಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿದರೂ, ಯಾವುದೇ ಆನೆ ಪತ್ತೆಯಾಗಿಲ್ಲ ಎಂದು ಅರಣ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವೀರಾಜಪೇಟೆ ವಲಯ ಅರಣ್ಯಾಧಿಕಾರಿ ಕಳ್ಳೀರ ದೇವಯ್ಯ ಹಾಗೂ ಎಸಿಎಫ್ ನೆಹರು ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಡಿಆರ್‌ಎಫ್‌ಒ ಆನಂದ್, ಇಟಿಎಫ್ ಡಿಆರ್‌ಎಫ್‌ಒ ಪ್ರಶಾಂತ್ ಆರ್‌ಆರ್‌ಟಿ ಸಿಬ್ಬಂದಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.