ಕಣಿವೆ, ಜು. ೩: ಹೆಬ್ಬಾಲೆ ಗ್ರಾಮ ವ್ಯಾಪ್ತಿಯಲ್ಲಿ ರೈತರು ಬೆಳೆಯುವ ಪ್ರಮುಖ ಬೆಳೆ ಹಸಿಮೆಣಸಿನ ಕಾಯಿ ದರ ಕುಸಿತಗೊಂಡಿದೆ. ಇದರಿಂದಾಗಿ ರೈತರಿಗೆ ಆರ್ಥಿಕವಾಗಿ ಸಂಕಷ್ಟ ಎದುರಾಗಿದೆ. ಜೂನ್ ತಿಂಗಳ ಮೊದಲ ವಾರದಲ್ಲಿ ಕೆ.ಜಿ.ಯೊಂದಕ್ಕೆ ೭೫ ರೂ.ಗಳಿಂದ ೮೦ ರೂ. ಗಳಿದ್ದ ಹಸಿಮೆಣಸಿನ ಕಾಯಿಗೆ ಇದೀಗ ಕೇವಲ ೨೦ ರಿಂದ ೨೨ ರೂಗಳಿಗೆ ಕುಸಿತ ಕಂಡಿದ್ದು ಬೆಲೆ ಇಳಿಕೆಯಿಂದಾಗಿ ರೈತರು ಜರ್ಜರಿತರಾಗಿದ್ದಾರೆ.
ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮರೂರು, ಚಿನ್ನೇನಹಳ್ಳಿ, ಹಳಗೋಟೆ, ಆರನೇ ಹೊಸಕೋಟೆ, ಹುಲುಸೆ, ಹಕ್ಕೆ, ಕಣಿವೆ ಮೊದಲಾದ ಗ್ರಾಮಗಳ ರೈತರು ಪೂರ್ವ ಮುಂಗಾರು ಹಾಗೂ ಮುಂಗಾರು ಹಂಗಾಮಿನ ದಿನಗಳಲ್ಲಿ ಬೆಳೆಯುವ ಹಸಿಮೆಣಸಿನ ಕಾಯಿಯನ್ನು ವರ್ತಕರು ಹೆಬ್ಬಾಲೆಯ ಬನಶಂಕರಿ ದೇವಾಲಯದ ವೃತ್ತಕ್ಕೆ ಧಾವಿಸಿ ಬಂದು ಖರೀದಿಸುತ್ತಾರೆ.
ಆದರೆ, ಮಧ್ಯವರ್ತಿಗಳು ಹಾಗೂ ದಲ್ಲಾಳಿಗಳ ಬಾಧೆಯಿಂದಾಗಿ ಕಷ್ಟ ಪಟ್ಟು ಹಸಿಮೆಣಸು ಬೆಳೆಯುವ ರೈತರು ನಷ್ಟ ಅನುಭವಿಸುವಂತಾಗಿದೆ ಎಂದು ಸ್ವತಃ ಮರೂರು ರೈತ ಮಹೇಶ್ ಹಾಗೂ ಚಿದಂಬರ ‘ಶಕ್ತಿ'ಯೊಂದಿಗೆ ಅಳಲು ತೋಡಿಕೊಂಡರು. ಈಗ ಬಿತ್ತನೆ ಬೀಜ, ರಸಾಯನಿಕ ಗೊಬ್ಬರ, ಔಷಧಿ ಹೀಗೆ ಪ್ರತಿಯೊಂದಕ್ಕೂ ಬೆಲೆ ಹೆಚ್ಚಳವಾಗಿದೆ. ಕಾರ್ಮಿಕರ ಲಭ್ಯತೆಯಂತೂ ದೂರದ ಮಾತು. ಇಂತಹ ಪರಿಸ್ಥಿತಿಯಲ್ಲಿ ಕಷ್ಟಪಟ್ಟು ಹಸಿಮೆಣಸು ಗಿಡನೆಟ್ಟು ಬೆಳೆಸಿ ಫಲ ತೆಗೆಯುವಲ್ಲಿ ವಿಪರೀತ ಹಣ ವ್ಯಯವಾಗುತ್ತದೆ.
ಹೀಗೆ ಬೆವರು ಬಸಿದು, ಹಣ ವ್ಯಯಿಸಿ ತೆಗೆದ ಫಸಲನ್ನು ಮಾರುಕಟ್ಟೆಗೆ ನೇರವಾಗಿ ಒಯ್ದು ಮಾರಾಟ ಮಾಡುವಂತಹ ವ್ಯವಸ್ಥೆಯಿಲ್ಲದ ಕಾರಣ ಮಧ್ಯವರ್ತಿಗಳು ಹಾಗೂ ದಲ್ಲಾಳಿಗಳು ಕೇಳಿದ ಹಣಕ್ಕೆ ರೈತರು ಮಾರಾಟ ಮಾಡುವಂತಹ ದುಸ್ಥಿತಿ ನಿರ್ಮಾಣವಾಗಿದೆ.
ನಮ್ಮ ಕಣ್ಣೆದುರೇ ನಮ್ಮಿಂದ ಅತ್ಯಂತ ಕನಿಷ್ಟ ದರಕ್ಕೆ ಖರೀದಿಸಿದ ಫಸಲನ್ನು ಗರಿಷ್ಠ ದರಕ್ಕೆ ಮಾರಾಟ ಮಾಡಿ ಕೆಲವೇ ಕ್ಷಣಗಳಲ್ಲಿ ಕೈತುಂಬ ಲಾಭ ಗಳಿಸಿ ಮನೆಗೆ ತೆರಳುತ್ತಿದ್ದಾರೆ.
ರೈತರಿಂದ ಮನಬಂದ ದರಕ್ಕೆ ಖರೀದಿಸುವ ಮಧ್ಯವರ್ತಿಗಳು ಅಧಿಕ ಲಾಭಕ್ಕೆ ದೂರದ ತಮಿಳುನಾಡು, ಕೇರಳ, ಮಂಗಳೂರು ಮತ್ತಿತರೆಡೆಗಳಿಗೆ ರಫ್ತು ಮಾಡುತ್ತಿದ್ದಾರೆ.
ನಾವು ಬಂಡವಾಳ ಹಾಕಿ, ಬೆವರಿಳಿಸಿ ತಿಂಗಳುಗಟ್ಟಲೆ ಕಾದು ಫಸಲು ತೆಗೆದರೂ ನಮಗೆ ಮಾಡಿದ ಖರ್ಚು ಕೂಡ ಬರ್ತಿಲ್ಲವಲ್ಲ ಎಂದು ಅಸಮಾಧಾನ ಹಾಗೂ ಸಂಕಟ ವ್ಯಕ್ತಪಡಿಸುತ್ತಿದ್ದಾರೆ ಇಲ್ಲಿನ ಇನ್ನಷ್ಟು ಕೃಷಿಕರು.
ಕೃಷಿಕರ ನೆರವಿಗೆ ರೈತ ಸಂಘಟನೆಗಳು, ಇಲಾಖೆಗಳು ಬಾರದೇ ಅಸಂಘಟಿತ ಬಡ ರೈತರು ಏನೂ ಮಾಡಲಾಗದ ಅಸಹಾಯಕತೆಯಲ್ಲಿ ದಿನಗಳೆಯುತ್ತಿದ್ದಾರೆ.
- ಕೆ.ಎಸ್. ಮೂರ್ತಿ