ಮಡಿಕೇರಿ, ಜು. ೨: ಗಾಂಧಿ ಯುವಕ ಸಂಘದ ವತಿಯಿಂದ ಕಂಡಕರೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೋಟ್ ಪುಸ್ತಕ ವಿತರಣೆ ಕಾರ್ಯಕ್ರಮ ನಡೆಯಿತು.

ಗ್ರಾ.ಪಂ. ಸದಸ್ಯ ತೀರ್ಥಕುಮಾರ್ ಭಾಗವಹಿಸಿ ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಬಹುತೇಕರಿಗೆ ಇಂಗ್ಲಿಷ್ ವ್ಯಾಮೋಹ ದಿಂದ ಸರ್ಕಾರಿ ಶಾಲೆಗಳ ಬಗ್ಗೆ ಕೀಳರಿಮೆ ಉಂಟಾಗಿದೆ. ಮಕ್ಕಳನ್ನು ಸರ್ಕಾರಿ ಶಾಲೆಗೆ ಸೇರಿಸಲು ಹಿಂದೇಟು ಹಾಕುತ್ತಿದ್ದಾರೆ.

ಕಂಡಕರೆಯ ಗಾಂಧಿ ಯುವಕ ಸಂಘವು ಸಾಮಾಜಿಕ ಚಟುವಟಿಕೆಗಳ ಮೂಲಕ ಸ್ಥಳೀಯ ಸರ್ಕಾರಿ ಶಾಲೆಗಳನ್ನು ಪ್ರೋತ್ಸಾಹಿಸುವ ಕೆಲಸ ಮಾಡುತ್ತಿರುವುದು ಶ್ಲಾಘನೀಯ ಕೆಲಸವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಗಾಂಧಿ ಯುವಕ ಸಂಘದ ಸ್ಥಾಪಕ ಇಸ್ಮಾಯಿಲ್ ಕಂಡಕರೆ ಮಾತಾನಾಡಿ, ಕಂಡಕರೆ ಸರ್ಕಾರಿ ಶಾಲೆಯನ್ನು ಅಭಿವೃದ್ಧಿಪಡಿಸಲು ಸಂಘದಿAದ ಹಲವಾರು ಯೋಜನೆ ಗಳನ್ನು ಕೈಗೊಂಡಿದ್ದೇವೆ. ಶಿಕ್ಷಕರು ಶಾಲೆಯ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯೋಪಾಧ್ಯಾಯ ಧನುಪ್ರಕಾಶ್ ವಹಿಸಿದ್ದರು. ಈ ಸಂದರ್ಭ ಗಾಂಧಿ ಯುವಕ ಸಂಘದ ಹಿರಿಯ ಉಪಾಧ್ಯಕ್ಷ ಸವಾದ್ ಉಸ್ಮಾನ್, ಕಾರ್ಯದರ್ಶಿ ಶಿಬಿಲ್ ಕೆ.ಜೆ., ಶಿಕ್ಷಕರಾದ ಸುಜಿತ್, ವಿನೋದ ಇದ್ದರು. ಸಹಶಿಕ್ಷಕ ರತೀಶ್ ಟಿ.ಎನ್. ಸ್ವಾಗತಿಸಿ, ನಿರೂಪಿಸಿದರು.