ಮಡಿಕೇರಿ, ಜು. ೨: ತಾಳತ್ತಮನೆಯ ಅಂಗಡಿಯಲ್ಲಿ ನಡೆದ ಕಳ್ಳತನ ಪ್ರಕರಣಕ್ಕೆ ಸಂಬAಧಿಸಿದ ಆರೋಪಿಯನ್ನು ಬಂಧಿಸುವಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದಾರೆ. ನಾಲಾಡಿ ನಿವಾಸಿ ಕೆ.ಸಿ. ಅಶೋಕ (೩೫) ಬಂಧಿತ ಆರೋಪಿ. ಜೂ. ೫ ರಂದು ತಾಳತ್ತಮನೆಯ ಭರತ್ ಎಂಬವರ ಅಂಗಡಿಯಲ್ಲಿ ರೂ. ೧೦ ಸಾವಿರ ನಗದು, ೫೨ ಗ್ರಾಂ ತೂಕದ ಚಿನ್ನಾಭರಣ ಹಾಗೂ ಅಂಗಡಿ ಮುಂಭಾಗ ನಿಲ್ಲಿಸಿದ್ದ ಬೈಕ್ ಕಳವಾಗಿತ್ತು. ಈ ಸಂಬAಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಡಿವೈಎಸ್‌ಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ ಪೊಲೀಸ್ ಇನ್ಸ್ಪೆಕ್ಟರ್ ಉಮೇಶ್, ಪಿ.ಎಸ್.ಐ. ವೆಂಕಟ್ ಗ್ರಾಮಾಂತರ ಠಾಣಾ ಸಿಬ್ಬಂದಿ, ತಾಂತ್ರಿಕ ಸಿಬ್ಬಂದಿಯವರ ವಿಶೇಷ ತಂಡ ರಚಿಸಿ ತನಿಖೆ ಕೈಗೆತ್ತಿಕೊಂಡ ಆರೋಪಿಯನ್ನು ಬಂಧಿಸಿ ಕಳ್ಳತನ ಮಾಡಿದ್ದ ೨೧.೩ ಗ್ರಾಂ ಚಿನ್ನಾಭರಣ ಹಾಗೂ ಬೈಕನ್ನು ವಶಪಡಿಸಿ ಕೊಳ್ಳಲಾಗಿದೆ. ತನಿಖೆ ವೇಳೆ ಆರೋಪಿ ಅಶೋಕ ಬೆಟ್ಟಗೇರಿಯಲ್ಲಿ ಅಂಗಡಿ ಕಳ್ಳತನ ಮಾಡಿರುವುದು, ಸಿದ್ದಾಪುರ ಸಮೀಪದ ಅರೆಕಾಡು ಗ್ರಾಮದ ಚಾಮುಂಡೇಶ್ವರಿ ದೇವಾಲಯದಲ್ಲಿ ಹುಂಡಿ ಕಳವು ಮಾಡಿರುವುದು ಬೆಳಕಿಗೆ ಬಂದಿದೆ.