ಕಣಿವೆ, ಜು. ೧: ಕೃಷಿ ಭೂಮಿಯ ಮಣ್ಣು ಮಳೆಯ ನೀರಿನಿಂದ ಕೊಚ್ಚಿ ಹರಿದು ಬಂದು ಹೆದ್ದಾರಿಯಲ್ಲಿ ಆವರಿಸಿದರೂ ಕೂಡ ಲೋಕೋಪಯೋಗಿ ಇಲಾಖೆ ಕ್ರಮವಹಿಸದೇ ಮೌನ ವಹಿಸಿರುವ ಬಗ್ಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುಶಾಲನಗರ ಕೂಡಿಗೆ ರಾಜ್ಯ ಹೆದ್ದಾರಿಯ ಕೂಡ್ಲೂರು ಮಾವಿನ ತೋಪಿನ ಬಳಿ ಕೃಷಿಕರೊಬ್ಬರು ಶುಂಠಿ ಬೆಳೆ ಕೈಗೊಂಡಿದ್ದು, ಹೊಲದಲ್ಲಿ ಅಳವಡಿಸಿರುವ ನೀರು ಕಾಲುವೆಗಳನ್ನು ಹೆದ್ದಾರಿಗೆ ಹರಿಯಬಿಟ್ಟ ಕಾರಣ ಮಳೆಯ ನೀರಿಗೆ ಕೊಚ್ಚಿ ಬಂದು, ರಾಶಿ ರಾಶಿ ಮಣ್ಣು ಹೆದ್ದಾರಿಯಲ್ಲಿ ನಿಂತು ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದೆ.
ಇದರಿಂದಾಗಿ ಕೂಡಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇತ್ತ ಗಮನಿಸಿ ಹೆದ್ದಾರಿಯಲ್ಲಿನ ಮಣ್ಣನ್ನು ತೆರವುಗೊಳಿಸಬೇಕಿದೆ.
ಈಗಾಗಲೇ ಇಲ್ಲಿ ಹರಡಿರುವ ರಾಶಿಗಟ್ಟಲೇ ಮಣ್ಣಿನ ಕೆಸರಿನಿಂದಾಗಿ ಅನೇಕ ವಾಹನಗಳು ಇಲ್ಲಿ ಅವಘಡಕ್ಕೆ ತುತ್ತಾಗುತ್ತಿವೆ. ಪಾದಚಾರಿಗಳ ಸಂಚಾರಕ್ಕೂ ಅನಾನುಕೂಲವಾಗಿದೆ ಎಂದು ಕೂಡ್ಲೂರು ಗ್ರಾಮದ ಹೇಮಂತ್ ಹಾಗೂ ಅರುಣಕುಮಾರ್ ಅವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದು, ಲೋಕೋಪಯೋಗಿ ಇಲಾಖೆಯ ಹಿರಿಯ ಅಧಿಕಾರಿಗಳು ಇಲ್ಲಿ ಆಗಮಿಸಿ ಸ್ಥಳ ಪರಿಶೀಲಿಸಬೇಕೆಂದು ಆಗ್ರಹಿಸಿದ್ದಾರೆ.
-ಕೆ.ಎಸ್. ಮೂರ್ತಿ