ಮಡಿಕೇರಿ, ಜೂ. ೨೯: ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ೨ ಮೆಟ್ರಿಕ್ ನಂತರದ ವಿದ್ಯಾರ್ಥಿ ವಸತಿ ನಿಲಯಗಳ ಸ್ಥಾಪನೆಗೆ ರಾಜ್ಯ ಸರಕಾರ ಸಮ್ಮತಿ ಸೂಚಿಸಿದ್ದು, ಸದ್ಯದಲ್ಲಿಯೇ ಈ ಸಂಬAಧದ ಪ್ರಕ್ರಿಯೆಗಳು ಆರಂಭಗೊಳ್ಳಲಿವೆ.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ಈ ವಸತಿ ನಿಲಯಗಳು ಕಾರ್ಯ ನಿರ್ವಹಿಸಲಿವೆೆ. ೨೦೨೪-೨೫ನೇ ಸಾಲಿನ ಆಯವ್ಯಯದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದಲ್ಲಿ ೧೫೦ ವಸತಿ ನಿಲಯ ನಿರ್ಮಾಣದ ಘೋಷಣೆ ಮಾಡಿದ್ದರು. ಅದರ ಭಾಗವಾಗಿ ಜಿಲ್ಲೆಯ ಮಡಿಕೇರಿಯಲ್ಲಿ ಪಿಯುಸಿ ನಂತರದ ಬಾಲಕ ಹಾಗೂ ಬಾಲಕಿಯರ ಪ್ರತ್ಯೇಕ ವಸತಿ ನಿಲಯ ನಿರ್ಮಾಣಕ್ಕೆ ಇದೀಗ ಒಪ್ಪಿಗೆ ದೊರೆತಿದೆ. ವೀರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಹಾಗೂ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಅವರು ಸರಕಾರದ ಗಮನ ಸೆಳೆದು ಮಡಿಕೇರಿಗೆ ೨ ವಸತಿ ನಿಲಯಗಳ ಮಂಜೂರಾತಿಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ ಕುರಿತು ‘ಶಕ್ತಿ’ಯೊಂದಿಗೆ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎನ್. ಮಂಜುನಾಥ್ ಮಾತನಾಡಿ, ಬಜೆಟ್‌ನಲ್ಲಿ ವಸತಿ ನಿಲಯಗಳ ನಿರ್ಮಾಣ ಘೋಷಣೆಯಾಗಿತ್ತು. ಶಾಸಕರುಗಳು, ಉನ್ನತಾಧಿಕಾರಿಗಳು ಈ ಸಂಬAಧ ಸರಕಾರದ ಗಮನ ಸೆಳೆದ ಪರಿಣಾಮ ಜಿಲ್ಲೆಗೆ ವಸತಿ ನಿಲಯ ಮಂಜೂರಾತಿ ಯಾಗಿದೆ. ಮಡಿಕೇರಿಯಲ್ಲಿ ೧೦೦ ವಿದ್ಯಾರ್ಥಿಗಳು ತಂಗಲು ಸಾಮರ್ಥ್ಯವಿರುವ ಬಾಲಕರ ಹಾಗೂ ಬಾಲಕಿಯರ ಪ್ರತ್ಯೇಕ ಹಾಸ್ಟೆಲ್ ನಿರ್ಮಾಣವಾಗಲಿದೆ. ಈ ಸಂಬAಧ ಜಾಗ ಗುರುತಿಸುವ ಕೆಲಸ ನಡೆಸಲಾಗುವುದು. ತಾತ್ಕಾಲಿಕವಾಗಿ ಬಾಡಿಗೆ ಕಟ್ಟಡದಲ್ಲಿ ವಸತಿ ನಿಲಯಗಳ ಕಾರ್ಯಾರಂಭಕ್ಕೂ ಪ್ರಯತ್ನ ಸಾಗಿದೆ. ಉನ್ನತಾಧಿಕಾರಿಗಳು, ಜನಪ್ರತಿನಿಧಿಗಳೊಂದಿಗೆ ಚರ್ಚಿಸಿ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿಯೇ ಬಾಡಿಗೆ ಕಟ್ಟಡದಲ್ಲಿ ವಸತಿ ನಿಲಯ ಸ್ಥಾಪನೆಯಾಗುವ ನಿರೀಕ್ಷೆ ಹೊಂದಲಾಗಿದೆ. ಜಾಗ ಗುರುತಿಸಿದ ಬಳಿಕ ಸ್ವಂತ ಕಟ್ಟಡ ನಿರ್ಮಾಣ ಸಂಬAಧ ಪ್ರಸ್ತಾವನೆ, ಕ್ರಿಯಾ ಯೋಜನೆ ರೂಪಿಸಿ ಕಾರ್ಯಗತಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.

ಹಿಂದುಳಿದ ವರ್ಗಗಳ ಇಲಾಖೆಯ ವಸತಿ ನಿಲಯಗಳಲ್ಲಿ ಶೇ ೭೫ ಬಿಸಿಎಂ ವರ್ಗಕ್ಕೆ ಮೀಸಲಾಗಿರುತ್ತದೆ. ಉಳಿದ ಶೇ ೨೫ ಪರಿಶಿಷ್ಟ ಜಾತಿ, ಪಂಗಡ ವರ್ಗಕ್ಕೆ ಮೀಸಲಿಡಲಾಗುತ್ತದೆ ಎಂದು ಮಂಜುನಾಥ್ ತಿಳಿಸಿದರು. ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಸೇರಿದ ೩೮ ವಸತಿ ನಿಲಯಗಳಿದ್ದು, ಈ ಪೈಕಿ ೧೯ ಮೆಟ್ರಿಕ್ ನಂತರದ ವಸತಿ ನಿಲಯಗಳಿವೆ. ಹೊಸ ೨ ಹಾಸ್ಟೆಲ್‌ಗಳಿಂದ ಮೆಟ್ರಿಕ್ ನಂತರದ ವಸತಿ ನಿಲಯಗಳ ಸಂಖ್ಯೆ ೨೧ಕ್ಕೆ ಏರಿಕೆಯಾಗಲಿದೆ.