ಮಡಿಕೇರಿ, ಜೂ. ೨೭ : ಧೋ.. ಎಂದು ಸುರಿಯುತ್ತಿದ್ದ ಮಳೆ., ಮೈದಾನವೆಲ್ಲ ಕೆಸರುಮಯ., ಹೆಜ್ಜೆಯಿಟ್ಟರೂ ಜಾರಿ ಬೀಳುವ ಆತಂಕ., ಆದರೂ ಛಲ ಬಿಡದೆ ಓಡಬೇಕು., ಗೆಲ್ಲಬೇಕು., ದೇಶ ಸೇವೆ ಮಾಡಬೇಕೆಂಬ ಕಿಚ್ಚು ಮನದೊಳಗೆ., ಸಫಲರಾಗದೆ ಸೋತು ಕಂಗಾಲಾದ ಹತಾಶ ಮನೋಭಾವ ಮತ್ತೊಂದೆಡೆ., ಮತ್ತೊಂದು ಅವಕಾಶಕ್ಕಾಗಿ ಕಾಯುತ್ತಿರುವ ಹಠ ಇನ್ನೊಂದೆಡೆ..!

ಈ ಒಂದು ಚಿತ್ರಣ ಇಂದು ಬೆಳಿಗ್ಗೆ ಮಡಿಕೇರಿಯ ಜ.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕಂಡು ಬಂದಿತು. ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಯುವ ಜನತೆಗೆ ಭಾರತೀಯ ಸೇನೆಯಲ್ಲಿ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಜಾರಿಗೆ ತಂದಿರುವ ‘ಅಗ್ನಿವೀರ್’ ಗೆ ನೇಮಕಾತಿ ಸಂಬAಧ ಮಡಿಕೇರಿಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸೇನೆಗೆ ಆಯ್ಕೆ ಬಯಸಿ ನೂರಾರು ಮಂದಿ ಆಗಮಿಸಿದ್ದರು. ಆಯ್ಕೆ ಪ್ರಕ್ರಿಯೆಗಾಗಿ ಜಿಲ್ಲಾಡಳಿತದ ನಿರ್ದೇಶನದಂತೆ ಜಿಲ್ಲಾ ಕ್ರೀಡಾಂಗಣದಲ್ಲಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಆದರೆ, ಕಳೆದ ಎರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮೈದಾನ ಸಂಪೂರ್ಣ ಒದ್ದೆಯಾಗಿ ಕೆಸರುಮಯವಾಗಿದ್ದು, ಆಯ್ಕೆ ಪ್ರಕ್ರಿಯೆಗೆ ಪ್ರತಿಕೂಲ ವಾತಾವರಣ ಸೃಷ್ಟಿಯಾಗಿತ್ತು. ಆದರೂ ಛಲ ಬಿಡದ ಯುವ ಪಡೆ ಸುರಿಯುವ ಮಳೆ, ಗಾಳಿಗೆ ಎದೆಯೊಡ್ಡಿ ಆಯ್ಕೆ ಪ್ರಕ್ರಿಯೆಯಲ್ಲಿ ಪಾಲ್ಗೊಂಡಿತು. ಅದೃಷ್ಟವಂತ ಬೆರಳೆಣಿಕೆಯ ಮಂದಿ ಮಾತ್ರ ಇಂದಿನ ಪ್ರಕ್ರಿಯೆಯಲ್ಲಿ ಆಯ್ಕೆಯಾದರು.

೩೦೦ಕ್ಕೂ ಅಧಿಕ ಮಂದಿ..!

ಯುವ ಪೀಳಿಗೆಯಲ್ಲಿ ಸೇನೆಗೆ ಸೇರಿ ದೇಶ ಸೇವೆ ಮಾಡಬೇಕೆಂಬ ಕಿಚ್ಚು ಹೆಚ್ಚಾಗುತ್ತಿದೆ ಎಂಬುದಕ್ಕೆ ಇಂದಿನ ಸೇನಾ ಆಯ್ಕೆ ಪ್ರಕ್ರಿಯೆ ಸಾಕ್ಷಿಯಾಗಿತ್ತು. ರಾಜ್ಯದ ವಿವಿಧ ಜಿಲ್ಲೆಗಳಿಂದ ಇಂದು ೩೦೦ಕ್ಕೂ ಅಧಿಕ ಮಂದಿ ಆಯ್ಕೆ ಬಯಸಿ ಪಾಲ್ಗೊಂಡಿದ್ದರು.

ಕೊಡಗು ಜಿಲ್ಲೆ ಸೇರಿದಂತೆ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ತುಮಕೂರು, ಮಂಡ್ಯ, ಮೈಸೂರು,

(ಮೊದಲ ಪುಟದಿಂದ) ಬಳ್ಳಾರಿ, ಚಾಮರಾಜನಗರ, ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ವಿಜಯನಗರ ಜಿಲ್ಲೆಗಳಿಂದ ಅಭ್ಯರ್ಥಿಗಳು ಆಗಮಿಸಿದ್ದರು. ಮಳೆ ಇದ್ದ ಕಾರಣ ಮುಂಜಾನೆ ೪ಗಂಟೆಗೆ ಆರಂಭವಾಗಬೇಕಿದ್ದ ಆಯ್ಕೆ ಪ್ರಕ್ರಿಯೆ ತಡವಾಗಿ ಬೆಳಿಗ್ಗೆ ಎಂಟು ಗಂಟೆಗೆ ಆರಂಭವಾಯಿತು. ಮಡಿಕೇರಿಯ ಮಳೆ-ಚಳಿಗೆ ನಡುಗುತ್ತಾ ನಿಂತಿದ್ದ ಯುವಕರು ಅಂಗಿ ತೆಗೆದು ಆಯ್ಕೆ ಪ್ರಕ್ರಿಯೆಯಲ್ಲಿ ಭಾಗಿಯಾದರು. ದೇಹದಾರ್ಢ್ಯ ಪರೀಕ್ಷೆ ಬಳಿಕ ಓಟಕ್ಕೆ ನಿಂತವರಲ್ಲಿ ನಿಗದಿತ ಗುರಿಯನ್ನು ನಿಗದಿತ ಸಮಯದಲ್ಲಿ ಪೂರ್ಣಗೊಳಿಸಲಾಗದೆ ಹೆಚ್ಚಿನವರು ನಿರಾಸೆ ಅನುಭವಿಸಿದರು.

ಕೆಸರಿನಲ್ಲಿ ಹರ ಸಾಹಸ..!

ಸೇನಾ ನೇಮಕಾತಿಯಲ್ಲಿ ಪ್ರಮುಖ ಪ್ರಕ್ರಿಯೆ ಆಗಿರುವ ಓಟದ ಸ್ಪರ್ಧೆಯಲ್ಲಿ ಯಾರಿಗೂ ಸಮಯಕ್ಕೆ ಓಡಲು ಸಾಧ್ಯವಾಗಲಿಲ್ಲ. ಸೇನಾ ನಿಯಮದಂತೆ ೧.೬ಕಿ.ಮೀ.ದೂರವನ್ನು ಗ್ರೂಪ್ ಒಂದರಲ್ಲಿ ೫.೩೦ ನಿಮಿಷದಲ್ಲಿ ಪೂರ್ಣಗೊಳಿಸಬೇಕು. ಗ್ರೂಪ್ ಎರಡರಲ್ಲಿ ೫.೩೧ರಿಂದ ೫.೪೫ರ ಒಳಗಡೆ ಪೂರ್ಣಗೊಳಿಸಬೇಕು. ಅಷ್ಟರೊಳಗಡೆ ಪೂರೈಸಿದರೆ ಅವರುಗಳಿಗೆ ೬೦ ಅಂಕ ನೀಡಲಾಗುತ್ತದೆ. ಆದರೆ, ಮೈದಾನ ಹಾಗೂ ಟ್ರಾö್ಯಕ್ ಸಂಪೂರ್ಣ ಕೆಸರುಮಯವಾಗಿದ್ದರಿಂದ ಯಾರಿಗೂ ಓಟ ಪೂರೈಸಲು ಸಾಧ್ಯವಾಗಲಿಲ್ಲ. ಎಲ್ಲರೂ ನಿಗದಿತ ಸಮಯವನ್ನು ಮೀರಿ ಆರರಿಂದ ಏಳು ನಿಮಿಷ ತೆಗೆದುಕೊಂಡಿದ್ದರಿAದ ಮುಂದಿನ ಪ್ರಕ್ರಿಯಗೆ ಆಯ್ಕೆಯಾಗಲು ಹಿನ್ನಡೆಯುಂಟಾಯಿತು.

ಕೊಠಡಿಗಳಿಗೆ ಹುಡುಕಾಟ..!

ಈ ನಡುವೆ ಇಂದಿನ ಆಯ್ಕೆ ಪ್ರಕ್ರಿಯೆಯನ್ನು ಮುಂದೂಡಿರುವದರಿAದ ದೂರದ ಜಿಲ್ಲೆಗಳಿಂದ ಬಂದಿರುವ ಅಭ್ಯರ್ಥಿಗಳು ವಾಪಸ್ ಊರಿಗೆ ತೆರಳಿ ಮತ್ತೆ ಬರಲು ಕಷ್ಟವಾಗುವದರಿಂದ ಇಲ್ಲಿಯೇ ಎರಡು ದಿನಗಳ ಕಾಲ ತಂಗುವ ಸಲುವಾಗಿ ಮಡಿಕೇರಿಯಲ್ಲಿ ಕೊಠಡಿಗಳ ಹುಡುಕಾಟದಲ್ಲಿ ತೊಡಗಿಕೊಂಡಿರುವದು ಕಂಡುಬAದಿತು. ಲಾಡ್ಜ್, ಛತ್ರ, ಸಮಾಜಗಳಿಗೆ ಅಲೆದಾಡುತ್ತಿರುವದು ಮಳೆಯ ಸಿಂಚನದ ನಡುವೆ ಗೋಚರಿಸಿತು. ‘ಊರಿಗೆ ಹೊಂಟ್ರೆ ತಲ್ಪೋದು ಒಂದು ದಿನ ಆಗ್ತೆöÊತಿ, ಮತ್ತೆ ಬರೋದು ತ್ರಾಸ್ ಆಗ್ತೆöÊತಿ, ಹಂಗಾಗಿ ಇಲ್ಲೇ ರೂಂ ಹುಡ್ಕಾಕತ್ತೀವಿ, ಆದ್ರ., ಇಲ್ಲಿ ರೊಕ್ಕ ಚಲೋ ಐತ್ರಿ..’ ಅಂತ ಬಳ್ಳಾರಿ ಇನ್ನಿತರ ಕಡೆಗಳ ಯುವಕರು ಅಸಹಾಯಕತೆ ವ್ಯಕ್ತಪಡಿಸಿದರು..!

ಅಗ್ನಿವೀರ್‌ಗೆ ಆಯ್ಕೆ ಪ್ರಕ್ರಿಯೆ ತಾ.೨೮ರಂದು(ಇAದು) ಕೂಡ ಮುಂದುವರಿಯಲಿದೆ. ಆದರೆ ವರುಣ ದೇವ ಕರುಣೆ ತೋರಿದಲ್ಲಿ ಒಂದಷ್ಟು ಯುವಕರಿಗೆ ಬದುಕಿನ ದಾರಿ ಕಂಡುಕೊಳ್ಳಬಹುದು.

? ಕುಡೆಕಲ್ ಸಂತೋಷ್