ಭಾಗಮAಡಲ, ಜೂ. ೨೭: ವಾಹನದಲ್ಲಿ ಬೀಟೆ ಮರ ಸಾಗಿಸುತ್ತಿರುವ ಖಚಿತ ಮಾಹಿತಿ ಮೇರೆಗೆ ಭಾಗಮಂಡಲ ಅರಣ್ಯ ತನಿಖಾ ಠಾಣೆ ಸಿಬ್ಬಂದಿ ವಾಹನವನ್ನು ಪತ್ತೆ ಹಚ್ಚಿ ಬೀಟೆ ಮರ ವಶಪಡಿಸಿಕೊಂಡ ಘಟನೆ ನಡೆದಿದೆ.
ಮಂಗಳವಾರ ರಾತ್ರಿ ೯ ಗಂಟೆಗೆ ನಾಪೋಕ್ಲುವಿನಿಂದ ಕೇರಳ ರಾಜ್ಯಕ್ಕೆ (ಕೆಎ-೦೯ ಸಿ೨೩೬೨) ಅಶೋಕ್ ಲೈಲ್ಯಾಂಡ್ ವಾಹನದ ಮೇಲ್ಭಾಗದಲ್ಲಿ ಗೊಬ್ಬರ ಚೀಲ ತುಂಬಿ ಅದರೊಳಗೆ ಬೀಟೆ ಮರ ಸಾಗಿಸುತ್ತಿದ್ದ ವೇಳೆ ಭಾಗಮಂಡಲ ಅರಣ್ಯ ತನಿಖಾ ಠಾಣೆ ಸಿಬ್ಬಂದಿಗಳಾದ ತಮ್ಮಯ್ಯ ಕೆ.ಬಿ. ಹಾಗೂ ದೇವಿಪ್ರಸಾದ್ ಕೆ.ಡಿ. ಇವರುಗಳು ಪತ್ತೆಹಚ್ಚಿ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ವಲಯ ಅರಣ್ಯಾಧಿಕಾರಿ ಗಳಾದ ರವೀಂದ್ರ ಟಿ.ಎ. ಹಾಗೂ ಉಪವಲಯ ಅರಣ್ಯ ಅಧಿಕಾರಿ ಮಂಜುನಾಥ್ ನಾಯಕ್ ತನಿಖಾ ಠಾಣೆಗೆ ಧಾವಿಸಿ ವಾಹನ ಚಾಲಕ ತಾವೂರು ಗ್ರಾಮದ ಶಕೀಲ್ನನ್ನು ಬಂಧಿಸಿದ್ದಾರೆ. ಬಳಿಕ ವಿಚಾರಣೆಗೆ ಒಳಪಡಿಸಿದಾಗ ಬೀಟೆ ನಾಟಗಳನ್ನು ಕೇರಳ ರಾಜ್ಯಕ್ಕೆ ಸಾಗಿಸುತ್ತಿರುವುದಾಗಿ ಆತ ಒಪ್ಪಿಕೊಂಡಿದ್ದು, ವಾಹನವನ್ನು ಸಂಪೂರ್ಣವಾಗಿ ಪರಿಶೀಲಿಸಿದಾಗ ಅಂದಾಜು ಮೂರು ಲಕ್ಷ ಮೌಲ್ಯದ ನಾಟಾ ಕಂಡು ಬಂದಿದೆ. ಮರವನ್ನು ನಾಪೋಕ್ಲು ಬಳಿಯ ಚೆರಿಯಪರಂಬುವಿನ ಸಾದಲಿ ಎಂಬಾತ ಕೇರಳ ರಾಜ್ಯಕ್ಕೆ ಸಾಗಿಸುವಂತೆ ಸೂಚಿಸಿದ್ದಾಗಿ ಆರೋಪಿ ತಿಳಿಸಿದ್ದು, ಆತನ ಪತ್ತೆಗೆ ಅರಣ್ಯ ಇಲಾಖೆ ಕ್ರಮ ಕೈಗೊಂಡಿದೆ. ಡಿ.ಸಿ.ಎಫ್ ಭಾಸ್ಕರ್ ಹಾಗೂ ಎಸಿಎಫ್ ಮೌಸಿನ್ ಪಾಶ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಿಬ್ಬಂದಿಗಳಾದ ಉಪವಲಯ ಅರಣ್ಯ ಅಧಿಕಾರಿ ದಿಲೀಪ್. ಆಚಾರ್ಯ, ರವಿ, ವಾಸುದೇವ, ವಾಹನ ಚಾಲಕ ಶರತ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.