ಮಡಿಕೇರಿ, ಜೂ. ೨೭: ಕೊಡಗು ಜಿಲ್ಲೆಯಾದ್ಯಂತ ಆರ್ದ್ರಾ ಮಳೆ ತನ್ನ ಪ್ರತಾಪ ತೋರಿದ್ದು ಬುಧವಾರದಿಂದ ಭಾರೀ ಮಳೆಯಾಗುತ್ತಿದೆ. ಧಾರಾಕಾರ ಮಳೆಯಿಂದಾಗಿ ಹಲವೆಡೆ ಹಾನಿಗಳೂ ಉಂಟಾಗಿದ್ದು, ನದಿ-ತೋಡು-ತೊರೆಗಳಲ್ಲಿ ನೀರಿನ ಮಟ್ಟದಲ್ಲಿ ಭಾರೀ ಹೆಚ್ಚಳ ಕಂಡುಬAದಿದೆ. ಭಾಗಮಂಡಲ, ಬೇತ್ರಿ, ಸಿದ್ದಾಪುರ, ನಾಪೋಕ್ಲು, ಕರಡಿಗೋಡು ಭಾಗದಲ್ಲಿ ಕಾವೇರಿ ನದಿಯಲ್ಲಿ ನೀರಿನ ಮಟ್ಟ ಆತಂಕ ಸೃಷ್ಟಿಸುವಂತೆ ಹೆಚ್ಚಳವಾಗುತ್ತಿದೆ. ಲಕ್ಷö್ಮಣತೀರ್ಥ ಸೇರಿದಂತೆ ಇತರ ನದಿಗಳು ರಭಸದಿಂದ ಹರಿಯುತ್ತಿದ್ದು, ಒಂದೇ ದಿನ ಸುರಿದ ಭಾರೀ ಮಳೆಗೆ ಜಿಲ್ಲೆಯಲ್ಲಿ ಆಲ್ಲೋಲಕಲ್ಲೋಲ ಸೃಷ್ಟಿಯಾದಂತಿದೆ. ಗುರುವಾರದಂದು ಜಿಲ್ಲೆಯಲ್ಲಿ ಮೂರು ತಾಲೂಕಗಳ ಶಾಲೆಗಳಿಗೆ ಮುಂಜಾಗ್ರತಾ ಕ್ರಮವಾಗಿ ರಜೆ ಘೋಸಿಸಲ್ಪಟ್ಟಿತ್ತು. ಬುಧವಾರ ಅಪರಾಹ್ನದಿಂದ ಗುರುವಾರ ಬೆಳಿಗ್ಗೆಯ ತನಕವು ಜಿಲ್ಲೆಯಾದ್ಯಂತ ವ್ಯಾಪಕ ಮಳೆ ಸುರಿದಿದ್ದು ಬೆಳಿಗ್ಗೆ ೯ರ ಬಳಿಕ ಒಂದಷ್ಟು ಇಳಿಮುಖವಾಗಿತ್ತು. ಭಾರೀ ಮಳೆಯಿಂದಾಗಿ ಹಲವೆಡೆಗಳಲ್ಲಿ ಮರ-ವಿದ್ಯುತ್ ಕಂಬಗಳು ಧರೆಗುರುಳಿವೆ. ಕೆಲವೆಡೆ ಮನೆಗೆ ಹಾನಿ, ತಡೆಗೋಡೆ ಕುಸಿತದಂತಹ ಪ್ರಕರಣಗಳು ವರದಿಯಾಗಿವೆ. ತಾ. ೨೮ರ ಬೆಳಿಗ್ಗೆ ತನಕ ಜಿಲ್ಲೆಯಲ್ಲಿ ಯಲ್ಲೋ ಆಲರ್ಟ್ ಕೂಡ ಘೋಷಣೆಯಾಗಿದೆ.
ಸರಾಸರಿ ೩.೬೮ ಇಂಚು ಮಳೆ
ಜಿಲ್ಲೆಯಲ್ಲಿ ಕಳೆದ ೨೪ ಗಂಟೆಗಳಲ್ಲಿ ಸರಾಸರಿ ೩.೬೮ ಇಂಚಿನಷ್ಟು ಮಳೆ ಸುರಿದಿದೆ. ಜನವರಿಯಿಂದ ಈತನಕ ೨೯.೪೬ ಇಂಚು ಮಳೆ ದಾಖಲಾಗಿದೆ. ಕಳೆದ ವರ್ಷ ಈ ಪ್ರಮಾಣ ೯.೫೪ ಇಂಚುಗಳಾಗಿತ್ತು.
ಮಡಿಕೇರಿ ತಾಲೂಕಿನಲ್ಲಿ ಭಾರೀ ಮಳೆ
ಕಳೆದ ೨೪ ಗಂಟೆಗಳ ಅವಧಿಯಲ್ಲಿ ಮಡಿಕೇರಿ ತಾಲೂಕಿನಲ್ಲಿ ೬.೪೦ ಇಂಚುಗಳಷ್ಟು ಭಾರೀ ಮಳೆಯಾಗಿದೆ. ವೀರಾಜಪೇಟೆ ತಾಲೂಕಿನಲ್ಲೂ ೪.೧೪ ಇಂಚು ಮಳೆ ಸುರಿದಿದ್ದರೆ ಪೊನ್ನಂಪೇಟೆ ತಾಲೂಕಿನಲ್ಲಿ ಸರಾಸರಿ ೪.೦೬ ಇಂಚು ಮಳೆಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಕಳೆದ ೨೪ ಗಂಟೆಗಳ ಅವಧಿಯಲ್ಲಿ ೧.೯೩ ಇಂಚು ಹಾಗೂ ಕುಶಾಲನಗರ ತಾಲೂಕಿನಲ್ಲಿ ೧.೯೦ ಇಂಚು ಮಳೆಯಾಗಿದೆ. ಮಡಿಕೇರಿ, ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿಗೆ ಹೋಲಿಸಿದರೆ ಸೋಮವಾರಪೇಟೆ ಹಾಗೂ ಕುಶಾಲನಗರದಲ್ಲಿ ಮಳೆಯ ಪ್ರಮಾಣ ಒಂದಷ್ಟು ಕಡಿಮೆ ಕಂಡು ಬಂದಿತ್ತು.
ಭಾಗಮAಡಲಕ್ಕೆ ೮.೪೮ ಇಂಚು
ಜಿಲ್ಲೆಯ ವಿವಿಧ ಹೋಬಳಿಗಳ ಪೈಕಿ ಭಾಗಮಂಡಲ ಹೋಬಳಿಗೆ ೮.೪೮ ಇಂಚಿನಷ್ಟು ಭಾರೀ ಮಳೆ ಸುರಿದಿದೆ. ಉಳಿದಂತೆ ಮಡಿಕೇರಿ ಕ.ಸ.ಬಾ ೬.೩೪ ಇಂಚು, ನಾಪೋಕ್ಲು ೫.೨೪, ಸಂಪಾಜೆಗೆ ೫.೫೪ ಇಂಚು ಮಳೆ ದಾಖಲಾಗಿದೆ. ವೀರಾಜಪೇಟೆ ಹೋಬಳಿಯಲ್ಲಿ ೪.೨೪, ಅಮ್ಮತ್ತಿ ೪, ಹುದಿಕೇರಿ ೪.೮೮, ಶ್ರೀಮಂಗಲ ೩.೫೨, ಪೊನ್ನಂಪೇಟೆ ೪.೮೦, ಬಾಳೆಲೆ ಹೋಬಳಿಗೆ ೩.೦೪ ಇಂಚು ಮಳೆ ಸುರಿದಿದೆ.
ಸೋಮವಾರಪೇಟೆ ಕ.ಸ.ಬಾ.ದಲ್ಲಿ ೧.೧೯, ಶನಿವಾರಸಂತೆ ೧.೨೪, ಶಾಂತಳ್ಳಿ ೩.೭೨, ಕೊಡ್ಲಿಪೇಟೆ ೧.೬೦, ಸುಂಟಿಕೊಪ್ಪ ೨.೫೬ ಹಾಗೂ ಕುಶಾಲನಗರ ಹೋಬಳಿಯಲ್ಲಿ ೧.೨೪ ಇಂಚು ಮಳೆಯಾಗಿದೆ. ಹಾರಂಗಿ ಜಲಾಶಯಕ್ಕೆ ೧೪೨೫ ಕ್ಯೂಸೆಕ್ಸ್ನಷ್ಟು ನೀರಿನ ಒಳ ಹರಿವು ಕಂಡುಬAದಿದೆ.ಭಾಗಮAಡಲ: ತೀವ್ರ ಮಳೆಯಿಂದ ಭಾಗಮಂಡಲದಲ್ಲಿ ತ್ರಿವೇಣಿ ಸಂಗಮ ಭರ್ತಿಯಾಗಿತ್ತಾದರೂ ಸಂಜೆ ವೇಳೆಗೆ ನೀರು ಇಳಿಮುಖಗೊಂಡಿತ್ತು. ನಾಪೋಕ್ಲು ಹಳೆ ರಸ್ತೆ ಮೇಲೆ ಒಂದು ಅಡಿ ನೀರು ನಿಂತಿತ್ತು ನಿನ್ನೆ ಸಂಜೆಯಿAದ ಭಾಗಮಂಡಲ ವ್ಯಾಪ್ತಿಯ ಬಾಚಿಮಲೆ, ಪಟ್ಟಿ ಪ್ರದೇಶಗಳಲ್ಲಿ ಹೆಚ್ಚಿನ ಮಳೆ ಬಿದ್ದುದ್ದರಿಂದ ತ್ರಿವೇಣಿ ಸಂಗಮದಲ್ಲಿ ಹೆಚ್ಚು ನೀರಿನ ಹರಿವು ಹೆಚ್ಚಾಗಿತ್ತಾದರೂ ಸಂಜೆ ಬಳಿಕ ನೀರಿನ ಹರಿವಿನ ಪ್ರಮಾಣ ಕೊಂಚ ಕಡಿಮೆಯಾಯಿತು. ಭಾಗಮಂಡಲ ತಲಕಾವೇರಿಗೆ ಭಕ್ತಾದಿಗಳ ಸಂಖ್ಯೆ ಇಂದು ಬೆಳಿಗ್ಗೆ ಕ್ಷೀಣಿಸಿದೆ. ಭಾಗಮಂಡಲದ ತ್ರಿವೇಣಿ ಸಂಗಮದ ಬಳಿ ಅಭಿವೃದ್ಧಿಪಡಿಸಲಾದ ಉದ್ಯಾನವನ ಸಂಪೂರ್ಣವಾಗಿ ಜಲಾವೃತಗೊಂಡಿತ್ತು. ಕರಿಕೆ ಭಾಗದಲ್ಲಿ ಕೂಡ ಹೆಚ್ಚು ಮಳೆಯಾಗಿದ್ದು, ನದಿ ತೊರೆಗಳು ಉಕ್ಕಿ ಹರಿಯುತ್ತಿದೆ. ರಸ್ತೆ ಬದಿ ಬೆಟ್ಟದ ಮೇಲಿಂದ ಜಲಪಾತದಂತೆ ನೀರು ಹರಿಯುತ್ತಿದೆ. ಚೆಟ್ಟಿಮಾನಿ, ಕುಂದಚೇರಿಯಲ್ಲಿ ನಿನ್ನೆ ಸಂಜೆಯಿAದ ಬಾರಿ ಮಳೆ ಬೀಳುತ್ತಿದೆ. ಸಿದ್ದಾಪುರ : ಸಿದ್ದಾಪುರದ ವ್ಯಾಪ್ತಿಯಲ್ಲಿ ಕಾವೇರಿ ನದಿಯು ಮೈದುಂಬಿ ಹರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರವಾಹ ಪೀಡಿತ ಪ್ರದೇಶವಾದ ಸಿದ್ದಾಪುರದ, ಕರಡಿಗೋಡು ಹಾಗೂ ಗುಹ್ಯ, ಕೊಂಡAಗೇರಿ ಭಾಗದ ನದಿ ತೀರಗಳಿಗೆ ವೀರಾಜಪೇಟೆ ತಾಲೂಕು ತಹಶೀಲ್ದಾರ್ ರಾಮಚಂದ್ರ ಮಾರ್ಗದರ್ಶನದಲ್ಲಿ ಅಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ನೇತೃತ್ವದಲ್ಲಿ ಗ್ರಾಮ ಆಡಳಿತ ಅಧಿಕಾರಿ ಬಣಕರ್ ಇಂದು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಸಿದ್ದಾಪುರ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರೇಮ ಗೋಪಾಲ್, ಉಪಾಧ್ಯಕ್ಷ ಪಳನಿಸ್ವಾಮಿ, ಗ್ರಾಮ ಅಭಿವೃದ್ಧಿ ಅಧಿಕಾರಿ ಸಫೀಕ್, ಕಾರ್ಯದರ್ಶಿ ಮೋಹನ್ ಹಾಗೂ ಸಿಬ್ಬಂದಿಗಳು ಇದ್ದರು.ಗೋಣಿಕೊಪ್ಪಲು : ಮಳೆ, ಗಾಳಿಯ ಆರ್ಭಟಕ್ಕೆ ದ.ಕೊಡಗಿನಾದ್ಯಂತ ವಿದ್ಯುತ್ ಸಂಪರ್ಕ ಕಡಿತಕೊಂಡ ಹಿನ್ನೆಲೆಯಲ್ಲಿ ರಾತ್ರಿ ಇಡೀ ಕಾರ್ಗತ್ತಲು ಆವರಿಸಿತ್ತು.
ಬಿಡುವಿಲ್ಲದೆ ಸುರಿದ ಮಳೆಯಿಂದಾಗಿ ಗೋಣಿಕೊಪ್ಪಲುವಿನ ಕೀರೆಹೊಳೆಯಲ್ಲಿ ಪ್ಲಾಸ್ಟಿಕ್ ಬಾಟಲು ಸೇರಿದಂತೆ ಇನ್ನಿತರ ಘನ ತ್ಯಾಜ್ಯಗಳು ರಾಶಿಗಟ್ಟಲೆ ಶೇಖರಣೆಗೊಂಡಿದೆ.
ಹಾತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವೇಶ್ವರ ಬಡಾವಣೆಗೆ ಸಂಪರ್ಕವಿರುವ ಸೇತುವೆಯ ಮೇಲೆ ನೀರು ಹರಿದು ಬಂದ ಹಿನ್ನೆಲೆಯಲ್ಲಿ ಈ ಭಾಗದ ರಸ್ತೆ ಸಂಚಾರ ಕಡಿತಗೊಂಡಿದೆ.
ಸ್ಥಳಕ್ಕೆ ತೆರಳಿದ ಪೊನ್ನಂಪೇಟೆ ತಹಶೀಲ್ದಾರ್ ಮೋಹನ್ ಕುಮಾರ್, ಕಂದಾಯ ಅಧಿಕಾರಿ ಸುಧೀಂದ್ರ ಜನರಿಗೆ ಮತ್ತೊಂದು ಖಾಸಗಿ ಜಮೀನಿನ ಮೂಲಕ ಸಂಚಾರ ಮಾಡಲು ಅವಕಾಶ ಕಲ್ಪಿಸಿದರು.
ಸಂಪರ್ಕ ಸೇತುವೆಯ ಬಳಿ ಮುಂಜಾಗ್ರತಾ ಕ್ರಮವಾಗಿ, ಪೊಲೀಸರು ಬ್ಯಾರಿಕೇಡ್ ಅಳವಡಿಸಿದ್ದಾರೆ.
ರಾತ್ರಿಯಿಂದ ಬೆಳಗ್ಗಿನವರೆಗೂ ಬಿಡುವು ನೀಡದೆೆ ಮಳೆ ಸುರಿಯಿತು.
ಇಂದು ಮಧ್ಯಾಹ್ನದ ವೇಳೆ ಬಿಡುವು ನೀಡಿತ್ತು. ಮಳೆಯನ್ನು ಲೆಕ್ಕಿಸದೆ ಸೆಸ್ಕ್ ಸಿಬ್ಬಂದಿಗಳು ಕರ್ತವ್ಯ ನಿರ್ವಹಿಸಿದರು.
೨ ಗಂಟೆ ವೇಳೆ ನಗರದಲ್ಲಿ ವಿದ್ಯುತ್ ಪೂರೈಕೆಯಾಯಿತು. ಮಳೆಯ ಹಿನ್ನೆಲೆಯಲ್ಲಿ ಸಹಜವಾಗಿಯೇ ಜನರು ನಗರದತ್ತ ಹೆಚ್ಚಾಗಿ ಕಂಡುಬರಲಿಲ್ಲ.
ಗ್ರಾಮೀಣ ಪ್ರದೇಶಗಳಿಗೆ ತೆರಳುವ ಖಾಸಗಿ ಬಸ್ಗಳಲ್ಲಿ ಪ್ರಯಾಣಿಕರ ಸಂಖ್ಯೆ ಕಡಿಮೆಯಾಗಿತ್ತು. ಮಳೆಯಿಂದ ದ.ಕೊಡಗಿನ ಬಹುತೇಕ ನದಿ ತೊರೆಗಳು ತುಂಬಿ ಹರಿದವು. ಕರಿಕೆ : ಮುಂಗಾರು ಆರಂಭಗೊAಡ ನಂತರ ಭಾಗಮಂಡಲ-ಕರಿಕೆ ರಸ್ತೆಯಲ್ಲಿ ಕಣ್ಮನ ಸೆಳೆಯುವ ಹತ್ತಾರು ಜಲಪಾತಗಳು ಪ್ರವಾಸಿಗರನ್ನು ಕೈ ಬೀಸಿ ಕರೆಯುತ್ತಿವೆ. ಈ ಬಾರಿ ತಡವಾಗಿ ಮುಂಗಾರು ಮಳೆ ಆರಂಭವಾಗಿ ಇದೀಗ ಬಿರುಸುಗೊಂಡು, ಪಶ್ಚಿಮ ಘಟ್ಟಗಳ ತಪ್ಪಲಿನಲ್ಲಿ ಧಾರಾಕಾರವಾಗಿ ಮಳೆಯಾಗುತ್ತಿರುವ ಪರಿಣಾಮ ತಲಕಾವೇರಿ ವನ್ಯಧಾಮದೊಳಗೆ ಐವತ್ತಕ್ಕೂ ಅಧಿಕ ಜಲಪಾತಗಳು ಮೈದುಂಬಿ ಧುಮ್ಮಿಕ್ಕುತ್ತಿದ್ದು, ಪ್ರವಾಸಿಗರನ್ನು, ಪರಿಸರ ಪ್ರಿಯರನ್ನು ಆಕರ್ಷಿಸುತ್ತಿವೆ. ಭಾಗಮಂಡಲ ಪಟ್ಟಣದಿಂದ ಏಳು ಕಿ.ಮಿ. ದೂರ ಕರಿಕೆ ಕೇರಳ ಸಂಪರ್ಕ ಕಲ್ಲಿಸುವ ಅಂತರ್ರಾಜ್ಯ ರಸ್ತೆಯಲ್ಲಿ ಸಂಚರಿಸುವಾಗ ರಸ್ತೆ ಬದಿಯಲ್ಲಿ ಈ ಜಲಪಾತಗಳ ವೈಭವವನ್ನು ಕಣ್ತ್ತುಂಬಿಕೊಳ್ಳಬಹುದು.ಚೆಯ್ಯAಡಾಣೆ : ವೀರಾಜಪೇಟೆ ಸಮೀಪದ ಕದನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅರಮೇರಿ ಚಾಮಿಯಾಲ ಸಂಪರ್ಕ ಕಲ್ಪಿಸುವ ಚಾಮಿಯಾಲ ಸೇತುವೆ ಮೇಲೆ ಧಾರಾಕಾರ ಮಳೆಯಿಂದ ನೀರು ತುಂಬಿ ಹರಿಯುತ್ತಿದೆ.ಮಡಿಕೇರಿ: ಧಾರಾಕಾರ ಮಳೆಯ ನಡುವೆ ನಿನ್ನೆ ಇಲ್ಲಿನ ಐಟಿಐ ಜಂಕ್ಷನ್ನಲ್ಲಿ ಇದ್ದಕ್ಕಿದ್ದ ಹಾಗೆ ರಸ್ತೆ ಕುಸಿದು ಹೊಂಡ ಉಂಟಾಗಿ ಕಾರೊಂದು ಸಿಲುಕಿಕೊಂಡಿತ್ತು. ಸಾರ್ವಜನಿಕರು ಕಾರನ್ನು ಮೇಲಕ್ಕೆತ್ತಿ ಈ ಬಗ್ಗೆ ವಾರ್ಡ್ನ ಸದಸ್ಯ ಅರುಣ್ ಶೆಟ್ಟಿ ಅವರ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಸ್ಪಂದಿಸಿದ ಸದಸ್ಯರು ರಸ್ತೆಯಲ್ಲಿನ ಗುಂಡಿ ಮುಚ್ಚಿ, ಅನಾಹುತ ಉಂಟಾಗುವುದನ್ನು ತಪ್ಪಿಸಿದ್ದಾರೆ.ಗುಡ್ಡೆಹೊಸೂರು : ಇಲ್ಲಿಗೆ ಸಮೀಪದ ಬಾಳುಗೋಡು ಗ್ರಾಮದ ಕೆದಂಬಾಡಿ ಪುರುಷೋತ್ತಮ್ ಅವರಿಗೆ ಸೇರಿದ ಗದ್ದೆಗಳಿಗೆ ಕಾವೇರಿ ನದಿ ನೀರು ಸಿದ್ದಾಪುರ ರಸ್ತೆಯ ಸೇತುವೆ ಒಳಭಾಗದಿಂದ ನುಗ್ಗಿ ಸುಮಾರು ೨ ಏಕರ ಪ್ರದೇಶದ ನಾಟಿ ಕಾರ್ಯ ಆಗದ ಗದ್ದೆ ಜಲಾವೃತಗೊಂಡಿದೆ. ಗದ್ದೆಯ ಸ್ವಲ್ಪ ಅಂತರದಲ್ಲಿ ಮೂರು ಏಕರೆ ಪ್ರದೇಶದಲ್ಲಿ ಶುಂಠಿ ವ್ಯವಸಾಯ ಮಾಡಿದ್ದು, ಮಳೆ ಹೆಚ್ಚಾದಲ್ಲಿ ಗದ್ದೆಯಲ್ಲಿರುವ ಶುಂಠಿ ಬೆಳೆ ನೀರು ನಿಂತು ನಷ್ಟವಾಗಿದೆ. ಕಾವೇರಿ ನದಿಂiÀÀಲ್ಲಿ ದೀಡಿರನೆ ನೀರು ಹೆಚ್ಚಾಗಿದ್ದು, ದುಬಾರೆಯಲ್ಲಿ ರ್ಯಾಪ್ಟಿಂಗ್ಗಾಗಿ ಪ್ರವಾಸಿಗರು ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಗದ್ದೆಗಳಿಗೆ ನೀರು ನುಗ್ಗಿದ ಹಿನ್ನಲೆಯಲ್ಲಿ ಸ್ಥಳೀಯರು ಬಲೆಗಳನ್ನು ಬಳಸಿ ಮೀನು ಹಿಡಿಯುತ್ತಿರುವ ದೃಶ್ಯ ಕಂಡು ಬಂತು. ಬಾಳುಗೋಡು, ರಸಲ್ಪುರ, ಬೆಟ್ಟಗೇರಿ, ಗುಡ್ಡೆಹೊಸೂರು, ಮಾದಪಟ್ಟಣ, ಹೊಸಪಟ್ಟಣ ಈ ಭಾಗಗಳಲ್ಲಿ ಕಾವೇರಿ ನದಿ ನೀರು ಕಾಫಿ, ತೋಟ, ಶುಂಠಿಗದ್ದೆಗಳಿಗೆ ನುಗ್ಗಿದ ಬಗ್ಗೆ ವರದಿಯಾಗಿದೆ.ಚೆಯ್ಯಂಡಾಣೆ: ನಾಪೋಕ್ಲು ಸಮೀಪದ ಎಮ್ಮೆಮಾಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಮ್ಮೆಮಾಡು ದರ್ಗಾ ಮುಂಭಾಗ ಇರುವ ಟಿ.ಎ. ಅಬ್ದುಲ್ ಹಫೀಲ್ ಎಂಬವರ ಹೊಟೇಲ್ ಹಿಂಭಾಗದ ಬೃಹತ್ ಬರೆ ಧಾರಾಕಾರ ಮಳೆಯಿಂದ ಕುಸಿದೆ. ಹೊಟೇಲ್ನ ಡ್ರಮ್ ಹಾಗೂ ಬೋರ್ವೆಲ್ಗೆ ಅಳವಡಿಸಿದ ಪೈಪ್ಗಳಿಗೆ ಹಾನಿಯಾಗಿದೆ.ನಾಪೋಕ್ಲು : ಮಳೆಗಾಲ ಎಂದರೆ ಕೊಡಗಿನಲ್ಲಿ ನೂರಾರು ಜಲಧಾರೆಗಳು ತಮ್ಮ ಸೌಂದರ್ಯವನ್ನು ಹೊರಸೂಸುವ ಸಮಯ. ಬೆಟ್ಟಗುಡ್ಡಗಳ ಸಂಧಿಗಳಿAದ ಹಾಲ್ನೊರೆಯಂತೆ ಉಕ್ಕುವ ನೂರಾರು ಎಲೆಮರೆಯ ಜಲಪಾತಗಳು ಕೊಡಗಿನಲ್ಲಿವೆ. ಇದರಲ್ಲಿ ಮುಖ್ಯವಾಗಿ ಚೇಲಾವರ ಜಲಪಾತವೂ ಒಂದು.
ಕೊಡಗಿನ ರಾಜಧಾನಿ ಮಡಿಕೇರಿಯಿಂದ ನಾಪೋಕ್ಲು ಕಕ್ಕಬ್ಬೆ ಮಾರ್ಗವಾಗಿ ಸುಮಾರು ೩೫ ಕಿ.ಮೀ. ಕ್ರಮಿಸಿದರೆ ಚೆಯ್ಯಂಡಾಣೆ ಗ್ರಾಮ ಸಿಗುತ್ತದೆ. ಅಲ್ಲಿಂದ ೩ ಕಿ.ಮೀ. ದೂರದಲ್ಲಿ ಚೇಲಾವರ ಗ್ರಾಮದಲ್ಲಿ ಆಮೆಪಾರೆ ಎಂಬಲ್ಲಿ ಬೆಟ್ಟಗುಡ್ಡಗಳ ನಡುವೆ ಕಬ್ಬೆಬೆಟ್ಟದ ಸಂಧಿಯಿAದ ಸುಮಾರು ೯೦ ಅಡಿಗಳಷ್ಟು ಎತ್ತರದಿಂದ ಸುಂದರ ಪರಿಸರದ ನಡುವೆ ಹಾಲ್ನೋರೆಯಂತೆ ಧುಮುಕುವ ಈ ಜಲಧಾರೆಯೇ ಕಣ್ಮನ ಸೆಳೆಯುತ್ತದೆ. ರಮಣೀಯ ಜಲಪಾತ ಆಗಿದ್ದರೂ ಇದುವರೆಗೆ ಸುಮಾರು ೨೦ ಮಂದಿಯನ್ನು ಬಲಿ ಪಡೆದ ಜಲಪಾತವಾಗಿದೆ. ಇಲ್ಲಿ ಜಾಗೃತಿ ವಹಿಸುವುದು ಅತ್ಯವಶ್ಯ. ಕರಿಕೆ : ಭಾಗಮಂಡಲ - ಕರಿಕೆ ಅಂತರ್ರಾಜ್ಯ ಹೆದ್ದಾರಿಯ ಕರಿಕೆ ಚೆತ್ತುಕಾಯ ಬಳಿ ರಸ್ತೆಗೆ ಗುಡ್ಡ ಕುಸಿದು ಮಡಿಕೇರಿ ಕಡೆ ಹಾಗೂ ಸುಳ್ಯಕ್ಕೆ ತೆರಳುವ ಬಸ್ಗಳು ಸೇರಿದಂತೆ ಹತ್ತಾರು ವಾಹನಗಳು ರಸ್ತೆಯಲ್ಲಿ ಸಿಲುಕಿ ಪ್ರಯಾಣಿಕರು ಪರದಾಡುವಂತಾಗಿತ್ತು. ನಂತರ ಯಂತ್ರದ ಮೂಲಕ ಮಣ್ಣು ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು. ಇದಲ್ಲದೆ ಎಳ್ಳುಕೊಚ್ಚಿ ಹಳೆಮನೆ ಬಳಿ ಮೋರಿ ಬಂದ್ ಆಗಿ ರಸ್ತೆ ಮೇಲೆ ಮೂರು ಅಡಿಗೂ ಅಧಿಕ ನೀರು ತುಂಬಿ ಹರಿದ ಪರಿಣಾಮ ಸಂಚಾರಕ್ಕೆ ಅಡಚಣೆಯಾಗಿದ್ದು, ಕಳೆದ ಬಾರಿ ಕೂಡ ಇದೇ ಪರಿಸ್ಥಿತಿ ಎದುರಾಗಿದ್ದರೂ, ಸಂಬAಧಿಸಿದ ಇಲಾಖೆ ಎಚ್ಚೆತ್ತುಕೊಳ್ಳದಿರುವುದು ಆಡಳಿತ ವ್ಯವಸ್ಥೆಗೆ ಹಿಡಿದ ಕನ್ನಡಿಯಾಗಿದೆ. ತಲಕಾವೇರಿ ವನ್ಯಧಾಮದೊಳಗೆ ಹಲವಾರು ಕಡೆ ಮರ ಬಿದ್ದಿದ್ದು, ವನ್ಯಜೀವಿ ವಲಯದ ಸಿಬ್ಬಂದಿಗಳು ತೆರವುಗೊಳಿಸಿ ರಸ್ತೆ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ.ಕುಶಾಲನಗರ: ಕುಶಾಲನಗರ ಸಮೀಪ ದುಬಾರೆ ಸಾಕಾನೆ ಶಿಬಿರಕ್ಕೆ ತಾತ್ಕಾಲಿಕವಾಗಿ ಪ್ರವಾಸಿಗರ ಭೇಟಿಗೆ ನಿರ್ಬಂಧ ಹೇರಲಾಗಿದೆ.
ಕಳೆದ ಎರಡು ದಿನಗಳಿಂದ ನದಿ ತುಂಬಿ ಹರಿಯುತ್ತಿದ್ದು ಶಿಬಿರಕ್ಕೆ ತೆರಳಲು ಸಮಸ್ಯೆ ಉಂಟಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅರಣ್ಯ ಇಲಾಖೆ ಈ ಕ್ರಮ ಕೈಗೊಂಡಿದೆ ಎಂದು ಶಿಬಿರದ ಉಸ್ತುವಾರಿ ಉಪವಲಯ ಅರಣ್ಯಾಧಿಕಾರಿ ಧರ್ಮೇಂದ್ರ ತಿಳಿಸಿದ್ದಾರೆ. ಸಿದ್ದಾಪುರ : ನೆಲ್ಲಿಹುದಿಕೇರಿ ಪ್ರವಾಹ ಪೀಡಿತ ಪ್ರದೇಶಗಳಿಗೆ ಕುಶಾಲನಗರ ತಾಲೂಕು ತಹಶೀಲ್ದಾರ್ ಕಿರಣ್ ಗೌರಯ್ಯ ಹಾಗೂ ಕಂದಾಯ ಪರಿವೀಕ್ಷಕ ಸಂತೋಷ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ನೀರಿನ ಪ್ರಮಾಣ ಏರಿಕೆಯಾದಲ್ಲಿ ನದಿ ತೀರದ ವಾಸಿಗಳಿಗೆ ಆಶ್ರಯ ಪಡೆಯಲು ಸಭಾಂಗಣಗಳನ್ನು ಹಾಗೂ ಶಾಲೆಯ ಕೊಠಡಿಗಳನ್ನು ಗುರುತಿಸಲಾಗಿದೆ ಸದ್ಯದಲ್ಲೇ ಪ್ರವಾಹ ಪೀಡಿತ ನದಿ ತೀರದ ನಿವಾಸಿಗಳಿಗೆ ಸುರಕ್ಷಿತ ಸ್ಥಳಗಳಿಗೆ ತೆರಳಲು ನೋಟಿಸ್ ಜಾರಿ ಮಾಡಲು ಸಿದ್ಧತೆಗಳನ್ನು ಕಂದಾಯ ಇಲಾಖೆ ಅಧಿಕಾರಿಗಳು ಕೈಗೊಂಡಿದ್ದಾರೆ. ಪ್ರವಾಹ ಪೀಡಿತ ಪ್ರದೇಶಗಳಾದ ಕುಂಬಾರಗುAಡಿ, ಬೆಟ್ಟದ ಕಾಡು ಭಾಗಗಳಿಗೆ ತಹಶೀಲ್ದಾರ್ ಹಾಗೂ ಕಂದಾಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು ಈ ಸಂದರ್ಭದಲ್ಲಿ ಗ್ರಾಮ ಆಡಳಿತ ಅಧಿಕಾರಿ ಸಚಿನ್, ಗ್ರಾಮ ಪಂಚಾಯಿತಿ ಪಿಡಿಓ ನಂಜುAಡಸ್ವಾಮಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರುಗಳು ಹಾಜರಿದ್ದರು.ಕಾವೇರಿ ನದಿಯ ನೀರಿನ ಮಟ್ಟ ಹೆಚ್ಚಳ
ಕೂಡಿಗೆ : ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಅಧಿಕ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಹೆಚ್ಚು ಮಳೆ ಬೀಳುತ್ತಿರುವುದರಿಂದಾಗಿ ಕಾವೇರಿ ನದಿಯ ನೀರಿನ ಮಟ್ಟ ಹೆಚ್ಚಳವಾಗುತ್ತಿದೆ.
ಕಾವೇರಿ ಹಾರಂಗಿ ನದಿ ಸಂಗಮವಾಗಿ ಹರಿಯುವ ಕೂಡಿಗೆ ಸಮೀಪದ ಕಣಿವೆಯ ಶ್ರೀ ರಾಮಲಿಂಗೇಶ್ವರ ದೇವಾಲಯ ಸಮೀಪದಲ್ಲಿ ಕಾವೇರಿ ನದಿಯ ನೀರಿನ ಮಟ್ಟ ಒಂದೇ ದಿನಕ್ಕೆ ೧೫ ಅಡಿಗಳಷ್ಟು ಏರಿಕೆಯಾಗಿದ್ದು, ದೇವಾಲಯದ ಮುಂಭಾಗದ ೧೫ಕ್ಕೂ ಹೆಚ್ಚು ಮೆಟ್ಟಿಲುಗಳು ನೀರಿನಲ್ಲಿ ಮುಳುಗಡೆಗೊಂಡಿವೆ.
ಹಾರAಗಿ ಜಲಾನಯನ ಪ್ರದೇಶದಲ್ಲಿ ಹೆಚ್ಚು ಮಳೆ ಬೀಳುತ್ತಿರುವ ಹಿನ್ನೆಲೆಯಲ್ಲಿ ಅಣೆಕಟ್ಟೆಗೆ ಒಳ ಹರಿವಿನ ಪ್ರಮಾಣವು ಹೆಚ್ಚಾಗುತ್ತಿದೆ. ಈಗಾಗಲೇ ಅಣೆಕಟ್ಟೆಗೆ ನೀರಿನ ಒಳಹರಿವು ೧,೫೦೦ ಕ್ಯೂಸೆಕ್ಸ್ನಷ್ಟಿದೆ.ಮಡಿಕೇರಿ: ತಾ.೨೬ ರ ಮಧ್ಯರಾತ್ರಿ ಸತತವಾಗಿ ಸುರಿದ ಭಾರೀ ಮಳೆಗೆ ಮಡಿಕೇರಿ ತ್ಯಾಗರಾಜ ಕಾಲೋನಿಯಲ್ಲಿ ಕಾಂಪೌAಡ್ ಕುಸಿದಿದೆ. ಮಧ್ಯರಾತ್ರಿ ಸುಮಾರು ೧ ಗಂಟೆಗೆ ಇಲ್ಲಿನ ನಿವಾಸಿಗಳಾದ ಉಮೇಶ್, ಮೊಯಿದ್ದೀನ್ ಹಾಗೂ ಶರೀಫ್ ಅವರುಗಳ ಮನೆಯ ಸುತ್ತದ ಕಾಂಪೌAಡ್ ಕುಸಿದಿದೆ. ಮನೆಗೆ ಹಾಗೂ ನಿವಾಸಿಗಳಿಗೆ ಯಾವುದೇ ಹಾನಿಯಾಗಿಲ್ಲ.
(೬ನೇ ಪುಟಕ್ಕೆÀ)