ನಾಪೋಕ್ಲು, ಜೂ. ೨೬: ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿಯಿಂದ ಬಿರುಸಿನ ಮಳೆಯಾಗುತ್ತಿದ್ದು, ಕೆರೆತೋಡುಗಳು ಭರ್ತಿಯಾಗಿ ಹೊಳೆಗಳು ತುಂಬಿ ಹರಿಯುತ್ತಿವೆ. ಸಮೀಪದ ಹೊದ್ದೂರು ಗ್ರಾಮ ಪಂಚಾಯಿತಿಯ ಬಲಮುರಿಯಲ್ಲಿ ಕಿರು ಸೇತುವೆ ಮುಳುಗಡೆಯಾಗಿದೆ.

ನಾಪೋಕ್ಲುವಿನಲ್ಲಿ ೨೪ ಗಂಟೆಯಲ್ಲಿ ೩.೩೫ ಇಂಚು, ಕಕ್ಕಬೆ ಗ್ರಾಮ ಪಂಚಾಯಿತಿಯ ನಾಲಡಿ ಗ್ರಾಮದಲ್ಲಿ ೭.೭೧ ಇಂಚು ಮಳೆ ಸುರಿದಿದೆ.

ಬಲ್ಲಮಾವಟಿ ಗ್ರಾಮದ ದೊಡ್ಡ ಪುಲಿಕೋಟು ಗ್ರಾಮ ವ್ಯಾಪ್ತಿಯಲ್ಲಿ ೨೦೨೧ ರಲ್ಲಿ ಈ ಅವಧಿಗೆ ೪೯.೪೮ ಇಂಚು ಮಳೆಯಾಗಿದ್ದರೆ ೨೦೨೨ ರಲ್ಲಿ ೨೩.೪೯ ಇಂಚು ಮಳೆಯಾಗಿದ್ದು ೨೦೨೩ರಲ್ಲಿ ೧೧.೭೪ ಇಂಚು ಮಳೆ ಸುರಿದಿದ್ದರೆ ಈ ವರ್ಷ ಜನವರಿಯಿಂದ ಇದುವರೆಗೆ ೩೨.೨೦ ಇಂಚು ಮಳೆಯಾಗಿದೆ.

ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದ ಅಲ್ಲಲ್ಲಿ ಹಾನಿ ಸಂಭವಿಸಿದೆ. ಎಮ್ಮೆಮಾಡು ಗ್ರಾಮದ ಕೂರುಳಿಯ ಖಾಲಿದ್ ಅವರ ಮನೆಯ ತಡೆಗೋಡೆ ಕುಸಿದು ಹಾನಿ ಸಂಭವಿಸಿದೆ. ಘಟನಾ ಸ್ಥಳಕ್ಕೆ ನಾಪೋಕ್ಲು ಕಂದಾಯ ಇಲಾಖೆಯ ಅಧಿಕಾರಿ ರವಿಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲಿಸಿ ಮೇಲಧಿಕಾರಿಗಳಿಗೆ ಮಾಹಿತಿಯನ್ನು ರವಾನಿಸಿದ್ದಾರೆ.

-ದುಗ್ಗಳ