ಮಡಿಕೇರಿ, ಜೂ. ೨೫: ನಗರದ ಪ್ರಮುಖ ಆಕರ್ಷಣೀಯ ಸ್ಥಳಗಳಲ್ಲಿ ಒಂದಾಗಿರುವ ಕೋಟೆ ಆವರಣದಲ್ಲಿನ ಸರ್ಕಾರಿ ವಸ್ತು ಸಂಗ್ರಹಾಲಯ ನವೀಕರಣಗೊಂಡು ಕಂಗೊಳಿಸುತ್ತಿದೆ. ಗತಕಾಲದ ವೈಭವಕ್ಕೆ ಸಾಕ್ಷಿಯಾಗಿರುವ ಈ ವಸ್ತು ಸಂಗ್ರಹಾಲಯಕ್ಕೆ ೪ ತಿಂಗಳ ನವೀಕರಣ ಕಾಮಗಾರಿ ಬಳಿಕ ತಾ. ೧೬ರಿಂದ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ನೀಡಲಾಗಿದ್ದು, ಹತ್ತು ದಿನಗಳ ಅವಧಿಯಲ್ಲಿ ಇಲ್ಲಿಗೆ ೫೫೦೦ ಮಂದಿ ಭೇಟಿ ನೀಡಿ ಇಲ್ಲಿರುವ ಪ್ರಾಚೀನ ಸಂಪತ್ತುಗಳನ್ನು ಕಣ್ತುಂಬಿಕೊAಡಿದ್ದಾರೆ.
ಬ್ರಿಟೀಷರ ಕಾಲದಲ್ಲಿ ರೋಮನ್ ಗೋಥಿಕ್ ಚರ್ಚ್ ಆಗಿದ್ದ ಕಟ್ಟಡದಲ್ಲಿ ವಸ್ತು ಸಂಗ್ರಹಾಲಯವಿದ್ದು, ಪ್ರಸಕ್ತ ಸಾಲಿನ ಫೆ.೨೧ ರಿಂದ ರಾಜ್ಯ ಪುರಾತತ್ವ ಇಲಾಖೆಯಿಂದ ೪೦ಲಕ್ಷ ರೂ. ವೆಚ್ಚದಲ್ಲಿ ಆರಂಭಗೊAಡಿದ್ದ ನವೀಕರಣ ಕಾಮಗಾರಿ ೪ ತಿಂಗಳ ಕಾಲ ನಡೆದಿತ್ತು. ಕಾಮಗಾರಿ ಹಿನ್ನೆಲೆಯಲ್ಲಿ ವಸ್ತು ಸಂಗ್ರಹಾಲಯಕ್ಕೆ ಪ್ರವಾಸಿಗರು ಹಾಗೂ ಸಾರ್ವಜನಿಕರ ಪ್ರವೇಶವನ್ನು ನಿಷೇಧಿಸಲಾಗಿತ್ತು. ಇದೀಗ ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ತಾ.೧೬ರಿಂದ ಮತ್ತೆ ಸಾರ್ವಜನಿಕರ ವೀಕ್ಷಣೆಗೆ ಮುಕ್ತಗೊಳಿಸಲಾಗಿದೆ. ೧೮೮೫ರಲ್ಲಿ ನಿರ್ಮಾಣಗೊಂಡಿದ್ದ ಚರ್ಚ್ ಕಟ್ಟಡದಲ್ಲಿ ೧೯೭೧ರಲ್ಲಿ ಕೊಡಗಿನ ಐತಿಹಾಸಿಕ ಸಾಂಸ್ಕೃತಿಕ ವಸ್ತುಗಳನ್ನು ಸಂರಕ್ಷಿಸಲು ಈ ಸರ್ಕಾರಿ ವಸ್ತು ಸಂಗ್ರಹಾಲಯವನ್ನು ಆರಂಭಿಸಲಾಗಿದೆ.
(ಮೊದಲ ಪುಟದಿಂದ) ಕೊಡಗಿನ ಪರಂಪರೆಯನ್ನು ಪ್ರತಿನಿಧಿಸುವ ವಸ್ತುಗಳು, ಪ್ರಾಚೀನ ಶಿಲ್ಪಗಳು, ಸ್ಮಾರಕಗಳು, ಶಾಸನಗಳು, ಉನ್ನತ ವಿನ್ಯಾಸದ ಆಯುಧಗಳು, ಕೊಡಗನ್ನು ಆಳಿದ ಗಂಗ, ಕೊಂಗಾಳ್ವ, ಚೆಂಗಾಳ್ವ, ಹೊಯ್ಸಳ, ವಿಜಯನಗರ, ಬೇಲೂರು ನಾಯಕರು, ಬಳಿಕ ಕೊಡಗಿನ ರಾಜರ ಇತಿಹಾಸದ ಪ್ರತೀಕಗಳನ್ನು ಈ ವಸ್ತು ಸಂಗ್ರಹಾಲಯದಲ್ಲಿ ಸಂರಕ್ಷಿಸಲಾಗಿದೆ.
ವಸ್ತು ಸಂಗ್ರಹಾಲಯ ನವೀಕರಣಗೊಂಡ ಬಳಿಕ ಸುಂದರ ಕಟ್ಟಡವಾಗಿ ರೂಪುಗೊಂಡಿದ್ದು, ನೋಡುಗರನ್ನು ಆಕರ್ಷಿಸುತ್ತಿದೆ. ಪ್ರವಾಸಿಗರು, ಸಾರ್ವಜನಿಕರಿಂದ ಮೆಚ್ಚುಗೆಯೂ ವ್ಯಕ್ತಗೊಂಡಿದೆ ಎಂದು ಸರ್ಕಾರಿ ವಸ್ತು ಸಂಗ್ರಹಾಲಯದ ಕ್ಯೂರೇಟರ್ ಬಿ.ಪಿ. ರೇಖಾ ತಿಳಿಸಿದ್ದಾರೆ. ಸುಮಾರು ೧೨ ರಿಂದ ೧೫ ಮಂದಿ ೪ ತಿಂಗಳ ಕಾಲ ಕಾಮಗಾರಿ ನಿರ್ವಹಿಸಿದ್ದು, ಕಾಮಗಾರಿ ಪೂರ್ಣಗೊಂಡ ಬಳಿಕ ತಾ. ೮ರಂದು ಕಟ್ಟಡವನ್ನು ಇಲಾಖೆಗೆ ಹಸ್ತಾಂತರ ಮಾಡಿರುವುದಾಗಿ ರಾಜ್ಯ ಪುರಾತತ್ವ ಮತ್ತು ಪಾರಂಪರಿಕ ಕಟ್ಟಡ ಗುತ್ತಿಗೆದಾರ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.
ಅರಮನೆ ಕಾಮಗಾರಿ
ಸರ್ಕಾರಿ ವಸ್ತು ಸಂಗ್ರಹಾಲಯದ ಬಳಿ ಇರುವ ಅರಮನೆ ನವೀಕರಣ ಕಾಮಗಾರಿ ಭರದಿಂದ ಸಾಗಿದೆ. ವಿದ್ಯುತ್ ಸಂಪರ್ಕ ಕಲ್ಪಿಸುವುದು ಸೇರಿದಂತೆ ಅಂತಿಮ ಹಂತದ ಕೆಲಸಗಳು ನಡೆಯುತ್ತಿದ್ದು, ಇನ್ನೆರಡು ತಿಂಗಳ ಒಳಗಾಗಿ ಸಂಪೂರ್ಣ ಕಾಮಗಾರಿ ಪೂರ್ಣಗೊಳ್ಳಲಿರುವುದಾಗಿ ಮೂಲಗಳಿಂದ ಮಾಹಿತಿ ಲಭಿಸಿದೆ. ೧೦ ಕೋಟಿ ೭೦ ಲಕ್ಷ ರೂ. ವೆಚ್ಚದಲ್ಲಿ ಈ ಕಾಮಗಾರಿ ನಡೆಯುತ್ತಿದೆ.
ರಾಜ್ಯ ಉಚ್ಚ ನ್ಯಾಯಾಲಯದ ನಿರ್ದೇಶನದ ಮೇರೆಗೆ ರಾಜ್ಯ ಸರ್ಕಾರ ೨೦೨೦ರಲ್ಲಿ ಈ ಕಾಮಗಾರಿಗೆ ಅನುದಾನ ಒದಗಿಸಿದ್ದು, ೨೦೨೧ರ ಅಕ್ಟೋಬರ್ನಿಂದ ಭಾರತೀಯ ಪ್ರಾಚ್ಯ ವಸ್ತು ಇಲಾಖೆ ಈ ಕಾಮಗಾರಿಯನ್ನು ನಿರ್ವಹಿಸುತ್ತಿದೆ. ೧೯೨೦ರಲ್ಲಿ ಕೂರ್ಗ್ ಕಮಿಷನ್ ನೋಟಿಫಿಕೇಷನ್ನಲ್ಲಿ ಕೋಟೆ, ಅರಮನೆಯನ್ನು ಸಂರಕ್ಷಿತ ಸ್ಮಾರಕವೆಂದು ಘೋಷಿಸಲಾಗಿತ್ತು. ನಂತರ ೧೯೨೪ರಲ್ಲಿ ಈ ಪಟ್ಟಿಯಿಂದ ಅರಮನೆಯನ್ನು ಕೈ ಬಿಡಲಾಗಿತ್ತು. ಇದರ ವಿರುದ್ಧ ನಿವೃತ್ತ ಆರ್ಟಿಐ ಕಮಿಷನರ್ ಆಗಿರುವ ಕೊಡಗು ಮೂಲದವರಾಗಿದ್ದು, ಬೆಂಗಳೂರಿನಲ್ಲಿ ನೆಲೆಸಿರುವ ವಿರೂಪಾಕ್ಷಯ್ಯ ಅವರು ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿ ಕೋಟೆ, ಅರಮನೆ ಸಂರಕ್ಷಣೆಗೆ ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಉಚ್ಚ ನ್ಯಾಯಾಲಯ ಈ ಕಟ್ಟಡವನ್ನು ಸಂರಕ್ಷಿಸಬೇಕೆAದು ನಿರ್ದೇಶನ ನೀಡಿತ್ತು. ಈ ಬಗ್ಗೆ ‘ಶಕ್ತಿ’ಯೊಂದಿಗೆ ಮಾತನಾಡಿದ ವಿರೂಪಾಕ್ಷಯ್ಯ ಅವರು ಕೋಟೆ ಹಾಗೂ ಅರಮನೆಯನ್ನು ಮತ್ತಷ್ಟು ಉತ್ತಮವಾಗಿ ನಿರ್ವಹಣೆ ಮಾಡುವ ನಿಟ್ಟಿನಲ್ಲಿ ಇದನ್ನು ಮ್ಯೂಸಿಯಂ ಆಗಿ ಪರಿವರ್ತಿಸುವುದು ಒಳಿತು ಎಂದು ಅಭಿಪ್ರಾಯಪಟ್ಟಿದ್ದಾರೆ.
-ಉಜ್ವಲ್