ಚೆಯ್ಯಂಡಾಣೆ, ಜೂ. ೨೫: ಒಂದೆಡೆ ಬಿಟ್ಟು ಬಿಟ್ಟು ಸುರಿಯುತ್ತಿರುವ ಧಾರಾಕಾರ ಮಳೆ, ಅಲ್ಪಸ್ವಲ್ಪ ಭೂಕುಸಿತ, ಇದರ ಮಧ್ಯೆ ತೋಟಕ್ಕೆ ಹಾಗೂ ನಾಡಿಗೆ ಲಗ್ಗೆಯಿಡುತ್ತಿರುವ ಕಾಡಾನೆ ಗಳ ಹಿಂಡು. ಇದು ಬೇರೆಲ್ಲೂ ಅಲ್ಲ ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನರಿಯಂದಡ ಗ್ರಾಮ ಪಂಚಾಯಿತಿಗೆ ಒಳಪಟ್ಟ ಚೆಯ್ಯಂಡಾಣೆ ಯಲ್ಲಿ. ಕಳೆದ ಕೆಲವು ವರ್ಷಗಳಿಂದ ಇಲ್ಲಿನ ತೋಟಗಳು ಕಾಡಾನೆಗಳ ವಾಸ ಸ್ಥಳವಾಗಿ ಮಾರ್ಪಟ್ಟಿವೆ. ಅರಣ್ಯದಲ್ಲಿ ಕಾಡಾನೆಗಳಿಗೆ ಆಹಾರವಿಲ್ಲದೆ ಆಹಾರ ಅರಸಿ ಅದು ನಾಡಿನತ್ತ ಪಯಣ ಬೆಳೆಸಿ ಇಲ್ಲಿನ ರೈತರ ತೋಟಗಳಿಗೆ ಲಗ್ಗೆ ಇಟ್ಟು ಹಾನಿಪಡಿಸುತ್ತಿವೆ.

ಹಲವು ಆನೆಗಳು ತೋಟಗಳಲ್ಲಿಯೇ ಮರಿ ಹಾಕುತ್ತಿರುವುದು ಸರ್ವೆ ಸಾಮಾನ್ಯವಾಗಿದೆ. ಈ ವ್ಯಾಪ್ತಿಯ ರೈತರ ಕೆರೆ, ಬಾವಿಗಳಲ್ಲಿ ಕಾಡಾನೆ ಹಾಗೂ ಅದರ ಮರಿಗಳು ಬಿದ್ದು ಮೇಲೆ ಬರಲು ಹರಸಾಹಸ ಪಟ್ಟು, ಮೇಲೆ ಬರದೇ ಸಾವನಪ್ಪಿದ ಹಲವಾರು ಘಟನೆಗಳು ನಡೆದಿವೆ.

ಕಾರ್ಮಿಕರು ತೋಟಗಳಿಗೆ ತೆರಳದ ಪರಿಸ್ಥಿತಿ ನಿರ್ಮಾಣವಾಗಿದೆ, ಶಾಲಾ-ಕಾಲೇಜು ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳಲು ಭಯ ಪಡುವಂತಾಗಿದೆ, ರಾತ್ರಿ ವೇಳೆ ಮನೆಯಿಂದ ಹೊರ ಬರಲು ಹೆದರಿಕೆ, ವಾಹನಗಳಲ್ಲಿ ರಾತ್ರಿ ಹಾಗೂ ಹಗಲು ಕೂಡ ಸಂಚರಿಸಲು ಭಯದ ವಾತಾವರಣ ಸೃಷ್ಟಿಯಾಗಿದೆ, ಮನೆಯ ಅಂಗಳದಲ್ಲಿ ವಾಹನ ನಿಲ್ಲಿಸಿದರೆ ಅದನ್ನು ಕೂಡ ಹಾನಿಪಡಿಸುತ್ತಿದೆ.

ಕೂಡಲೇ ಅರಣ್ಯ ಇಲಾಖೆ, ಶಾಸಕರು, ನೂತನ ಸಂಸದರು ಇದಕ್ಕೊಂದು ಶಾಶ್ವತ ಪರಿಹಾರ ಕಂಡುಕೊಳ್ಳಬೇಕು. ಇಲ್ಲ ಈ ವ್ಯಾಪ್ತಿಯ ಸಾರ್ವಜನಿಕರು, ಸಂಘ-ಸAಸ್ಥೆಗಳು ಒಟ್ಟಾಗಿ ಸೇರಿ ಹೋರಾಟ ನಡೆಸುವ ಮುನ್ಸೂಚನೆ ಇದೆ ಎಂಬುದು ಜನರ ಮಾತಾಗಿದೆ.

ನರಿಯಂದಡ ಗ್ರಾಮದ ಮಾದರಿ ಕೃಷಿಕ ಮಕ್ಕಿಮನೆ ಸುಧೀರ್ ರಾಂಬೂಟನ್ ಬೆಳೆದು ಹೆಸರುಗಳಿಸಿದ ರೈತ. ಇವರ ತೋಟಕ್ಕೆ ಲಗ್ಗೆ ಇಟ್ಟ ೮ಕ್ಕೂ ಹೆಚ್ಚು ಕಾಡಾನೆಗಳ ಹಿಂಡು ಸುಮಾರು ೪೦ಕ್ಕೂ ಹೆಚ್ಚು ಪಸಲು ಭರಿತ ಅಡಿಕೆ, ೭೦ಕ್ಕೂ ಹೆಚ್ಚು ಕಾಫಿ ಗಿಡ ಹಾಗೂ ವಿದೇಶಿ ತಳಿಯ ನೂರಕ್ಕೂ ಅಧಿಕ ಸೀಬೆ ಗಿಡಗಳನ್ನು ತುಳಿದು ನಾಶಪಡಿಸಿದೆ. ಇದಲ್ಲದೆ ಗದ್ದೆಯಲ್ಲಿ ಗಿಡಗಳಿಗೆ ನೀರು ಹರಿಯಲು ನಿರ್ಮಿಸಿದ ತೋಡು ಹಾಗೂ ಕೆರೆಗಳಿಗೆ ಹಾನಿಯಾಗಿದ್ದು ನಷ್ಟ ಸಂಭವಿಸಿದೆ.

ಸ್ಥಳಕ್ಕೆ ಭೇಟಿ ನೀಡದ ಅರಣ್ಯಾಧಿಕಾರಿಗಳು

ಇಷ್ಟೆಲ್ಲ ದೊಡ್ಡ ರೀತಿಯಲ್ಲಿ ಕಾಡಾನೆ ದಾಳಿ ಮಾಡಿ ನಷ್ಟ ಸಂಭವಿಸಿದರೂ, ಇಷ್ಟರವರೆಗೆ ಯಾವುದೇ ಉನ್ನತ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ. ಹಲವಾರು ಬಾರಿ ದಾಳಿಯ ಬಗ್ಗೆ ಮಾಹಿತಿ ನೀಡಿದರೂ ಅಧಿಕಾರಿಗಳು ಮಾತ್ರ ಬಂದಿಲ್ಲ, ಕ್ಯಾಂಪ್ ಸಿಬ್ಬಂದಿಗಳು ಮಾತ್ರ ಸ್ಥಳಕ್ಕೆ ಬಂದು ಫೋಟೋ ತೆಗೆದು ಹೋಗುತ್ತಾರೆ ಅನ್ನುತ್ತಾರೆ ಕಂಗಾಲಾದ ರೈತ ಸುಧೀರ್.ಕೂಡಲೇ ಸಂಬAಧಪಟ್ಟ ಅರಣ್ಯ ಇಲಾಖೆ ಸೂಕ್ತ ಪರಿಹಾರ ನೀಡಬೇಕು. ಕಾಡಾನೆ ಸೆರೆ ಹಿಡಿದು ಬೇರೆಡೆ ಸ್ಥಳಾಂತರಿಸಬೇಕು. ತೋಟಗಳಿಗೆ ನುಸುಳದ ರೀತಿಯಲ್ಲಿ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಆಗ್ರಹಿಸಿದರು.

- ಅಶ್ರಫ್, ಚೆಯ್ಯಂಡಾಣೆ.