ಮಡಿಕೇರಿ, ಜೂ. ೨೪: ಕಾಂಗ್ರೆಸ್ ವಕ್ತಾರ ತೆನ್ನೀರ ಮೈನಾ ವಿರುದ್ಧ ಬಿಜೆಪಿ ವತಿಯಿಂದ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರಿಗೆ ದೂರು ನೀಡಲಾಗಿದೆ. ಇಂಧನ ಬೆಲೆ ಏರಿಕೆ ವಿರುದ್ಧ ವೀರಾಜಪೇಟೆಯಲ್ಲಿ ಬಿಜೆಪಿ ನಡೆಸಿದ ಪ್ರತಿಭಟನೆಯನ್ನು ಗುರಿಯಾಗಿಸಿಕೊಂಡು ತೆನ್ನೀರ ಮೈನಾ ಅವರು ಸಾಮಾಜಿಕ ಜಾಲತಾಣದಲ್ಲಿ ‘ಕೋತಿಗಳು ಸರ್ ಕೋತಿಗಳು ಕಳ್ಳು ಕುಡಿದ ಕೋತಿಗಳು’ ಎಂಬುದಾಗಿ ಬರೆದು ಬಿಜೆಪಿ ಕಾರ್ಯಕರ್ತರು ಮರಳು ದಂಧೆಕೋರರು, ಗಾಂಜಾ ದಂಧೆಕೋರರು, ಇಸ್ಪೀಟ್, ಕೆಂಪು ಕಲ್ಲು ದಂಧೆಕೋರರು ಎಂದು ಬರೆದಿರುವುದಲ್ಲದೆ, ಬಿಜೆಪಿ ಕಾರ್ಯಕರ್ತರನ್ನು ಕಜ್ಜಿ ನಾಯಿಗೆ ಹೋಲಿಸಿ ಅವಹೇಳನ ಮಾಡಿದ್ದಾರೆ. ಅಲ್ಲದೆ, ಪ್ರಧಾನಿ ಮೋದಿ, ಬಿಜೆಪಿ ನಾಯಕರುಗಳ ವಿರುದ್ಧವೂ ಪ್ರಚೋದನಾಕಾರಿ ಬರಹಗಳನ್ನು ಬರೆದಿದ್ದಾರೆ.

ಈ ಹಿನ್ನೆಲೆಯಲ್ಲಿ ಮೈನಾ ಅವರ ವಿರುದ್ಧ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ದೂರುದಾರ ಬಿಜೆಪಿ ಮಾಜಿ ಅಧ್ಯಕ್ಷ ಎಂ.ಎA. ರವೀಂದ್ರ ಒತ್ತಾಯಿಸಿದ್ದಾರೆ. ದೂರು ನೀಡುವ ಸಂದರ್ಭ ಮಾಜಿ ಶಾಸಕರುಗಳಾದ ಕೆ.ಜಿ. ಬೋಪಯ್ಯ, ಅಪ್ಪಚ್ಚು ರಂಜನ್, ಬಿಜೆಪಿ ಜಿಲ್ಲಾಧ್ಯಕ್ಷ ರವಿಕಾಳಪ್ಪ, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ವಿ.ಕೆ. ಲೋಕೇಶ್, ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಪಿ.ಎಂ. ರವಿ, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಅನಿತಾ ಪೂವಯ್ಯ, ಕಾರ್ಯದರ್ಶಿ ಬೀನಾ ಬೊಳ್ಳಮ್ಮ, ರವಿ ಬಸಪ್ಪ ಮತ್ತಿತರರು ಹಾಜರಿದ್ದರು.