ಮಡಿಕೇರಿ, ಜೂ. ೨೨: ಒಂದು ವರ್ಷದ ಅವಧಿಯಲ್ಲಿ ಯಾವುದೇ ಅಭಿವೃದ್ಧಿ ಸಾಧಿಸಲಾಗದೆ ಕಂಗೆಟ್ಟಿರುವ ಕಾಂಗ್ರೆಸ್‌ನ ಶಾಸಕರು ಬಿಜೆಪಿ ಕಾರ್ಯಕರ್ತರ ಮೇಲೆ ಸುಳ್ಳು ಮೊಕದ್ದಮೆ ಹೂಡಿ ಬಿಜೆಪಿಯನ್ನು ದಮನ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂದು ಕೊಡಗು ಜಿಲ್ಲಾ ಬಿಜೆಪಿ ಆರೋಪಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ವಿ.ಕೆ.ಲೋಕೇಶ್ ಮಾತನಾಡಿ, ಕಾಂಗ್ರೆಸ್ ಸರಕಾರ ಒಂದು ವರ್ಷ ಅಧಿಕಾರ ಪೂರೈಸಿದೆ, ಜಿಲ್ಲೆಯಲ್ಲೂ ಈರ್ವರು ಶಾಸಕರಿದ್ದರೂ ಒಂದು ವರ್ಷದಿಂದ ಯಾವುದೇ ಯೋಜನೆಗಳನ್ನು ಜಾರಿಗೊಳಿಸಿಲ್ಲ. ಅಭಿವೃದ್ಧಿ ಶೂನ್ಯವಾಗಿದೆ. ಅದೂ ಅಲ್ಲದೆ, ಕಳೆದ ಲೋಕಸಭಾ ಚುನಾವಣೆಯಲ್ಲಿ ವೀರಾಜಪೇಟೆ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗೆ ೩೨ ಸಾವಿರ ಅಧಿಕ ಮತ ನೀಡುವ ಮೂಲಕ ಜಿಲ್ಲೆಯ ಜನತೆ ಕಾಂಗ್ರೆಸ್ ಪಕ್ಷವನ್ನು ತಿರಸ್ಕರಿಸಿದ್ದಾರೆ. ಹಾಗಾಗಿ ಬಿಜೆಪಿಯನ್ನು ದಮನ ಮಾಡಲು, ಕಾರ್ಯಕರ್ತರನ್ನು ಬೆದರಿಸಿ ಹಿಮ್ಮೆಟ್ಟಿಸುವ ಕಾರ್ಯವನ್ನು ವೀರಾಜಪೇಟೆ ಶಾಸಕರು ಮಾಡುತ್ತಿದ್ದಾರೆ. ಇಂತಹ ಬೆದರಿಕೆಗಳಿಗೆ ಬಿಜೆಪಿಯವರು ಎಂದಿಗೂ ಜಗ್ಗುವುದಿಲ್ಲ ಎಂದು ಹೇಳಿದರು.

ಬೆಲೆ ಏರಿಕೆ ವಿರುದ್ಧ ವೀರಾಜಪೇಟೆಯಲ್ಲಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಸಾರ್ವಜನಿಕ ಆಸ್ತಿ ಪಾಸ್ತಿಗಳಿಗೆ ಹಾನಿ ಮಾಡಲಾಗಿದೆ ಎಂದು ಬಿಜೆಪಿಯ ೨೯ ಮಂದಿ ಮೇಲೆ ಸುಳ್ಳು ಮೊಕದ್ದಮೆ ಹೂಡಲಾಗಿದೆ. ವಾಸ್ತವವಾಗಿ ಯಾವುದೇ ಹಾನಿ ಉಂಟಾಗಿಲ್ಲ. ರಾಜ್ಯದಾದ್ಯಂತ ಎಲ್ಲ ತಾಲೂಕುಗಳಲ್ಲಿ ಪ್ರತಿಭಟನೆಗಳು ನಡೆದಿದ್ದು, ಎಲ್ಲಿಯೂ ಮೊಕದ್ದಮೆ ದಾಖಲು ಮಾಡಿಲ್ಲ. ವೀರಾಜಪೇಟೆಯಲ್ಲಿ ಮಾತ್ರ ವಿಶೇಷವಾಗಿ ದಾಖಲು ಮಾಡಲಾಗಿದೆ ಎಂದರು.

ಕಾAಗ್ರೆಸ್ ಸರಕಾರ ಬಂದ ಮೇಲೆ ಜನವಿರೋಧಿ ಕೆಲಸಗಳನ್ನೇ ಮಾಡುತ್ತಿದೆ. ಜಮ್ಮಾ ಜಾಗದಲ್ಲಿನ ಮರಗಳನ್ನು ಗುರುತಿಸಿ ಹಕ್ಕು ಕಸಿಯಲು ಪ್ರಯತ್ನಿಸುತ್ತಿದೆ. ಬಿಜೆಪಿ ಪ್ರತಿಭಟಿಸಿದ ನಂತರ ಮರ ಕಡಿಯಲು ಬಿಡುವುದಿಲ್ಲ ಎಂದು ಕಾಂಗ್ರೆಸ್ ಶಾಸಕರು ಹೇಳುತ್ತಿದ್ದಾರೆ. ದೇವಾಲಯಗಳಲ್ಲಿ ಬಳಸಲಾಗುವ ಕೊಂಬು, ನವಿಲು ಗರಿಗಳನ್ನು ವಶಪಡಿಸಿಕೊಳ್ಳುವ ಪ್ರಯತ್ನ ಮಾಡುತ್ತಿದೆ.

(ಮೊದಲ ಪುಟದಿಂದ) ಇಂತಹ ಜನ ವಿರೋಧಿ ನೀತಿ ವಿರುದ್ಧ ಬಿಜೆಪಿ ಪ್ರತಿಭಟಿಸುತ್ತಲೇ ಇರುತ್ತದೆ ಎಂದು ಹೇಳಿದರು.

ಪೊಲೀಸ್ ಸಿಬ್ಬಂದಿಯೋರ್ವರ ಹೇಳಿಕೆ ಮೂಲಕ ಪ್ರತಿಭಟನೆಗೆ ಅನುಮತಿ ಪಡೆದುಕೊಂಡಿಲ್ಲವೆAದು ಮೊಕದ್ದಮೆ ದಾಖಲಿಸಿಕೊಳ್ಳಲಾಗಿದೆ. ಆದರೆ, ವೃತ್ತ ನಿರೀಕ್ಷರಿಂದ ಅನುಮತಿ ಪಡೆದು, ಪತ್ರಿಕಾಗೋಷ್ಠಿ ಮೂಲಕ ಮಾಹಿತಿ ನೀಡಿ ಪ್ರತಿಭಟನೆ ನಡೆಸಲಾಗಿದೆ. ಎಲ್ಲವನ್ನೂ ಕಾನೂನಾತ್ಮಕವಾಗಿ ಎದುರಿಸಲು ಬಿಜೆಪಿ ಸಿದ್ಧವಿದೆ ಎಂದು ಹೇಳಿದರು.

ಮತ್ತೋರ್ವ ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ ಮಾತನಾಡಿ, ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಕಾರ್ಯಕರ್ತರಿಗೆ ಸಭ್ಯತೆ ಮತ್ತು ಸಂಸ್ಕೃತಿಯ ಪಾಠ ಹೇಳ ಹೊರಟಿದ್ದಾರೆ. ಈ ಹಿಂದೆ ವಿಧಾನಸಭಾಧ್ಯಕ್ಷರಾಗಿದ್ದ ಕೆ.ಜಿ.ಬೋಪಯ್ಯ ಹಾಗೂ ಮಾಜಿ ಶಾಸಕರೋರ್ವರ ಪ್ರತಿಕೃತಿ ದಹನ ಮಾಡುವ ಸಂದರ್ಭದಲ್ಲಿ ಇವರ ಸಭ್ಯತೆ, ಸಂಸ್ಕೃತಿ ಎಲ್ಲಿ ಹೋಗಿತ್ತು ಎಂದು ಪ್ರಶ್ನಿಸಿದರು. ಪ್ರತಿಕೃತಿ ದಹನ ಹೋರಾಟದ ಒಂದು ಭಾಗವಾಗಿದೆ. ಜನವಿರೋಧಿ ನೀತಿ ಇದ್ದಾಗ ಬಿಜೆಪಿ ಪ್ರತಿಭಟಿಸುತ್ತದೆ. ಚುನಾವಣೆಯಲ್ಲಿ ಸೋಲು ಕಂಡಿರುವ ಕಾಂಗ್ರೆಸ್ ಅಮಾಯಕರ ಮೇಲೆ ಮೊಕದ್ದಮೆ ಹೂಡಿ ಬಿಜೆಪಿಯವರ ಧ್ವನಿ ಅಡಗಿಸಲು ಪ್ರಯತ್ನಿಸುತ್ತಿದೆ. ಹೋರಾಟದಿಂದಲೇ ಬಂದ ಪಕ್ಷವಾಗಿದ್ದು, ಗೊಡ್ಡು ಬೆದರಿಕೆಗಳಿಗೆ ಹೆದರುವುದಿಲ್ಲ. ಕಾರ್ಯಕರ್ತರ ಮೇಲಿನ ಮೊಕದ್ದಮೆಯನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.

ವಕ್ತಾರ ತಳೂರು ಕಿಶೋರ್ ಕುಮಾರ್ ಮಾತನಾಡಿ, ಕಾಂಗ್ರೆಸ್ ಆಡಳಿತವಿದೆ ಎಂದು ಪೊಲೀಸ್ ಇಲಾಖೆ ಅವರ ಕೈಗೊಂಬೆಯಾಗಬಾರದು. ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಸುಳ್ಳು ಮೊಕದ್ದಮೆ ಹಾಕುವುದರಲ್ಲಿ ಕಾಂಗ್ರೆಸ್‌ನವರು ನಿಸ್ಸೀಮರು. ಈ ಹಿಂದೆ ಕಾಂಗ್ರೆಸ್ ಸರಕಾರವಿದ್ದಾಗ ಪಾಲೂರು ಗಲಾಟೆ, ರಾಮ ಮಂದಿರ ಹೋರಾಟ ಸಂದರ್ಭಗಳಲ್ಲಿಯೂ ಸಾಕಷ್ಟು ತೊಂದರೆ ಕೊಟ್ಟಿದ್ದಾರೆ ಎಂದು ಆರೊಪಿಸಿದರು. ಗೋಷ್ಠಿಯಲ್ಲಿ ಜಿಲ್ಲಾ ವಕ್ತಾರ ಬಿ.ಕೆ.ಅರುಣ್‌ಕುಮಾರ್, ವೀರಾಜಪೇಟೆ ತಾಲೂಕು ವಕ್ತಾರ ರಾಕೇಶ್ ದೇವಯ್ಯ, ಪ್ರಧಾನ ಕಾರ್ಯದರ್ಶಿ ಮುದ್ದಿಯಡ ಮಂಜು ಇದ್ದರು.