ಸೋಮವಾರಪೇಟೆ, ಜೂ. ೨೨: ರಾಜ್ಯ ಸರಕಾರದ ನಿವೃತ್ತ ನೌಕರರಿಗೂ ಆರೋಗ್ಯ ಸಂಜೀವಿನಿ ಸೇವೆಯನ್ನು ವಿಸ್ತರಿಸಬೇಕೆಂದು ರಾಜ್ಯ ಸರಕಾರಿ ನಿವೃತ್ತ ನೌಕರರ ಸಂಘದ ತಾಲೂಕು ಘಟಕದ ಅಧ್ಯಕ್ಷ ಸಿ.ಕೆ. ಮಲ್ಲಪ್ಪ ಆಗ್ರಹಿಸಿದರು.

ಇಲ್ಲಿನ ಮಹಿಳಾ ಸಹಕಾರ ಸಮಾಜದ ಸಭಾಂಗಣದಲ್ಲಿ ನಡೆದ ನಿವೃತ್ತ ನೌಕರರ ಸಂಘದ ಬೆಳ್ಳಿಹಬ್ಬ ಆಚರಣೆ ಮತ್ತು ಸಂಘದ ವಾರ್ಷಿಕ ಮಹಾಸಭೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಹುತೇಕ ನಿವೃತ್ತ ನೌಕರರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವರಿಗೆ ಪಿಂಚಣಿ ಹಣ ಆಸ್ಪತ್ರೆ ಬಿಲ್‌ಗೂ ಸಾಕಾಗುವುದಿಲ್ಲ. ಈ ನಿಟ್ಟಿನಲ್ಲಿ ಆರೋಗ್ಯ ಸಂಜೀವಿನಿ ಸೇವೆ ಎಲ್ಲಾ ನಿವೃತ್ತ ನೌಕರರಿಗೂ ದೊರಕುವಂತಾಗಬೇಕು ಎಂದರು.

೨೦೦೮-೦೯ರಲ್ಲಿ ಕೊಡಗು ಜಿಲ್ಲೆಯಲ್ಲಿಯೇ ಪ್ರಪ್ರಥಮವಾಗಿ ನಿವೃತ್ತ ನೌಕರರ ಸಂಘದಲ್ಲಿ ಮರಣ ನಿಧಿಯನ್ನು ಪ್ರಾರಂಭಿಸಲಾಗಿದ್ದು, ಇದು ಸಂಘದ ಸದಸ್ಯರ ಕುಟುಂಬಕ್ಕೆ ಅನುಕೂಲವಾಗಿದೆ ಎಂದರು.

ಇದೇ ಸಂದರ್ಭ ನಿವೃತ್ತ ಶಿಕ್ಷಕ ಚಂದ್ರಹಾಸ್ ಭಟ್ ಸಂಪಾದಕತ್ವದಲ್ಲಿ ಹೊರತಂದ ‘ಸಂಧ್ಯಾರಾಗ’ ಸ್ಮರಣ ಸಂಚಿಕೆಯನ್ನು ಬಿಡುಗಡೆ ಗೊಳಿಸಲಾಯಿತು.

ವೇದಿಕೆಯಲ್ಲಿ ಸಂಘದ ಜಿಲ್ಲಾಧ್ಯಕ್ಷ ಮಾದಮ್ಮಯ್ಯ, ತಾಲೂಕು ಘಟಕದ ಗೌರವಾಧ್ಯಕ್ಷ ಹಾಲೇಬೇಲೂರು ನಿರ್ವಾಣಿ ಶೆಟ್ಟಿ, ಸಂಘದ ಪದಾಧಿಕಾರಿಗಳು, ಹೋಬಳಿ ಘಟಕದ ಅಧ್ಯಕ್ಷರುಗಳು ಉಪಸ್ಥಿತರಿದ್ದರು.