ಮಡಿಕೇರಿ, ಜೂ. ೨೨: ಜಿಲ್ಲೆಯಲ್ಲಿ ಅತ್ಯಂತ ಚರ್ಚೆಗೆ ಗ್ರಾಸವಾಗಿ ಸುದ್ದಿಯಲ್ಲಿರುವ ಎ.ಎಸ್. ಪೊನ್ನಣ್ಣ ಸೇರಿದಂತೆ ಕಾಂಗ್ರೆಸ್ ನಾಯಕರ ಪ್ರತಿಕೃತಿ ದಹನ ಹಾಗೂ ಅಣಕು ಶವಯಾತ್ರೆಯ ವಿಷಯದ ಕುರಿತು ಶಾಸಕ ಎ.ಎಸ್. ಪೊನ್ನಣ್ಣ ಮೌನ ಮುರಿದಿದ್ದು, ವೀಡಿಯೋ ಸಂದೇಶದ ಮೂಲಕ ತಮ್ಮ ಪ್ರತಿಕ್ರಿಯೆ ನೀಡಿದ್ದಾರೆ.
ಈ ವಿಚಾರದ ಕುರಿತು ಯಾವುದೇ ಪ್ರತಿಕ್ರಿಯೆ ನೀಡಬಾರದು ಎಂಬ ನಿರ್ಧಾರಕ್ಕೆ ಬಂದಿದ್ದೆ ಕೊಡಗಿನ ಸಮಸ್ತ ಜನತೆ ತನ್ನ ಮೇಲೆ ಪ್ರೀತಿ, ವಿಶ್ವಾಸ ತೋರಿದ ಹಿನ್ನೆಲೆ ಪ್ರತಿಕ್ರಿಯೆ ನೀಡಬೇಕಾದ ಪರಿಸ್ಥಿತಿ ಬಂದಿದೆ. “ಜಾತಿ, ಧರ್ಮ ಮೀರಿ ಘಟನೆಯನ್ನು ಖಂಡಿಸಿದ್ದಾರೆ.
(ಮೊದಲ ಪುಟದಿಂದ) ಪ್ರತಿಭಟನೆ ಮೂಲಭೂತ ಹಕ್ಕು. ಬೆಲೆ ಏರಿಕೆ ಸೇರಿದಂತೆ ಇನ್ನಿತರ ನೀತಿಗಳನ್ನು ವಿರೋಧಿಸುವ ಹಕ್ಕು ಎಲ್ಲರಿಗೂ ಇದೆ. ಪ್ರತಿಭಟನೆ ಮಾಡುವ ಸಂಪೂರ್ಣ ಹಕ್ಕು ವಿರೋಧ ಪಕ್ಷಗಳಿಗಿವೆ. ನಾವೂ ಪ್ರತಿಭಟನೆಯನ್ನು ಮಾಡುತ್ತೇವೆ. ಕೊಡಗು ಜಿಲ್ಲೆ ಸೌಜನ್ಯತೆ, ಸಂಸ್ಕೃತಿಗೆ ಪ್ರಸಿದ್ಧವಾಗಿರುವ ಜಿಲ್ಲೆ. ವಿವಿಧ ಕ್ಷೇತ್ರಗಳಲ್ಲಿ ಕೊಡಗಿನ ಕೊಡುಗೆ ದೊಡ್ಡದಿದೆ. ಜಿಲ್ಲೆಗಿರುವ ಗೌರವವನ್ನು ಉಳಿಸಬೇಕು. ಕೆಳಮಟ್ಟಕ್ಕೆ ಇಳಿಯಬಾರದು” ಎಂದು ಸೌಜನ್ಯಯುತ ಮಾತಿನ ಮೂಲಕ ಪರೋಕ್ಷವಾಗಿ ಬಿಜೆಪಿಗೆ ಸಲಹೆಯನ್ನು ನೀಡಿದ್ದಾರೆ.
“ಕೆಳಮಟ್ಟಕ್ಕೆ ಇಳಿಯದಿದ್ದರೆ ಘನತೆ, ಗೌರವ ಉಳಿಯುತ್ತದೆ. ಪ್ರತಿಭಟನೆ ಮಾಡಿ, ಆದರೆ, ಅದು ಕೀಳುಮಟ್ಟಕ್ಕೆ ಕೊಂಡೊಯ್ದು ನೋವು ಉಂಟು ಮಾಡಬೇಡಿ, ಜನರ ಪ್ರೀತಿಗೆ ಋಣಿಯಾಗಿರುವೆ. ಜನರು ತೋರಿದ ಪ್ರೀತಿ ಕೆಲಸ ಮಾಡಲು ಮತ್ತಷ್ಟು ಉತ್ಸಾಹ ಮೂಡಿಸಿದೆ. ವೃತ್ತಿ ತ್ಯಜಿಸಿ, ವೈಯಕ್ತಿಕ ಬದುಕು ಕಳೆದುಕೊಂಡು ಜನಪರವಾಗಿ ನಡೆದುಕೊಳ್ಳುತ್ತಿದ್ದೇನೆ. ಸಮಾಜ ಮುಖಿಯಾಗಿ ಮುಂದುವರೆಯುವೆ, ಜವಾಬ್ದಾರಿ, ಬದ್ಧತೆಯಿಂದ ಕರ್ತವ್ಯ ನಿರ್ವಹಣೆ ಮಾಡಿ ಜನ ಸೇವೆ ಮುಂದುವರೆಸುತ್ತೇನೆ” ಎಂದು ಪೊನ್ನಣ್ಣ ತಿಳಿಸಿದ್ದಾರೆ.