ಗೌಪ್ಯ ಮತದಾನದ ಮೂಲಕ ನಡೆದ ಚುನಾವಣಾ ಪ್ರಕ್ರಿಯೆ
ಸುಂಟಿಕೊಪ್ಪ, ಜೂ. ೨೧: ಸುಂಟಿಕೊಪ್ಪ ಪ.ಪೂ. ಕಾಲೇಜಿನಲ್ಲಿ ೨೦೨೪-೨೫ನೇ ಸಾಲಿನ ವಿದ್ಯಾರ್ಥಿ ಸಂಘದ ಪದಾಧಿಕಾರಿಗಳ ಆಯ್ಕೆಯನ್ನು ಪ್ರಜಾಪ್ರಭುತ್ವ ಮಾದರಿ ಗುಪ್ತ ಮತದಾನದ ಮೂಲಕ ಮಾಡಲಾಯಿತು. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲೆ ಶ್ರೀಲತಾ ಅವರು ವಹಿಸಿ ಮಾತನಾಡಿ, ಭವಿಷ್ಯದ ಯುವ ಮತದಾರರ ಮಹತ್ವ ಮತ್ತು ಚುನಾವಣಾ ಪ್ರಕ್ರಿಯೆಗಳ ಬಗ್ಗೆ ವಿವರಿಸಿದರು.
ಪ್ರಜಾಪ್ರಭುತ್ವ ಮಾದರಿಯಲ್ಲಿ ಮತದಾನ ಮಾಡುವ ಮೂಲಕ ಉತ್ತಮ ಆಭ್ಯರ್ಥಿಗಳನ್ನು ಆಯ್ಕೆ ಮಾಡುವ ಪವಿತ್ರವಾದ ಹಕ್ಕಿನ ಶ್ರೇಷ್ಠತೆಯನ್ನು ವಿದ್ಯಾರ್ಥಿಗಳು ತಮ್ಮಗಳ ಕಾಲೇಜು ವ್ಯಾಸಂಗದ ಅವಧಿಯಲ್ಲಿಯೇ ಮನವರಿಕೆ ಮಾಡಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
ನಂತರ ಮಕ್ಕಳಿಂದ ಗೌಪ್ಯ ಮತದಾನ ನಡೆಯಿತು ಮತ ಎಣಿಕೆಯನ್ನು ಉಪನ್ಯಾಸಕರುಗಳಾದ ಸುನೀತಾ, ಅಭಿಷೇಕ್, ಪದ್ಮಾವತಿ, ಸುಚಿತ್ರಾ, ಅನುಷಾ, ಸಂಧ್ಯಾ, ಕವಿತ, ಈಶ ನೆರವೇರಿಸಿದರು.
ಮತದಾನದಲ್ಲಿ ಕಾಲೇಜು ನಾಯಕನಾಗಿ ಜೋಶ್ವರದಿ, ಉಪನಾಯಕಿಯಾಗಿ ರಿಶಾನ, ಕ್ರೀಡಾ ಮಂತ್ರಿ ಸಾಹುಲ್ ಹಮಿತಿ, ಸಾಂಸ್ಕೃತಿಕ ಮಂತ್ರಿ ಫಾತಿಮ ಸುಹೇರಾ, ಸ್ವಚ್ಛತಾ ಮಂತ್ರಿಯಾಗಿ ಸಮೀರಾ ಅವರುಗಳು ಆಯ್ಕೆಗೊಂಡರು.