ಕಣಿವೆ, ಜೂ. ೨೧: ಹಾರಂಗಿಯ ಹುಲಗುಂದ ರುದ್ರ ಭೂಮಿಗೆ

ರೂ. ೧,೫೧,೬೩೦ ವೆಚ್ಚದ ಶವಗಳನ್ನು ಸುಡುವ ಸಿಲಿಕಾನ್ ಚೇಂಬರ್‌ಗೆ ಮಂಜೂರಾತಿ ಪತ್ರವನ್ನು ಭಾಸ್ಕರ್ ನಾಯಕ್ ಅವರಿಗೆ ಧರ್ಮಸ್ಥಳ ಸಂಘದ ವತಿಯಿಂದ ನೀಡಲಾಯಿತು.

ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಹಾಗೂ ಹುಲುಗುಂದ ವ್ಯಾಪ್ತಿಯ ಹಿಂದೂ ರುದ್ರಭೂಮಿಗೆ ಶವ ಸುಡುವ ಸಿಲಿಕಾನ್ ಚೇಂಬರ್ ಮಂಜೂರಾತಿ ಪತ್ರವನ್ನು ನೀಡಲಾಯಿತು. ಚಿಕ್ಕತ್ತೂರು ಕಾರ್ಯಕ್ಷೇತ್ರದ ವತಿಯಿಂದ ಹುಲಗುಂದ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಂಜೂರಾತಿ ಪತ್ರವನ್ನು ಹಸ್ತಾಂತರಿಸಲಾಯಿತು.

ಈ ಸಂದರ್ಭ ಮಾತನಾಡಿದ ಧರ್ಮಸ್ಥಳ ಸಂಘದ ಯೋಜನಾಧಿಕಾರಿ ರೋಹಿತ್, ಡಾ. ಡಿ. ವೀರೇಂದ್ರ ಹೆಗ್ಗಡೆಯವರ ಆಶೀರ್ವಾದದಿಂದ ಕೊಡಗು ಜಿಲ್ಲೆಗೆ ಹತ್ತು ಹಲವಾರು ಕಾರ್ಯಕ್ರಮಗಳು ಹಾಗೂ ಧನ ಸಹಾಯ ಮಾಡುತ್ತಾ ಬರುತ್ತಿದ್ದೇವೆ. ಸಮುದಾಯ ಭವನ, ಶಾಲೆಗಳ ದುರಸ್ತಿ, ಮೃತಪಟ್ಟವರಿಗೆ ಧನಸಹಾಯ ಹೀಗೆ ಹತ್ತು ಹಲವು ಕಾರ್ಯಕ್ರಮಗಳನ್ನು ಮಾಡುತ್ತಾ ಬರುತ್ತಿದ್ದೇವೆ. ಅದೇ ರೀತಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಹುಲಗುಂದ ಗ್ರಾಮದ ಹಿಂದೂ ರುದ್ರ ಭೂಮಿಗೆ ರೂ. ೧,೫೧,೬೩೦ ವೆಚ್ಚದಲ್ಲಿ ಸಿಲಿಕಾನ್ ಚೇಂಬರ್ ನಿರ್ಮಾಣಕ್ಕೆ ಆದೇಶ ಪತ್ರವನ್ನು ಕೂಡುಮಂಗಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಭಾಸ್ಕರ್ ನಾಯಕ್ ಅವರಿಗೆ ನೀಡಲಾಗಿದೆ ಎಂದು ತಿಳಿಸಿದರು. ನಂತರ ಭಾಸ್ಕರ್ ನಾಯಕ್, ಕೂಡು ಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಾರಂಗಿ ಹುಲಗುಂದ ಗ್ರಾಮದ ಹಿಂದೂ ರುದ್ರ ಭೂಮಿಗೆ ಶವ ಸುಡುವ ಸಿಲಿಕಾನ್ ಚೇಂಬರ್ ಅಗತ್ಯವಿತ್ತು. ಮುಂದೆ ಮಳೆಗಾಲ ಪ್ರಾರಂಭವಾಗುವ ಹಿನ್ನೆಲೆಯಲ್ಲಿ ಸಿಲಿಕಾನ್ ಚೇಂಬರ್ ನಮಗೆ ಸಾಕಷ್ಟು ಪ್ರಯೋಜನಕಾರಿಯಾಗಲಿದೆ. ಸೌದೆ ಉಳಿತಾಯದೊಂದಿಗೆ ದೈಹಿಕ ಶ್ರಮವು ಬಹುಪಾಲು ತಪ್ಪುತ್ತದೆ. ಸರಿಯಾಗಿ ಬಿಸಿಯಾಗುವ ಈ ಚೇಂಬರ್ ನಿಂದಾಗಿ ಮೃತದೇಹಗಳ ಅಂತ್ಯಕ್ರಿಯೆಯು ಸುಗಮವಾಗುತ್ತದೆ ಎಂದರು. ಹಾರಂಗಿ ಹಾಗೂ ಹುಲುಗುಂದ ಗ್ರಾಮಸ್ಥರ ಪರವಾಗಿ ರೋಹಿತ್ ಅವರಿಗೆ ಶಾಲು ಹೊದಿಸಿ ಸನ್ಮಾನಿಸಿ, ಗೌರವಿಸಲಾಯಿತು. ಈ ಸಂದರ್ಭ ಕೂಡುಮಂಗಳೂರು ಗ್ರಾಮ ಪಂಚಾಯಿತಿ ಸದಸ್ಯ ಮಣಿಕಂಠ, ಧರ್ಮಸ್ಥಳ ಸಂಘದ ಮೇಲ್ವಿಚಾರಕ ಯತೀಶ್. ಸೇವಾ ಪ್ರತಿನಿಧಿ ಸಂಗೀತ, ದಿನೇಶ್ ಹಾಗೂ ಧರ್ಮಸ್ಥಳ ಸಂಘದ ಸದಸ್ಯರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.