ಕುಶಾಲನಗರ, ಜೂ ೨೧ : ಶತಮಾನ ಪೂರೈಸಿ ಮುನ್ನುಗ್ಗುತ್ತಿರುವ ಕುಶಾಲನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸದಸ್ಯರಿಗೆ ಉತ್ತಮ ಸೇವೆ ನೀಡುವ ಮೂಲಕ ಬ್ಯಾಂಕಿAಗ್ ವ್ಯವಹಾರ ನಡೆಸುತ್ತಿದ್ದು, ೨೦೨೩-೨೪ನೇ ಸಾಲಿನಲ್ಲಿ ರೂ.೧.೨೫ ಕೋಟಿ ನಿವ್ವಳ ಲಾಭಗಳಿಸಿ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಸಂಘದ ಅಧ್ಯಕ್ಷ ಟಿ.ಆರ್.ಶರವಣಕುಮಾರ್ ಹೇಳಿದರು.

ಸಂಘದ ಕಛೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕಳೆದ ಸಾಲಿನಲ್ಲಿ ರೂ.೨೩೭.೭೮ ಕೋಟಿ ವಾರ್ಷಿಕ ವಹಿವಾಟು ನಡೆಸಿದ್ದು, ಪ್ರಸಕ್ತ ವರ್ಷ ರೂ.೨.೯೦ ಕೋಟಿಗಳಷ್ಡು ಹೆಚ್ಚಿನ ವಹಿವಾಟು ನಡೆಸಲಾಗಿದೆ.

ಸಂಘವು ಕಳೆದ ಏಳು ವರ್ಷಗಳಿಂದಲೂ ಸತತ ಒಂದು ಕೋಟಿಗೂ ಮೀರಿದ ಲಾಭ ಗಳಿಸುತ್ತಿರುವುದು ಹೆಮ್ಮೆಯ ವಿಚಾರವಾಗಿದೆ.

ಸಂಘದ ಸದಸ್ಯರಿಗೆ ಶೇ.೧೮ ಡಿವಿಡೆಂಟ್ ನೀಡಲು ತೀರ್ಮಾನಿಸಲಾಗಿದೆ. ಸಂಘವು ೩೬೦೪ ಸದಸ್ಯರಿಂದ ರೂ.೩೫೮.೩೯ ಲಕ್ಷಗಳ ಪಾಲು ಹಣವನ್ನು ಹೊಂದಿದೆ. ಸಂಘದ ದುಡಿಯುವ ಬಂಡವಾಳ ಕಳೆದ ಸಾಲಿನಲ್ಲಿ ರೂ.೬೦೦೬.೭೪ ಲಕ್ಷ ಇದ್ದು, ಈ ಸಾಲಿನಲ್ಲಿ ದುಡಿಯುವ ಬಂಡವಾಳ ರೂ.೬೯೫೬.೪೩ ಲಕ್ಷ ಗಳಷ್ಟು ಕ್ರೋಢಿಕರಿಸಿದೆ. ಸಂಘದಲ್ಲಿ ರೂ.೮೧೩.೨೧ ಲಕ್ಷ ಠೇವಣಿ ಸಂಗ್ರಹಿಸಿದ್ದು, ಇದು ಸಂಘವು ಬೆಳೆಯುತ್ತಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.

ಸಂಘದ ಸದಸ್ಯರ ಅನುಕೂಲಕ್ಕಾಗಿ ವಿವಿಧ ರೀತಿಯ ಸಾಲ ಸೌಲಭ್ಯಗಳನ್ನು ನೀಡಲಾಗುತ್ತಿದೆ. ಜಾಮೀನು ಸಾಲದ ಮಿತಿ ರೂ.೪ ಲಕ್ಷ, ಮಧ್ಯಮಾವಧಿ ಸಾಲ ರೂ.೧೫ ರಿಂದ ೨೦ ಲಕ್ಷ, ನಿವೇಶನ, ಕಟ್ಟಡ, ವಾಣಿಜ್ಯ ಮಳಿಗೆ, ವಾಸದ ಮನೆ ಖರೀದಿ ಸಾಲ ರೂ.೫೦ ಲಕ್ಷ ವ್ಯಾಪಾರಾಭಿವೃದ್ಧಿ, ಕೈಗಾರಿಕೆ ಅಭಿವೃದ್ಧಿಯಂತಹ ದೀರ್ಘಾವಧಿ ಸಾಲ ರೂ. ೫೦ ಲಕ್ಷ, ವನಿತಾ ಬಂಧು ಮಹಿಳಾ ಗುಂಪು ಸಾಲ ರೂ. ೨.೫ ಲಕ್ಷ ಹಾಗೂ ಸ್ವ ಸಹಾಯ ಗುಂಪು ಸಾಲ ರೂ. ೧೫ ಲಕ್ಷ ನೀಡಲಾಗುತ್ತಿದೆ. ಸದಸ್ಯರು ಸಾಲ ಸೌಲಭ್ಯಗಳನ್ನು ಸದುಪಯೋಗ ಪಡಿಸಿಕೊಂಡು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವ ಮೂಲಕ ಸಂಘದ ಬೆಳವಣಿಗೆಗೆ ಒತ್ತು ನೀಡಬೇಕು ಎಂದು ಮನವಿ ಮಾಡಿದರು.

ಸಂಘವು ಪ್ರಾರಂಭಿಸಿದ ವನಿತಾ ಬಂಧು ಮತ್ತು ಜನಚೈತನ್ಯ ಎಂಬ ಜಂಟಿ ಭಾದ್ಯತಾ ಗುಂಪು ಸಾಲ ಯೋಜನೆಯು ಯಶಸ್ಚಿಯಾಗಿದ್ದು,ಈ ಯೋಜನೆಯಡಿಯಲ್ಲಿ ಒಟ್ಟು ೮೮೭ ಮಹಿಳೆಯರಿಗೆ ಪ್ರಸಕ್ತ ಸಾಲಿನಲ್ಲಿ ರೂ.೪.೬೩ ಕೋಟಿ ಸಾಲ ವಿತರಿಸಿದ್ದು, ವಾರ್ಷಿಕ ಅಂತ್ಯಕ್ಕೆ ರೂ.೪.೩೬ ಕೋಟಿ ಬರಲು ಬಾಕಿಯಿದೆ. ಈ ಸಾಲದ ಯೋಜನೆಯಿಂದ ಎಲ್ಲಾ ವರ್ಗದ ಮಹಿಳೆಯರು ಆರ್ಥಿಕ ಸಬಲತೆಯತ್ತ ಸಾಗುತ್ತಿರುವುದು ಸಂಘಕ್ಕೆ ಒಂದು ಹೆಗ್ಗಳಿಕೆಯ ವಿಚಾರವಾಗಿದೆ ಎಂದರು.

ಪ್ರತಿ ಮಹಾಸಭೆಯಲ್ಲಿ ಸದಸ್ಯರ ಪ್ರತಿಭಾವಂತ ಮಕ್ಕಳಿಗೆ ಹಾಗೂ ಬಡ ಮಕ್ಕಳಿಗೆ ಪ್ರೋತ್ಸಾಹ ಬಹುಮಾನ ನೀಡಲಾಗುತ್ತಿದೆ. ಎಸ್.ಎಸ್.ಎಲ್.ಸಿ, ಪಿಯುಸಿ, ಪದವಿ, ಡಿಪ್ಲೋಮಾ, ಇಂಜಿನಿಯರಿAಗ್, ವೈದ್ಯಕೀಯ ಪದವಿಯಲ್ಲಿ ಉತ್ತಮ ಅಂಕಗಳಿಸಿದ ವಿದ್ಯಾರ್ಥಿಗಳನ್ನು ಗುರುತಿಸಿ ಪ್ರೋತ್ಸಾಹ ಬಹುಮಾನದೊಂದಿಗೆ ಸನ್ಮಾನಿಸಿ ಗೌರವಿಸಲಾಗುತ್ತದೆ ಎಂದು ಹೇಳಿದರು.

ಸಂಘದ ಶತಮಾನೋತ್ಸವದ ಸವಿ ನೆನಪಿಗಾಗಿ ಶತಮಾನೋತ್ಸವ ಭವನ ಸಂಕೀರ್ಣ ನಿರ್ಮಾಣ ಮಾಡಲು ಗುಡ್ಡೆಹೊಸೂರು ಬಳಿ ೧೨೦ ಸೆಂಟ್ ನಿವೇಶನವನ್ನು ೨೦೨೧ರಲ್ಲಿ ಖರೀಸಿದ್ದು, ಭವನ ಹಾಗೂ ವಾಹನ ನಿಲುಗಡೆಗೆ ಒಟ್ಟು ೧೭೯.೨೫ ಸೆಂಟ್ ನಿವೇಶನವನ್ನು ಸಂಘಕ್ಕೆ ಖರೀದಿಸಲಾಗಿದೆ ಎಂದು ತಿಳಿಸಿದರು.

ನಾಳೆ ಸಭೆ

ಸಂಘದ ೨೦೨೩-೨೪ನೇ ಸಾಲಿನ ವಾರ್ಷಿಕ ಮಹಾಸಭೆಯು ತಾ. ೨೩ ರಂದು ಪೂರ್ವಾಹ್ನ ೧೧ ಗಂಟೆಗೆ ಗಾಯತ್ರಿ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ವಿ.ಎಸ್. ಆನಂದ ಕುಮಾರ್, ನಿರ್ದೇಶಕರಾದ ಪಿ.ಬಿ.ಯತೀಶ್, ಗಣೇಶ್, ನೇತ್ರಾವತಿ, ಕವಿತಾ ಮೋಹನ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಬಿ.ಲೋಕೇಶ್ ಉಪಸ್ಥಿತರಿದ್ದರು.