ವೀರಾಜಪೇಟೆ, ಜೂ. ೨೦: ಪೆಟ್ರೋಲ್, ಮತ್ತು ಡೀಸೆಲ್ ದರ ಏರಿಕೆ ಖಂಡಿಸಿ ಸಿಪಿಐ(ಎಂ) ಪಕ್ಷದಿಂದ ನಗರದ ಗಡಿಯಾರ ಕಂಬದ ಬಳಿ ಪ್ರತಿಭಟನೆ ನಡೆಸಿ ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗಿದರು

ಪ್ರತಿಭಟನೆ ಸಂದರ್ಭ ಸಿ.ಪಿ.ಐ(ಎಂ) ಜಿಲ್ಲಾ ಸಮಿತಿಯ ಎ.ಸಿ.ಸಾಬು ಮಾತನಾಡಿ, ಬಿ.ಜೆ.ಪಿ. ಪಕ್ಷ ಆಡಳಿತದಲ್ಲಿ ಅನೇಕ ಬಾರಿ ದಿನನಿತ್ಯ ಉಪಯೋಗಿಸುವ ವಸ್ತುಗಳ ಬೆಲೆ ಏರಿಕೆ ಮಾಡಿತ್ತು. ಈಗ ಅದೇ ಚಾಳಿಯನ್ನು ಕಾಂಗ್ರೆಸ್ ಸರಕಾರ ಮಾಡುತ್ತಿದೆ. ಜನರಿಗೆ ಐದು ಗ್ಯಾರಂಟಿಗಳನ್ನು ಚುನಾವಣೆ ಸಂದರ್ಭ ಕೊಟ್ಟ ಮಾತನ್ನು ಉಳಿಸಿಕೊಳ್ಳಲು ಎಲ್ಲಾ ರೀತಿಯಲ್ಲೂ ಜನರಿಂದ ಕಿತ್ತುಕೊಳ್ಳುವ ಕೆಲಸ ಮಾಡುತ್ತಿದೆ. ರಾಜ್ಯ ಸರಕಾರ ಹೆಚ್ಚಿಸಿರುವ ಪೆಟ್ರೋಲ್ ಮತ್ತು ಡೀಸಲ್ ಬೆಲೆಯನ್ನು ಕೂಡಲೇ ವಾಪಸ್ ಪಡೆದುಕೊಳ್ಳಬೇಕು. ಕಾರ್ಮಿಕರಿಗೆ ವೈದ್ಯಕೀಯ ಸೌಲತ್ತು ಹಾಗೂ ಅವರ ಮಕ್ಕಳ ಏಳಿಗೆಗೆ ವಿದ್ಯಾರ್ಥಿ ವೇತನ ನೀಡುವಂತೆ ಆಗ್ರಹಿಸಿದರು.

ಪಕ್ಷದ ವೀರಾಜಪೇಟೆ ನಗರ ಶಾಖೆಯ ಕಾರ್ಯದರ್ಶಿ ಶಾಜಿ ರಮೇಶ್ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿ, ಬಡ ಕಾರ್ಮಿಕರು ಕಾರು ಕೊಂಡುಕೊಳ್ಳಲು ಸಾಧ್ಯವಿಲ್ಲ, ಸಾಲ ಮಾಡಿ ದ್ವಿಚಕ್ರ ವಾಹನದಲ್ಲಿ ಅನೇಕರು ಜೀವನ ನಡೆಸುತ್ತಿದ್ದು, ಈಗ ಮತ್ತೆ ಬೆಲೆ ಏರಿಕೆಯಿಂದಾಗಿ ಕಾರ್ಮಿಕರು ಸಂಕಷ್ಟ ಎದುರಿಸುವಂತಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಪುನರ್ ಪರಿಶೀಲನೆ ಮಾಡಿ ಹೆಚ್ಚಿಗೆ ಮಾಡಿರುವ ದರವನ್ನು ಇಳಿಸಬೇಕು ಎಂದರು.

ಪ್ರತಿಭಟನೆಯಲ್ಲಿ ಪಕ್ಷದ ಮುಖಂಡರಾದ ಕೆ.ಎಸ್. ರತೀಶ್, ಹರಿದಾಸ್, ಹಮೀದ್, ಕೆ.ಎ. ಖಾಲಿದ್, ಖಾಸಿಂ, ಮತ್ತಿತರ ಮಹಿಳಾ ಸದಸ್ಯರುಗಳು ಭಾಗವಹಿಸಿದ್ದರು.