ಮಡಿಕೇರಿ, ಜೂ. ೧೮: ಭವ್ಯ ಭಾರತದ ಮುಂದಿನ ಭವಿಷ್ಯದ ಪ್ರಜೆಗಳಾದ ಮಕ್ಕಳಿಗೆ ಪ್ರಜಾಪ್ರಭುತ್ವದ ಮಹತ್ವದೊಂದಿಗೆ, ಆಡಳಿತ ವ್ಯವಸ್ಥೆಯ ಅರಿವು ಮೂಡಿಸುವ ಉದ್ದೇಶದಿಂದ ಕೊಣಂಜAಗೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪಾರಾಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಚುನಾವಣೆಯ ಮೂಲಕ ಶಾಲಾ ಸಂಸತ್ತು ಸ್ಥಾಪಿಸಲಾಯಿತು.

ಶಾಲಾ ಮುಖ್ಯೋಪಾಧ್ಯಾಯ ವೇದಪ್ರಸಾದ್ ಅವರ ನಿರ್ದೇಶನದಂತೆ ನಡೆದ ಚುನಾವಣೆಯಲ್ಲಿ ಪ್ರಧಾನಮಂತ್ರಿಯಾಗಿ ಜೆ.ಸಿ. ಮನು, ಉಪ ಪ್ರಧಾನಿಯಾಗಿ ಹೆಚ್.ಪಿ. ಪೊನ್ನಪ್ಪ, ಗೃಹ ಮಂತ್ರಿಗಳಾಗಿ ಪ್ರೀತಂ ಮತ್ತು ತಶ್ವಿನ್, ಆರೋಗ್ಯ ಮಂತ್ರಿಗಳಾಗಿ ರಚನ ಮತ್ತು ನವ್ಯ, ಕ್ರೀಡಾ ಮಂತ್ರಿಯಾಗಿ ಪೊನ್ನಪ್ಪ, ಸಾಂಸ್ಕೃತಿಕ ಮಂತ್ರಿಯಾಗಿ ತಾನ್ಸಿ, ಸಿಂಧು, ಸ್ವಚ್ಛತಾ ಮಂತ್ರಿಯಾಗಿ ನೇಹಾಲ್, ಶಶಾಂಕ್, ತೋಟಗಾರಿಕೆ ಮಂತ್ರಿಗಳಾಗಿ ಡೆವಿನ್ ಕರುಂಬಯ್ಯ, ಹೇಮಂತ್, ವಾರ್ತಾ ಮಂತ್ರಿಯಾಗಿ ನಂದಿನಿ, ಆಹಾರ ಮಂತ್ರಿಗಳಾಗಿ ಸಿಂಧು, ಪೂಜ ಅವರುಗಳು ಆಯ್ಕೆಯಾದರು.

ಆಯ್ಕೆ ಪ್ರಕ್ರಿಯೆ ಗುಪ್ತ ಮತದಾನದ ಮೂಲಕ ನಡೆಯಿತು. ನಂತರ ಮಾತನಾಡಿದ ಮುಖ್ಯ ಶಿಕ್ಷಕ ವೇದಪ್ರಸಾದ್ ಅವರು, ಮಕ್ಕಳ ಮನಸ್ಸಿನಲ್ಲಿ ಪ್ರಜಾಪ್ರಭುತ್ವದ ಮಹತ್ವ ಮತ್ತು ದೇಶಕಟ್ಟುವಲ್ಲಿನ ಜವಾಬ್ದಾರಿಯ ಅರಿವನ್ನು ಈಗಿನಿಂದಲೇ ಜಾಗೃತಿಗೊಳಿಸಿದರೆ, ಮುಂದಿನ ಭವ್ಯ ಬಲಿಷ್ಠ ದೇಶದ ಕನಸು ನನಸಾಗಲಿದೆ ಮತ್ತು ವಿದ್ಯಾರ್ಥಿಗಳಿಗೆ ಬಾಲ್ಯದಲ್ಲಿಯೆ ನಾಯಕತ್ವದೊಂದಿಗೆ ಸೇವಾ ಮನೋಭಾವ ರೂಢಿಸಿಕೊಳ್ಳಲು ಸಹಕಾರಿ ಆಗುತ್ತದೆ. ಆ ನಿಟ್ಟಿನಲ್ಲಿ ನಡೆದ ವಿದ್ಯಾರ್ಥಿ ಸಂಸತ್ ಚುನಾವಣೆಯು, ಸಮಾಜಕ್ಕೆ ಮಾದರಿಯಾಗಿದೆ ಎಂದರು. ಈ ಸಂದರ್ಭ ಸಹಶಿಕ್ಷಕ ಕಿಶೋರ್ ಕುಮಾರ್ ಸೇರಿದಂತೆ ಶಿಕ್ಷಕ ವೃಂದದವರು ಉಪಸ್ಥಿತರಿದ್ದರು.