ಮುಳ್ಳೂರು, ಜೂ. ೧೮: ಸಮೀಪದ ಅಂಕನಹಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ೨೦೨೪-೨೫ನೇ ಶೈಕ್ಷಣಿಕ ಸಾಲಿಗೆ ಎಲ್ಕೆಜಿ ಮತ್ತು ಯುಕೆಜಿ ತರಗತಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧಿಕೃತ ಅನುಮತಿಯನ್ನು ನೀಡಿದೆ. ಜೊತೆಗೆ ಪ್ರಾಥಮಿಕ ಶಾಲೆಯನ್ನು ಆಂಗ್ಲ ಮಾಧ್ಯಮ ಶಾಲೆಯನ್ನಾಗಿ ಮೇಲ್ದರ್ಜೆಗೇರಿಸಲು ಅನುಮತಿ ನೀಡಿರುವ ಹಿನ್ನೆಲೆ ಇತೀಚೆಗೆ ಶಾಲೆಯಲ್ಲಿ ಎಲ್ಕೆಜಿ ಮತ್ತು ಯುಕೆಜಿ ತರಗತಿ ಪ್ರಾರಂಭೋತ್ಸವವ ಅಂಗವಾಗಿ ಮಕ್ಕಳ ಕಲರವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಎಲ್ಕೆಜಿ ಮತ್ತು ಯುಕೆಜಿ ತರಗತಿಗೆ ಆಗಮಿಸಿದ ಪುಟಾಣಿಗಳಿಗೆ ಶಾಲಾ ಶಿಕ್ಷಕರು, ಗ್ರಾ.ಪಂ. ಸದಸ್ಯರು, ಎಸ್ಡಿಎಂಸಿ ಸದಸ್ಯರು ಹೂಗುಚ್ಛ ನೀಡುವುದರ ಮೂಲಕ ಸ್ವಾಗತಿಸಿದರು. ನಂತರ ಕಾರ್ಯಕ್ರಮದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅಂಕನಹಳ್ಳಿ ಸರಕಾರಿ ಪ್ರೌಢಶಾಲಾ ಮುಖ್ಯ ಶಿಕ್ಷಕ ಜಿ.ಎಂ. ಹೇಮಂತ್, ಸರಕಾರ ಮತ್ತು ಶಿಕ್ಷಣ ಇಲಾಖೆ ಗ್ರಾಮೀಣ ಪ್ರದೇಶದ ಆಯ್ದ ಕೆಲವು ಸರಕಾರಿ ಪ್ರಾಥಮಿಕ ಶಾಲೆಯನ್ನು ಆಂಗ್ಲ ಮಾಧ್ಯಮ ಶಾಲೆಯನ್ನಾಗಿ ಉನ್ನತ್ತೀಕರಣಗೊಳಿಸಲು, ಯುಕೆಜಿ ಮತ್ತು ಎಲ್ಕೆಜಿ ತರಗತಿ ನಡೆಸಲು ಅನುಮತಿ ನೀಡಿರುತ್ತದೆ. ಈ ಹಿನ್ನೆಲೆ ಅಂಕನಹಳ್ಳಿ ಪ್ರಾಥಮಿಕ ಶಾಲೆಗೆ ಎಲ್ಕೆಜಿ ಮತ್ತು ಯುಕೆಜಿ ತರಗತಿಗೆ ಶಿಕ್ಷಣ ಇಲಾಖೆ ಈಗ ಅಧಿಕೃತವಾಗಿ ಅನುಮತಿ ನೀಡಿರುವ ಜೊತೆಯಲ್ಲಿ ಆಂಗ್ಲ ಮಾಧ್ಯಮ ಶಾಲೆಯನ್ನಾಗಿ ಉನ್ನತ್ತೀಕರಣ ಗೊಳಿಸಿದೆ ಎಂದರು.
ಶಾಲೆಯಲ್ಲಿ ಎಲ್ಕೆಜಿ ಮತ್ತು ಯುಕೆಜಿ ತರಗತಿ ಪ್ರಾರಂಭವಾಗಿ ರುವುದ್ದರಿಂದ ಈ ಸುತ್ತಮುತ್ತಲಿನ ಜನರಿಗೆ ಅನುಕೂಲವಾಗಿದ್ದು, ಈ ನಿಟ್ಟಿನಲ್ಲಿ ಪೋಷಕರು ತಮ್ಮ ಮಕ್ಕಳನ್ನು ಎಲ್ಕೆಜಿ ತರಗತಿಗೆ ಸೇರಿಸುವ ಮೂಲಕ ಸರಕಾರದ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಆಲೂರು-ಸಿದ್ದಾಪುರ ಗ್ರಾ.ಪಂ. ಉಪಾಧ್ಯಕ್ಷ ಚಂದ್ರಮೋಹನ್, ಶಾಲಾ ಸಮಿತಿ ಅಧ್ಯಕ್ಷ ಚಂದ್ರಶೇಖರ್, ಹಿರಿಯ ವಿದ್ಯಾರ್ಥಿ ಹೇಮಂತ್ಕುಮಾರ್ ಶಿಕ್ಷಕರುಗಳಾದ ಎಲಿಯಮ್ಮ, ಯೋಗೇಶ್ವರಿ, ಅಭಿಲಾಷ್, ಪೋಷಕರು ಹಾಗೂ ಗ್ರಾಮಸ್ಥರು ಹಾಜರಿದ್ದರು. ಶಾಲೆಯಲ್ಲಿ ಎಲ್ಕೆಜಿಗೆ ೧೮ ಮಕ್ಕಳು ಮತ್ತು ಯುಕೆಜಿ ತರಗತಿಗೆ ೧೬ ಮಕ್ಕಳು ದಾಖಲಾಗಿದ್ದಾರೆ.