ಸಿದ್ದಾಪುರ, ಜೂ. ೧೭: ಕಾಡಾನೆಗಳ ಹಿಂಡು ಮನೆಯ ಅಂಗಳದಲ್ಲಿ ದಾಂಧಲೆ ನಡೆಸಿ, ಹೂ ಕುಂಡಗಳನ್ನು ಹಾನಿಗೊಳಿಸಿದ್ದಲ್ಲದೆ, ಮನೆಯ ಒಳಕ್ಕೆ ಮರಿಯಾನೆಗಳು ನುಗ್ಗಲು ಯತ್ನಿಸಿದ ಘಟನೆ ಗುಹ್ಯ ಗ್ರಾಮದಲ್ಲಿ ಭಾನುವಾರ ರಾತ್ರಿ ನಡೆದಿದೆ. ಗುಹ್ಯ ಗ್ರಾಮದ ಮೂಕೊಂಡ ಸುಬ್ರಮಣಿ ಎಂಬವರ ಕಾಫಿ ತೋಟದಲ್ಲಿ ಮರಿಯಾನೆಗಳೂ ಸೇರಿದಂತೆ ಆರಕ್ಕೂ ಅಧಿಕ ಕಾಡಾನೆಗಳು ಬೀಡುಬಿಟ್ಟು ದಾಂಧಲೆ ನಡೆಸಿವೆ. ಅಲ್ಲದೆ, ಕೃಷಿ ಫಸಲುಗಳನ್ನು ನಾಶಗೊಳಿಸಿವೆ. ನಂತರ ರಾತ್ರಿ ಮನೆಯ ಅಂಗಳಕ್ಕೆ ಬಂದ ಕಾಡಾನೆಗಳ ಹಿಂಡು ಮನೆಯ ಅಂಗಳದಲ್ಲಿದ್ದ ೨೦ಕ್ಕೂ ಅಧಿಕ ಹೂ ಕುಂಡಗಳನ್ನು ತುಳಿದು ಧ್ವಂಸಗೊಳಿಸಿವೆ. ಅಲ್ಲದೆ, ಮನೆಯ ಬದಿಯಲ್ಲಿದ್ದ ಪ್ಲಾಸ್ಟಿಕ್ ಚೇರ್ಗಳನ್ನು ಹಾಗೂ ಇನ್ನಿತರ ವಸ್ತುಗಳನ್ನು ಎಳೆದು ತುಳಿದು ನಾಶಗೊಳಿಸಿವೆ ಎಂದು ಸುಬ್ರಮಣಿ ತಿಳಿಸಿದ್ದಾರೆ. ಮನೆಯ ಬದಿಯಲ್ಲೇ ಕಾಡಾನೆಗಳು ಸುತ್ತಾಡುತ್ತಾ ಮನೆಯ ಮುಂಭಾಗದಲ್ಲಿ ಘೀಳಿಡುತ್ತಿದ್ದವು. ಅಲ್ಲದೆ, ಮರಿಯಾನೆಗಳು ಮನೆಯ ಒಳಕ್ಕೆ ನುಗ್ಗಲು ಪ್ರಯತ್ನಿಸಿದವು ಎಂದು ಅವರು ಹೇಳಿದರು. ಗುಹ್ಯ ಭಾಗದಲ್ಲಿ ನಿರಂತರವಾಗಿ ಕಾಡಾನೆಗಳ ಹಾವಳಿಯಿಂದಾಗಿ ರಾತ್ರಿ ಮನೆಯಲ್ಲಿ ನಿದ್ರೆ ಮಾಡಲು ಭಯವಾಗುತ್ತಿದೆ. ಸಂಜೆ ಮನೆಯಿಂದ ಹೊರ ಹೋಗದಂತಹ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಸುಬ್ರಮಣಿ ಆತಂಕ ವ್ಯಕ್ತಪಡಿಸಿದ್ದಾರೆ. ಕಾಡಾನೆಗಳ ಹಾವಳಿಯನ್ನು ತಡೆಗಟ್ಟಲು ಅರಣ್ಯ ಇಲಾಖೆ ವಿಫಲವಾಗಿದೆ. ಅರಣ್ಯ ಇಲಾಖೆಗೆ ಹಲವಾರು ಬಾರಿ ತಿಳಿಸಿದ್ದರೂ ಕೂಡ ಕ್ರಮಕೈಗೊಳ್ಳುತ್ತಿಲ್ಲ ಎಂದು ಸುಬ್ರಮಣಿ ಅರಣ್ಯ ಇಲಾಖೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕೂಡಲೇ ನಷ್ಟ ಪರಿಹರ ನೀಡುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. -ವಾಸು