ಮಡಿಕೇರಿ, ಜೂ. ೧೭: ಪ್ರತಿಯೊಬ್ಬರೂ ತಮ್ಮ ತಮ್ಮ ಮನೆಗಳ ಸುತ್ತಮುತ್ತಲಿನ ಪರಿಸರ ಸ್ವಚ್ಚವಾಗಿ ಇಟ್ಟುಕೊಂಡರೆ ಮಲೇರಿಯಾ ಸೇರಿದಂತೆ ಯಾವುದೇ ಸಾಂಕ್ರಾಮಿಕ ರೋಗಗಳು ಬರುವುದಿಲ್ಲ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಚೇತನ್ ಎಂ.ಯು. ಮಾಹಿತಿ ನೀಡಿದರು.

ಅವರು ಮಡಿಕೇರಿ ಎಫ್‌ಎಂಸಿ ಕಾಲೇಜು ಸಮೀಪದ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಮಲೇರಿಯಾ ವಿರೋಧಿ ಮಾಸಾಚರಣೆ ಕುರಿತು ಮಾತನಾಡುತ್ತಾ ಮನೆಯ ಸುತ್ತಮುತ್ತ ಸ್ವಚ್ಛ ಪರಿಸರ, ಶುದ್ಧ ನೀರು ಇರುವಂತೆ ನೋಡಿಕೊಳ್ಳಬೇಕು ಹಾಗೂ ಚರಂಡಿಗಳಲ್ಲಿ ನೀರು ನಿಲ್ಲದಂತೆ ಮತ್ತು ಲಾರ್ವಾ ಉತ್ಪತ್ತಿ ಆಗದಂತೆ ಎಚ್ಚರ ವಹಿಸುವುದು ಅತ್ಯಗತ್ಯವಾಗಿದೆ.

ಇದರಿಂದ ಮಲೇರಿಯಾ ಹಾಗೂ ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಮಾಡಬಹುದು ಎಂದು ತಿಳಿಸಿದರು. ಮನೆಯ ಮುಂದಿರುವ ಚರಂಡಿಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು, ಮನೆಯ ಒಳಗೆ ಮತ್ತು ಹೊರಗೆ ನೀರು ತುಂಬಿಸುವ ತಾಣಗಳು ವಾರಕ್ಕೊಮ್ಮೆ ಸ್ವಚ್ಛಗೊಳಿಸಿ ಮುಚ್ಚಳದಿಂದ ಮುಚ್ಚಬೇಕು, ಸೊಳ್ಳೆಗಳ ನಿಯಂತ್ರಣಕ್ಕಾಗಿ ಸೊಳ್ಳೆ ನಾಶಕ ಮತ್ತು ಸೊಳ್ಳೆ ಪರದೆಗಳನ್ನು ಅಳವಡಿಸಿಕೊಳ್ಳಬೇಕು ಎಂದರು.

ಯಾವುದೇ ಜ್ವರವಿರಲಿ ಹತ್ತಿರದ ಆಸ್ಪತ್ರೆ ವೈದ್ಯರಿಗೆ ತೋರಿಸಿ ಚಿಕಿತ್ಸೆ ಪಡೆಯುವಂತೆ ಸಲಹೆ ನೀಡಿದರು. ರೋಗಗಳು ಹರಡದಂತೆ ತೆಗೆದುಕೊಳ್ಳಬೇಕಾದ ಮುಂಜಾಗ್ರತೆ ಕ್ರಮಗಳ ಕುರಿತು ಮಾಹಿತಿ ನೀಡಿದರು. ಸಭೆಯಲ್ಲಿ ನಗರಸಭೆ ಸದಸ್ಯ ಅಪ್ಪಣ್ಣ ಅವರು ಮಾತನಾಡಿ, ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ನಗರಸಭೆಯಿಂದ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ತಿಳಿಸಿದರು.

ತಾಲೂಕು ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಜಿ.ವಿ.ಶ್ರೀನಾಥ್ ಅವರು ಮಾತನಾಡಿ ಮಲೇರಿಯಾ, ಡೆಂಗ್ಯೂ ಸೇರಿದಂತೆ ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆಯಿಂದ ಎಲ್ಲೆಡೆ ಮನೆ ಮನೆ ಭೇಟಿ ಮಾಡಿ ಲಾರ್ವಾ ನಿರ್ಮೂಲನಾ ಕಾರ್ಯ ಚಟುವಟಿಕೆಗಳನ್ನು ನಡೆಸುತ್ತಿದ್ದು ಎಲ್ಲರೂ ಸಹಕರಿಸಿದರೆ ಇಂತಹ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯ ಎಂದರು.

ನಗರ ಆರೋಗ್ಯ ಕೇಂದ್ರದ ರೇವತಿ, ಆರೋಗ್ಯ ನಿರೀಕ್ಷಣಾಧಿಕಾರಿ ದೇವಿ ಪ್ರಸಾದ್, ಚರಣ್ ಕುಮಾರ್ ಹಾಗೂ ಪ್ರಾ.ಆ.ಕೇಂದ್ರದ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿಗಳು, ಆರೋಗ್ಯ ನಿರೀಕ್ಷಣಾಧಿಕಾರಿಗಳು, ಆಶಾ ಕಾರ್ಯಕರ್ತರು ಮತ್ತು ಅಂಗನವಾಡಿ ಕಾರ್ಯಕರ್ತರು ಹಾಜರಿದ್ದರು.