ಸೋಮವಾರಪೇಟೆ, ಜೂ. ೧೬: ಪಟ್ಟಣದ ಕವಯತ್ರಿ ಜಲಜಾ ಶೇಖರ್ ಹಾಗೂ ಕೊಡ್ಲಿಪೇಟೆ ಸಮೀಪದ ಬೆಸೂರು ಡಾ. ಮೋಹನ್ ಪಾಳೇಗಾರ್ ಅವರುಗಳು ರಚಿಸಿರುವ ಮೂರು ಪ್ರತ್ಯೇಕ ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮ ತಾ. ೧೮ರಂದು (ನಾಳೆ) ಪಟ್ಟಣದ ಮಹಿಳಾ ಸಹಕಾರ ಸಮಾಜದಲ್ಲಿ ನಡೆಯಲಿದೆ.

ಜಲಜಾ ಶೇಖರ್ ಅವರು ಬರೆದಿರುವ ‘ಪ್ರತೀಕ್ಷ’ ಮತ್ತು ‘ವಿಲೋಕನ’ ಕೃತಿಯನ್ನು ‘ಶಕ್ತಿ’ ಸಲಹಾ ಸಂಪಾದಕ ಬಿ.ಜಿ. ಅನಂತಶಯನ ಅವರು, ಬೆಸೂರಿನ ಡಾ. ಮೋಹನ್ ಪಾಳೇಗಾರ್ ಬರೆದಿರುವ ‘ಕಾನನ ಜನಪದ ಕಥೆಗಳು’ ಎಂಬ ಕೃತಿಯನ್ನು ವಿವಿಧ ಮಠಗಳ ಸ್ವಾಮೀಜಿಗಳು ಲೋಕಾರ್ಪಣೆ ಮಾಡಲಿದ್ದಾರೆ.

ಜಿಲ್ಲೆ ಹಾಗೂ ತಾಲೂಕು ಕಸಾಪ ಘಟಕ, ಮಹಿಳಾ ಸಹಕಾರ ಸಮಾಜ, ಅಕ್ಕನ ಬಳಗದ ಆಶ್ರಯದಲ್ಲಿ ತಾ. ೧೮ರಂದು ಅಪರಾಹ್ನ ೨.೩೦ಕ್ಕೆ ಕೃತಿಗಳ ಬಿಡುಗಡೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದ ಸಾನಿಧ್ಯವನ್ನು ಅರಮೇರಿ ಕಳಂಚೇರಿ ಮಠಾಧೀಶ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಕೊಡ್ಲಿಪೇಟೆ ಕಿರಿಕೊಡ್ಲಿ ಮಠಾಧೀಶ ಶ್ರೀ ಸದಾಶಿವ ಸ್ವಾಮೀಜಿ ವಹಿಸಲಿದ್ದಾರೆ.

ಕಾರ್ಯಕ್ರಮದಲ್ಲಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ನಿವೃತ್ತ ಪ್ರಾಂಶುಪಾಲ ಸಿ.ಎಂ. ಧರ್ಮಪ್ಪ, ಜಿಲ್ಲಾ ಕಸಾಪ ಅಧ್ಯಕ್ಷ ಕೇಶವ ಕಾಮತ್, ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್, ಮಹಿಳಾ ಸಮಾಜದ ಅಧ್ಯಕ್ಷೆ ಸುಮಾ ಸುದೀಪ್, ಅಕ್ಕನ ಬಳಗ ಅಧ್ಯಕ್ಷೆ ಚಂದ್ರಕಲಾ ಗಿರೀಶ್, ಕಸಾಪ ಮಾಜಿ ಅಧ್ಯಕ್ಷ ಜೆ.ಸಿ. ಶೇಖರ್ ಸೇರಿದಂತೆ ಇತರರು ಭಾಗವಹಿಸಲಿದ್ದಾರೆ.