*ಸಿದ್ದಾಪುರ, ಜೂ. ೧೬: ಚೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯ ಚೇರಳ ಶ್ರೀಮಂಗಲ ಗ್ರಾಮದ ನೆಲ್ಲಿಹಡ್ಲುವಿನಲ್ಲಿ ೧೦ ಕುಟುಂಬ ೧೮ ಗೋತ್ರ ಗೌಡ ಜನಾಂಗದ ಗೌಡ ಸಮುದಾಯ ಭವನದ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಅಂತಿಮ ಹಂತದ ಕಾಮಗಾರಿ ಬಾಕಿ ಉಳಿದಿದೆ.
ಚೇರಳ ಗೌಡ ಸಮಾಜದಿಂದ ವಾಲ್ನೂರು ರಸ್ತೆಯಲ್ಲಿ ಈ ಕಟ್ಟಡ ನಿರ್ಮಾಣಗೊಂಡಿದ್ದು, ರೂ. ೧.೨೦ ಕೋಟಿ ವೆಚ್ಚದ ಯೋಜನೆ ಇದಾಗಿದೆ. ಚೇರಳ ಶ್ರೀಮಂಗಲ ಭಾಗದಲ್ಲಿ ಸಣ್ಣ ಬೆಳೆಗಾರರನ್ನೊಳಗೊಂಡ ಅರೆಭಾಷೆ ಗೌಡ ಸಮುದಾಯವಿದೆ. ಸಮುದಾಯಕ್ಕೊಂದು ಗೌಡ ಭವನವೊಂದು ಬೇಕೆಂದು ೨೦೦೮ ರಲ್ಲಿ ಕೊಳಂಬೆ ಯಾದವ್ ಅವರ ಅಧ್ಯಕ್ಷತೆಯಲ್ಲಿ ಯೋಜನೆ ರೂಪಿಸಲಾಯಿತು. ಸಮುದಾಯ ಭವನ ನಿರ್ಮಾಣಕ್ಕಾಗಿ ಮರದಾಳು ಕುಟುಂಬಸ್ಥರ ಬಳಿಯಿಂದ ೧೫ ಸೆಂಟ್ ಜಾಗವನ್ನು ಖರೀದಿಸಲಾಯಿತು. ಅಯ್ಯಂಡ್ರ ರಾಘವಯ್ಯ ಅವರ ನೇತೃತ್ವದಲ್ಲಿ ಆರಂಭಗೊAಡ ಕಟ್ಟಡ ನಿರ್ಮಾಣ ಕಾರ್ಯ ಹಣಕಾಸಿನ ಕೊರತೆಯಿಂದ ವಿಳಂಬವಾಯಿತು.
ಅAದು ಶಾಸಕರಾಗಿದ್ದ ಕೆ.ಜಿ. ಬೋಪಯ್ಯ ಅವರ ಪ್ರಯತ್ನದ ಫಲವಾಗಿ ಸಮುದಾಯ ಭವನಕ್ಕೆಂದು ಸರಕಾರದಿಂದ ೫೦ ಲಕ್ಷ ರೂ. ಅನುದಾನ ಬಿಡುಗಡೆಯಾಯಿತು. ಸಮಾಜ ಸೇವಕ ನಾಪಂಡ ಮುತ್ತಪ್ಪ ಹಾಗೂ ಮುದ್ದಪ್ಪ ಸಹೋದರರು ಗ್ರಾನೈಟ್ ದಾನ ಮಾಡಿದರು. ಅಂದು ಸಂಸದರಾಗಿದ್ದ ಪ್ರತಾಪ್ ಸಿಂಹ ಅವರು ಸಹಕಾರ ನೀಡಿದರು.
ಇದೀಗ ಸಭಾಂಗಣ ಮತ್ತು ಊಟದ ಮನೆ ಸೇರಿದಂತೆ ಎರಡು ಅಂತಸ್ತಿನ ಸಮುದಾಯ ಭವನ ನಿರ್ಮಾಣಗೊಂಡಿದ್ದು, ಚೇರಳ ಶ್ರೀಮಂಗಲ ಭಾಗದ ಜನರಿಗೆ ಹೆಚ್ಚು ಸಹಕಾರಿಯಾಗಿದೆ. ತಡೆಗೋಡೆ ಮತ್ತು ಸುತ್ತಲಿನ ಆವರಣದ ಕಾಮಗಾರಿ ಬಾಕಿ ಉಳಿದಿದ್ದು, ಸುಮಾರು ೩೦ ಲಕ್ಷ ರೂ. ಅಗತ್ಯವಿದೆ. ಹಣದ ಕೊರತೆ ಎದುರಾಗಿರುವುದರಿಂದ ಯಾವುದೇ ಸಮಾಜಕ್ಕೆ ಸೇರಿದ ದಾನಿಗಳು ಸಹಾಯ ಮಾಡಬಹುದು ಎಂದು ಅಧ್ಯಕ್ಷ ಅಯ್ಯಂಡ್ರ ರಾಘವಯ್ಯ ಮನವಿ ಮಾಡಿದ್ದಾರೆ.
ಅರೆಭಾಷೆ ಗೌಡ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯತ್ವ ಪಡೆಯುವಂತೆ ಕೋರಿದ್ದಾರೆ. ವಕ್ತಾರ ಪೇರಿಯನ ಉದಯ ಅವರು ಯೋಜನೆಯನ್ನು ಪೂರ್ಣಗೊಳಿಸಲು ಹೆಚ್ಚು ಆಸಕ್ತಿ ತೋರಿದ್ದು, ಇವರೊಂದಿಗೆ ಉಪಾಧ್ಯಕ್ಷ ಹೊಸಮನೆ ಪೂವಯ್ಯ, ಕಾರ್ಯದರ್ಶಿ ಧನಂಜಯ, ಖಜಾಂಚಿ ಮುಕ್ಕಾಟಿ ಪಳಂಗಪ್ಪ, ಸಂಘಟನಾ ಕಾರ್ಯದರ್ಶಿ ನೂಜಿಬೈಲು ನಾಣಯ್ಯ ಮತ್ತಿತರರು ಕೈಜೋಡಿಸಿದ್ದಾರೆ.
- ಅಂಚೆಮನೆ ಸುಧಿ