ಮಡಿಕೇರಿ, ಜೂ. ೧೬ : ನಗರಸಭೆ ವ್ಯಾಪ್ತಿಯಲ್ಲಿ ಬೀಡಾಡಿ ದನಗಳು ಬೇಕಾಬಿಟ್ಟಿ ಓಡಾಡುತ್ತಿದ್ದು, ಇದರಿಂದ ರಸ್ತೆ ಅಪಘಾತ ಸಂಭವಿಸುವ ಹಾಗೂ ಪಾದಚಾರಿಗಳು ವಾಹನ ಸವಾರರಿಗೆ ಮತ್ತು ಪ್ರಾಣಿಗಳಿಗೂ ಹಾನಿ ಆಗುವ ಸಂಭವವಿರುತ್ತದೆ.
ಲೋಕಾಯುಕ್ತ ಡಿವೈಎಸ್ಪಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಈ ಬಗ್ಗೆ ಕ್ರಮವಹಿಸುವಂತೆ ಸೂಚಿಸಿದ್ದು, ಅದರಂತೆ ನಗರಸಭೆ ವ್ಯಾಪ್ತಿಯ ಎಲ್ಲಾ ಬಿಡಾಡಿ ದನಗಳ ಮಾಲೀಕರುಗಳು ತಮ್ಮ ಸ್ವಾಧೀನದಲ್ಲಿರುವ ಯಾವುದೇ ಹಸು, ದನಗಳನ್ನು ವ್ಯವಸ್ಥೆಯಲ್ಲಿಟ್ಟುಕೊಳ್ಳದೇ ಸಾರ್ವಜನಿಕ ಮಾರ್ಗದಲ್ಲಿ/ ದಾರಿಯಲ್ಲಿ ಬಿಟ್ಟು ಯಾವುದೇ ವ್ಯಕ್ತಿಗೆ ಅಪಾಯ ಮತ್ತು ಅಡ್ಡಿಪಡಿಸಿದ್ದಲ್ಲಿ ಅಂತಹ ವ್ಯಕ್ತಿಗೆ ಐಪಿಸಿ ಸೆಕ್ಷನ್ ೨೮೩ ಪ್ರಕಾರ ಶಿಕ್ಷೆಗೆ ಒಳಪಡಿಸುವ ಮತ್ತು ವ್ಯಕ್ತಿಯ ಸ್ವಾಧೀನದಲ್ಲಿರುವ ಪ್ರಾಣಿಗಳಿಂದ ಮನುಷ್ಯನ ಪ್ರಾಣಕ್ಕೆ ಅಪಾಯವಾದರೆ ಅಂತಹ ವ್ಯಕ್ತಿ ವಿರುದ್ಧ ಐಪಿಸಿ ಸೆಕ್ಷನ್ ೨೮೯ ಪ್ರಕಾರ ಪ್ರಕರಣ ದಾಖಲಿಸಲು ಅವಕಾಶವಿರುತ್ತದೆ.
ಆದ್ದರಿಂದ ಜಾನುವಾರುಗಳನ್ನು ನಗರಸಭಾ ವ್ಯಾಪ್ತಿಯ ರಸ್ತೆಯಲ್ಲಿ ಬಿಡುವುದನ್ನು ಸಂಪೂರ್ಣವಾಗಿ ನಿಷೇಧಿಸಿದ್ದು, ಈ ಪ್ರಕಟಣೆಯನ್ನು ಉಲ್ಲಂಘಿಸಿ ಬಿಡಾಡಿ ದನಗಳಿಂದ ಅಪಘಾತ/ಅವಘಡ ಸಂಭವಿಸಿ ಗಾಯಗೊಂಡರೆ ಅಥವಾ ಹಾನಿಯಾದರೆ ಜಾನುವಾರುಗಳ ಮಾಲೀಕರೆ ಜವಾಬ್ದಾರರೆಂದು ದಂಡವನ್ನು ಸಹ ವಿಧಿಸಲಾಗುವುದು ಎಂದು ನಗರಸಭೆ ಪೌರಾಯುಕ್ತರಾದ ವಿಜಯ್ ತಿಳಿಸಿದ್ದಾರೆ.