ಕಣಿವೆ, ಜೂ. ೫ : ಕೊಡಗು ಜಿಲ್ಲೆಯ ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಾಲಿಗೆ ಕಾಮಧೇನು ರೀತಿಯಲ್ಲಿರುವ ಕೊಡಗು ವಿವಿ ಯನ್ನು ಸ್ಥಳಾಂತರಿಸಲು ಮುಂದಾದಲ್ಲಿ ಹೋರಾಟ ರೂಪಿಸುವುದಾಗಿ ಮಾಜಿ ಶಾಸಕರೂ ಆದ ಬಿಜೆಪಿ ಧುರೀಣ ಎಂ.ಪಿ. ಅಪ್ಪಚ್ಚು ರಂಜನ್ ಎಚ್ಚರಿಕೆ ನೀಡಿದ್ದಾರೆ.

‘ಶಕ್ತಿ’ಯಲ್ಲಿ ಪ್ರಕಟಗೊಂಡ ಮಂಗಳೂರು ವಿವಿಗೆ ಕೊಡಗು ವಿಲೀನಕ್ಕೆ ಚಿಂತನೆ ಎಂಬ ವರದಿಗೆ ಪ್ರತಿಕ್ರಿಯೆ ನೀಡಿದ ಅವರು, ಕೊಡಗು ಜಿಲ್ಲೆಗೆ ಪ್ರತ್ಯೇಕ ವಿವಿ ಬಂದದ್ದರ ಹಿಂದೆ ನಮ್ಮ ಶ್ರಮವಿದೆ.

ಕೊಡಗು ವಿವಿ ಅಸ್ತಿತ್ವಕ್ಕೆ ಬಂದು ಒಂದೂವರೆ ವರ್ಷಗಳು ಕಳೆದರೂ ಕೂಡ ಇದೂವರೆಗೆ ವಿವಿಗೆ ಪೂರಕವಾದ ಸೂಕ್ತ ಅನುದಾನ ತರುವಲ್ಲಿ ಜಿಲ್ಲೆಯ ಇಬ್ಬರು ಶಾಸಕರು ವಿಫಲರಾಗಿದ್ದಾರೆ.

(ಮೊದಲ ಪುಟದಿಂದ) ಚಿಕ್ಕ ಅಳುವಾರದಲ್ಲಿನ ಕೊಡಗು ವಿವಿಯಲ್ಲಿ ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ ಕೊಡಗು ಜಿಲ್ಲೆಯ ವಿವಿಧೆಡೆಗಳ ೮೦೦ ಕ್ಕೂ ಅಧಿಕ ಮಂದಿ ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.

ಆದರೆ ಈ ವಿದ್ಯಾರ್ಥಿಗಳು ಅನುಭವಿಸುತ್ತಿರುವ ನೋವು ನಲಿವುಗಳ ಬಗ್ಗೆ ಕ್ಷೇತ್ರದ ಶಾಸಕರಿಗೆ ಅರಿವಿಲ್ಲ.

ಕುಲಪತಿಗಳ ಜೊತೆ ಪ್ರತ್ಯೇಕ ಸಭೆ ನಡೆಸಿ ಅಲ್ಲಿಗೆ ಬೇಕಾದ ಮೂಲಸೌಲಭ್ಯಗಳನ್ನು ಸರ್ಕಾರದಿಂದ ಒದಗಿಸುವ ಯೋಜನೆಯನ್ನೂ ರೂಪಿಸಿಲ್ಲ. ಇದೂವರೆಗೂ ವಿವಿಗೆ ನಯಾಪೈಸೆ ಅನುದಾನವನ್ನು ತಂದಿಲ್ಲ.

ಮುಖ್ಯಮAತ್ರಿ ಸಿದ್ದರಾಮಯ್ಯ ಅವರು ಖಜಾನೆ ಖಾಲಿಯಾಗಿದೆ. ಯಾವ ಅನುದಾನವನ್ನು ಕೇಳಬೇಡಿ ಎಂದು ಹೇಳುತ್ತಿರುವುದಾಗಿ ಮಾಹಿತಿ ಇದೆ. ಹೀಗಾದರೆ ಅಭಿವೃದ್ದಿ ಎಲ್ಲಿಂದ ಸಾಧ್ಯ ? ಎಂದು ಅಪ್ಪಚ್ಚು ರಂಜನ್ ಬೇಸರ ವ್ಯಕ್ತಪಡಿಸಿದರು.

ಕೊಡಗು ವಿವಿಗೆ ಬೇಕಾದಂತಹ ಸೂಕ್ತ ಅನುದಾನವನ್ನು ತಂದು ಜಿಲ್ಲೆಗೆ ಕಳಸಪ್ರಾಯವಾಗಿರುವ ಕೊಡಗು ವಿವಿ ಅಭಿವೃದ್ದಿಗೆ ಜಿಲ್ಲೆಯ ಶಾಸಕರುಗಳು ಮುಂದಾಗದಿದ್ದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.