ಗೋಣಿಕೊಪ್ಪಲು, ಮೇ ೪: ಕೊಡಗಿನ ರೈತರ, ಬೆಳೆಗಾರರ ಕಾಫಿ ತೋಟದಲ್ಲಿ ಬೆಳೆದಿರುವ ವಿವಿಧ ಜಾತಿಯ ಮರಗಳನ್ನು ಗಣತಿ ಮಾಡುವ ಸಲುವಾಗಿ ಅರಣ್ಯ ಇಲಾಖೆಯ ವತಿಯಿಂದ ಸರ್ವೆ ಕಾರ್ಯ ಮುಂದುವರಿಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಪಡೆದರು.
ವೀರಾಜಪೇಟೆ ಉಪ ಸಂರಕ್ಷಣಾ ಅಧಿಕಾರಿ ಜಗನ್ನಾಥ್ ಅವರನ್ನು ಭೇಟಿ ಮಾಡಿದ ಧರ್ಮಜ ಉತ್ತಪ್ಪ ನಿಯೋಗ ಕೊಡಗಿನ ರೈತರ, ಬೆಳೆಗಾರರ ಕಾಫಿ ತೋಟದಲ್ಲಿ ಬೆಳೆದಿರುವ ಮರಗಳು ಆಯಾಯ ತೋಟದ ಮಾಲೀಕನಿಗೆ ಸೇರಿದ್ದಾಗಿದೆ. ಇದೀಗ ಅರಣ್ಯ ಇಲಾಖೆಯು ರೈತರ ತೋಟಕ್ಕೆ ತೆರಳಿ, ಗಣತಿ ಕಾರ್ಯಕ್ಕೆ ಮುಂದಾಗಿರುವುದು ಸರಿಯಲ್ಲ ಎಂದು ಆಕ್ಷೇಪಿಸಿದರು.
ಕೊಡಗಿನಲ್ಲಿರುವ ರೈತರಿಗೆ ಮರಗಳನ್ನು ಬೆಳೆಸುವ ಪರಿಪಾಠವನ್ನು ತಲತಲಾಂತರಿAದ ರೂಢಿಸಿಕೊಂಡು ಬಂದಿದ್ದಾರೆ. ಮರಗಳ ಮಾಲೀಕತ್ವ ಕೂಡ ರೈತರದ್ದಾಗಿದೆ. ಆಗಾಗಿ ಮರಗಳ ಹಕ್ಕು ರೈತರಿಗೆ ಸೇರಬೇಕಾಗಿದೆ.
ಇದೀಗ ಅರಣ್ಯ ಇಲಾಖೆಯ ಸಿಬ್ಬಂದಿ ರೈತರ, ಬೆಳೆಗಾರರ ಕಾಫಿ ತೋಟಕ್ಕೆ ತೆರಳುತ್ತಿರುವುದರಿಂದ ಸಹಜವಾಗಿಯೇ ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ತಕ್ಷಣವೇ ಮರಗಳ ಗಣತಿ ಕಾರ್ಯ ನಡೆಸುವುದನ್ನು ನಿಲ್ಲಿಸಬೇಕು, ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಅವರು ಆಗಮಿಸಿದ ನಂತರ ಅಧಿಕಾರಿಗಳ ಸಭೆಯಲ್ಲಿ ಚರ್ಚೆ ನಡೆಸಿದ ನಂತರ ಶಾಸಕರ ಮಾರ್ಗ ದರ್ಶನದಲ್ಲಿ ಮುಂದುವರಿಯಬೇಕು ಎಂದು ಅಧಿಕಾರಿಗೆ
(ಮೊದಲ ಪುಟದಿಂದ) ಮನದಟ್ಟು ಮಾಡಿದರು. ಧರ್ಮಜ ಉತ್ತಪ್ಪನವರ ಪ್ರಶ್ನೆಗೆ ಉತ್ತರಿಸಿದ ವೀರಾಜಪೇಟೆ ಡಿ.ಎಪ್.ಓ. ಜಗನ್ನಾಥ್ ಸರ್ಕಾರದ ಸೂಚನೆ ಮೇರೆ ಗಣತಿ ಕಾರ್ಯವನ್ನು ನಿರ್ವಹಿಸಲಾಗುತ್ತಿದೆ. ಇದರಲ್ಲಿ ಜಾಗದ ವಿವರ, ಮರಗಳ ಜಾತಿ, ಎತ್ತರ, ದಪ್ಪ ಹಾಗೂ ಸುತ್ತಳತೆಯನ್ನು ಸಂಬAಧಿಸಿದ ವಿವರವನ್ನು ಮಾತ್ರ ದಾಖಲು ಮಾಡುತ್ತಿದ್ದೇವೆ. ಇದನ್ನು ಹೊರತುಪಡಿಸಿ ಮರಗಳನ್ನು ಕಡಿಯುವ ಪ್ರಶ್ನೆ ಇಲಾಖೆಯ ಮುಂದಿಲ್ಲ. ಇದೀಗ ಸಿದ್ದಾಪುರ ಹಾಗೂ ತಿತಿಮತಿ ಭಾಗದ ಎರಡು ಜಾಗದಲ್ಲಿ ಗಣತಿ ಕಾರ್ಯ ಮುಗಿಸಿ ಸರ್ಕಾರಕ್ಕೆ ವರದಿ ನೀಡಿದ್ದೇವೆ ಎಂದು ಮಾಹಿತಿ ಒದಗಿಸಿದರು.
ರೈತರಿಗೆ, ಬೆಳೆಗಾರರಿಗೆ ತೊಂದರೆ ಕೊಡುವ ಅಥವಾ ಭಯವನ್ನು ಹುಟ್ಟಿಸುವ ಕೆಲಸ ಇಲಾಖೆಯ ವತಿಯಿಂದ ನಡೆಯುತ್ತಿಲ್ಲ. ಯಾರು ಕೂಡ ಆತಂಕ ಪಡುವ ಅಗತ್ಯವಿಲ್ಲ ಎಂದ ಅವರು ಕ್ಷೇತ್ರದ ಶಾಸಕರು ಆಗಮಿಸಿದ ನಂತರ ಅವರೊಂದಿಗೆ ಚರ್ಚಿಸಿ ವಿಚಾರ ವಿನಿಮಯ ನಡೆಸಲಾಗು ತ್ತದೆ ಎಂದು ಭರವಸೆ ನೀಡಿದರು. ಭೇಟಿಯ ವೇಳೆ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಾನಂಡ ಪ್ರಥ್ಯು, ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ, ಪಕ್ಷದ ಮುಖಂಡರಾದ ಕೇಚಮಾಡ ಸಿದ್ದು ನಾಚಪ್ಪ, ಮಾಚಿಮಾಡ ಮನು ಉಪಸ್ಥಿತರಿದ್ದರು.