ವೀರಾಜಪೇಟೆ, ಮೇ ೩: ನಗರದ ಶಕ್ತಿ ದೇವತೆಗಳಲ್ಲಿ ಒಂದಾದ ಶ್ರೀ ತುಳಸಿ ಮಾರಿಯಮ್ಮ ದೇವಿಯ ವಾರ್ಷಿಕ ಉತ್ಸವ ಶ್ರದ್ಧಾಭಕ್ತಿಯಿಂದ ಜರುಗಿತು.
ವೀರಾಜಪೇಟೆ ನಗರದ ಸುಣ್ಣದ ಬೀದಿಯಲ್ಲಿರುವ ಶ್ರೀ ತುಳಸಿ ಮಾರಿಯಮ್ಮ ದೇವಿಯ ವಾರ್ಷಿಕ ಉತ್ಸವ ಮೂರು ದಿನಗಳ ಕಾಲ ದೈವಿಕ ಕೈಂಕರ್ಯ ಮಹಾಪೂಜೆಯೊಂದಿಗೆ ಕೊನೆಗೊಂಡಿತ್ತು.
ತಾ. ೨೯ ರಂದು ರಾತ್ರಿ ಆಲಯದ ಸನಿಹದಲ್ಲಿರುವ ಶ್ರೀ ಮುನೀಶ್ವರ ಸ್ವಾಮಿಗೆ ವಿಶೇಷ ಪೂಜೆಗಳು ನೆರವೇರಿತು. ತಾ. ೩೦ ರಂದು ಬೇತ್ರಿ ಕಾವೇರಿ ನದಿಯಿಂದ ಪವಿತ್ರ ಜಲವನ್ನು ತಂದು ದೇವರ ಮೂರ್ತಿಯೊಂದಿಗೆ ವೀರಾಜಪೇಟೆ ನಗರದಲ್ಲಿ ಅದ್ದೂರಿಯ ಶೋಭಾಯಾತ್ರೆ ನಡೆಯಿತು. ಶ್ರೀ ದೇವಿಯ ಮೂರ್ತಿಯನ್ನು ವಿದ್ಯುತ್ ಅಲಂಕೃತ ಮಂಟಪದಲ್ಲಿ ಕುಳ್ಳಿರಿಸಿ ಪೂಜೆಗಳು ಸಲ್ಲಿಕೆಯಾದವು, ದೇವರ ಸೇವೆಗೆಂದು ಅಣಿಯಾದ ಸೇವಕರು ಕಳಸ ಮತ್ತು ಕರಗ ಹೊತ್ತು ಸಾಗಿದರು. ತಮಿಳುನಾಡಿನ ಶಿವಕಾಶಿಯ ಸುಪ್ರಸಿದ್ಧ ಸಿಡಿಮದ್ದು ತಯಾರಕರಿಂದ ನಗರದ ಮುಖ್ಯಬೀದಿಗಳಲ್ಲಿ ವಿವಿಧ ಬಗೆಯ ವಿಶೇಷ ಸಿಡಿಮದ್ದು ಪ್ರದರ್ಶನ ಮಾಡಲಾಯಿತು. ದೇವಿಯ ಶೊಭಾಯಾತ್ರೆಯು ನಗರದ ತೆಲುಗರ ಬೀದಿಯ ಶ್ರೀ ಮಾರಿಯಮ್ಮ ದೇವಾಲಯದಿಂದ ಹೊರಟು ಜೈನರ ಬೀದಿ, ಎಫ್.ಎಂ.ಸಿ ರಸ್ತೆ, ಖಾಸಗಿ ಬಸ್ ನಿಲ್ದಾಣದ ಮಾರ್ಗವಾಗಿ ಶ್ರೀ ತುಳಸಿ ಮಾರಿಯಮ್ಮ ದೇಗುಲಕ್ಕೆ ತಲುಪಿತು. ನಂತರ ದೇವಿಗೆ ವಿಶೇಷ ಪೂಜೆ ಮತ್ತು ಮಹಾಪೂಜೆ ಸಲ್ಲಿಕೆಯಾದವು, ಬಳಿಕ ರಾತ್ರಿ ೧೨ ರಿಂದ ತಾ. ೧ ರ ಮುಂಜಾನೆಯ ೪ ಗಂಟೆಯವರೆಗೆ ಪಡಕಲಂ ವಿಶೇಷ ಪೂಜೆ ನಡೆಯಿತು. ನಗರದ ಮೊಗರಗಲ್ಲಿ, ಸುಣ್ಣದ ಬೀದಿ ಮತ್ತು ಮೀನುಪೇಟೆಯಲ್ಲಿ ನೆಲೆಸಿರುವ ಸಮುದಾಯ ಬಾಂಧವರಿAದ ವಿಶೇಷ ತಂಬಿಟ್ಟು ಆರತಿ ಸೇವೆಯು ಶ್ರೀ ದೇವಿಗೆ ಸಲ್ಲಿಕೆಯಾದವು. ಬಳಿಕ ಶ್ರೀ ದೇವಿಗೆ ಮಹಾಪೂಜೆ, ಮಹಾ ಮಂಗಳಾರತಿ ಸೇವೆ, ಭಕ್ತರಿಗೆ ಪ್ರಸಾದ ವಿನಿಯೋಗ ನಡೆದು ವಾರ್ಷಿಕ ಉತ್ಸವವು ಕೊನೆಗೊಂಡಿತು.
ಶ್ರೀ ತುಳಸಿ ಮಾರಿಯಮ್ಮ ದೇವಾಲಯದ ಆಡಳಿತ ಮಂಡಳಿಯ ಪದಾಧಿಕಾರಿಗಳು, ದೇಗುಲದ ಅರ್ಚಕರು, ನಗರದ ಸಮುದಾಯ ಬಾಂಧವರು, ಜಿಲ್ಲೆ ಸೇರಿದಂತೆ ಮೈಸೂರು, ಬೆಂಗಳೂರು ಹಾಗೂ ತಮಿಳುನಾಡು ರಾಜ್ಯದ ವಿವಿಧೆಡೆಗಳಿಂದ ಭಕ್ತರು ಆಗಮಿಸಿ ದೇವಿಯ ದರ್ಶನ ಪಡೆದು ಪುನೀತರಾದರು.