*ಸಿದ್ದಾಪುರ, ಮೇ ೨ : ಕೊಡಗು ಜಿಲ್ಲೆಯ ಜಮ್ಮಾಭೂಮಿ ವ್ಯಾಪ್ತಿಯ ತೋಟಗಳಲ್ಲಿ ಬೆಳೆದುನಿಂತಿರುವ ಬೆಲೆಬಾಳುವ ಮರಗಳ ಸರ್ವೆ ಕಾರ್ಯ ನಡೆಯುತ್ತಿರುವ ಬಗ್ಗೆ ಬೆಳೆಗಾರರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ಜಿಲ್ಲೆಯ ಕೆಲವು ಭಾಗಗಳಲ್ಲಿ ಈಗಾಗಲೇ ಸರ್ವೆ ಕಾರ್ಯ ಆರಂಭಿಸಿರುವ ಅರಣ್ಯ ಸಿಬ್ಬಂದಿಗಳು ಬೆಳೆಗಾರರ ವಿರೋಧವನ್ನು ಎದುರಿಸುತ್ತಿದ್ದಾರೆ. ಬೀಟೆ ಸೇರಿದಂತೆ ವಿವಿಧ ಜಾತಿಯ ಮರಗಳನ್ನು ಗುರುತಿಸಿ ಸಂಖ್ಯೆ ಹಾಕುವ ಕಾರ್ಯ ನಡೆದಿದೆ. ಭಾಗಮಂಡಲ, ಚೆಟ್ಟಿಮಾನಿ, ಮದೆನಾಡು ಭಾಗದಲ್ಲಿ ಈ ಪ್ರಕ್ರಿಯೆ ನಡೆದಿದೆ ಎಂದು ಬೆಳೆಗಾರರು ಆರೋಪಿಸಿದ್ದಾರೆ.

ಇಂದು ವಾಲ್ನೂರು ಗ್ರಾಮದ ಬೆಳೆಗಾರ ಭುವನೇಂದ್ರ ಅವರ ತೋಟಕ್ಕೆ ಮೀನುಕೊಲ್ಲಿ ವಿಭಾಗದ ಅರಣ್ಯಾಧಿಕಾರಿ ಕೂಡಕಂಡಿ ಸುಬ್ರಾಯ ಅವರ ನೇತೃತ್ವದಲ್ಲಿ ಸಿಬ್ಬಂದಿಗಳು ಭೇಟಿ ನೀಡಿದರು.

ಈ ಸಂದರ್ಭ ಭುವನೇಂದ್ರ ಅವರು ಅರಣ್ಯ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. ‘ಯಾವುದೇ ನೋಟೀಸ್ ನೀಡದೆ ತೋಟವನ್ನು ಹೇಗೆ ಪ್ರವೇಶ ಮಾಡಿದಿರಿ’ ಎಂದು ಪ್ರಶ್ನಿಸಿದರು.

ನಮ್ಮ ಹಿರಿಯರು ಬೆಲೆಬಾಳುವ ಮರಗಳನ್ನು ನೂರಾರು ವರ್ಷಗಳಿಂದ ಸಂರಕ್ಷಿಸಿಕೊAಡು ಬಂದಿದ್ದಾರೆ. ಇದೀಗ ಅರಣ್ಯ ಅಧಿಕಾರಿಗಳು ಮರಗಳಿಗೆ ಸಂಖ್ಯೆಗಳನ್ನು ಹಾಕುತ್ತಿದ್ದಾರೆ, ಮುಂದೆ ಕತ್ತರಿಸಿ ಹರಾಜು ಹಾಕುವ ಆತಂಕವಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಯಾವುದೇ ಕಾರಣಕ್ಕೂ ಮರಗಳ ಸರ್ವೆಗೆ ಅವಕಾಶ ನೀಡುವುದಿಲ್ಲ. ರಾಜ್ಯ ಸರಕಾರದ ಈ ಕ್ರಮವನ್ನು ತೀವ್ರವಾಗಿ

(ಮೊದಲ ಪುಟದಿಂದ) ಖಂಡಿಸುವುದಾಗಿ ತಿಳಿಸಿದರು. ಅರಣ್ಯ ಇಲಾಖೆಯ ಕಾರ್ಯಾಚರಣೆ ಬಗ್ಗೆ ಹಾಲಿ ಶಾಸಕರುಗಳು ಹಾಗೂ ಮಾಜಿ ಶಾಸಕರುಗಳ ಗಮನ ಸೆಳೆಯಲಾಗುವುದು. ಇದಕ್ಕೂ ಮೀರಿ ಮರಗಳಿಗೆ ನಂಬರ್‌ಗಳನ್ನು ಹಾಕಲು ಮುಂದಾದರೆ ಜಿಲ್ಲೆಯ ಸಾವಿರಾರು ಬೆಳೆಗಾರರು ಸೇರಿ ಅರಣ್ಯ ಇಲಾಖೆ ವಿರುದ್ಧ ಹೋರಾಟ ನಡೆಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು. ಅರಣ್ಯ ಅಧಿಕಾರಿಗಳು ಮಾತನಾಡಿ, ಮೇಲಧಿಕಾರಿಗಳ ಆದೇಶದಂತೆ ನಾವು ಬಂದಿದ್ದೇವೆ, ಬೆಳೆಗಾರರ ವಿರೋಧ ಇರುವುದನ್ನು ತಿಳಿಸುತ್ತೇವೆ ಎಂದು ಸ್ಪಷ್ಟಪಡಿಸಿದರು. -ಅಂಚೆಮನೆ ಸುಧಿ