ಕುಶಾಲನಗರ, ಮೇ ೨: ಕೊಡಗು ಜಿಲ್ಲೆಯಲ್ಲಿ ಕೆಲವು ಮರ ಕಡಿತಲೆ ಆದೇಶ ಇರುವ ಪ್ರಕರಣಗಳ ಕುರಿತು ಆರೋಪಗಳು ಬಂದಿದ್ದು, ತಕ್ಷಣದಿಂದಲೇ ಜಿಲ್ಲೆಯಲ್ಲಿ ಖಾಸಗಿ ಹಿಡುವಳಿ ಜಾಗದಲ್ಲಿ ಮರ ಕಡಿತಲೆಗೆ ಅನುಮತಿ ನೀಡುವುದನ್ನು ಮೇ ೧ರಿಂದ ಜಾರಿಗೆ ಬರುವಂತೆ ನಿರ್ಬಂಧಿಸಲಾಗಿದೆ.

ಮಳೆಗಾಲದಲ್ಲಿ ಮರ ಕಡಿತಲೆ ನಿಯಂತ್ರಣ ಪ್ರತಿವರ್ಷ ಜೂನ್ ೧ ರಿಂದ ಸೆಪ್ಟೆಂಬರ್ ೩೦ರ ತನಕ ಜಾರಿಗೆ ಬರುವಂತೆ ಆದೇಶ ಹೊರಬೀಳುತ್ತಿತ್ತು. ಆದರೆ ಈ ಬಾರಿ ಮೇ ೧ರಿಂದ ನವೆಂಬರ್ ೩೦ರ ತನಕ ಕೊಡಗು ಜಿಲ್ಲೆಯ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಯಾವುದೇ ರೀತಿಯ ಮರ ಕಡಿತಲೆ ಮಾಡುವಂತಿಲ್ಲ ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಆದೇಶ ಹೊರಡಿಸಿದ್ದಾರೆ.

ಮಳೆಗಾಲದಲ್ಲಿ ಸ್ವಾಭಾವಿಕವಾಗಿ ಸಸಿಗಳು ಹುಟ್ಟುವುದನ್ನು ಉತ್ತೇಜಿಸುವುದು ಹಾಗೂ ಅಂತಹ ಸಸಿಗಳನ್ನು ಕಡಿತಲೆಯಿಂದ ಬೀಳುವ ಮರಗಳಿಂದ ಸಂರಕ್ಷಿಸುವುದು ಈ ಹಿನ್ನೆಲೆಯಲ್ಲಿ ಅಕ್ರಮ ಕಡಿತಲೆ, ಕಳ್ಳ ಬೇಟೆ, ಗಾಂಜಾ ಬೆಳೆಯುವುದು ಇತ್ಯಾದಿ ಅಕ್ರಮಗಳು ಅರಣ್ಯ ಹಾಗೂ ಇತರೆ ಪ್ರದೇಶಗಳಲ್ಲಿ ಹೆಚ್ಚಾಗಿ ನಡೆಯುವ ಸಂಭವವಿದ್ದು ಇದನ್ನು ತಡೆಗಟ್ಟಲು ಅರಣ್ಯಸಿಬ್ಬಂದಿ ಪೂರ್ಣ ಸಮಯವನ್ನು ವಿನಯೋಗಿಸಬೇಕಾಗು ವುದರಿಂದ ಹಾಗೂ ಮಳೆಗಾಲದಲ್ಲಿ ಆನೆಗಳು ಹೆಚ್ಚಾಗಿ ಖಾಸಗಿ ಜಮೀನುಗಳಿಗೆ ಬರುವ ಪದ್ದತಿ ಇದ್ದು ಇದನ್ನು ಕೂಡ ವ್ಯವಸ್ಥಿತವಾಗಿ ನಿಯಂತ್ರಿಸಲು ಈ ಆದೇಶ ನೀಡಲಾಗಿದೆ ಎಂದು ಮಡಿಕೇರಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ತಿಳಿಸಿದ್ದಾರೆ.

೨೦೨೪ ನೇ ಸಾಲಿನ ವರ್ಷದಲ್ಲಿ ಕೊಡಗು ಜಿಲ್ಲೆಯಲ್ಲಿ ಬಿಸಿಲಿನ ತಾಪವು ದಿನೇ ದಿನೇ ಹೆಚ್ಚಾಗುತ್ತಿದ್ದು ನೀರಿನ ಲಭ್ಯತೆ ಕಡಿಮೆಯಾಗು ತ್ತಿರುವುದರಿಂದ ಮತ್ತು ಸಮಯಕ್ಕೆ ಸರಿಯಾಗಿ ಬರಬೇಕಾದ ಮಳೆಯು ಬಾರದೆ ಇರುವುದರಿಂದ ಮರ ಕಡಿತಲೆಯಿಂದ ಪರಿಸರದ ಮೇಲೆ ಹೆಚ್ಚಿನ ಪರಿಣಾಮ ಬೀರುವ ಸಾಧ್ಯತೆ ಇರುವ ಕಾರಣ ಜಿಲ್ಲೆಯಾದ್ಯಂತ ಕಡಿತಲೆ ನಿರ್ಬಂಧಿಸಲಾಗಿದೆ. ಈ ಸಂಬAಧ ಕೆಲವು ಪರಿಸರ ಆಸಕ್ತರು ಮನವಿ ಮಾಡಿದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.

(ಮೊದಲ ಪುಟದಿಂದ) ಈ ಅವಧಿಯಲ್ಲಿ ಅಪಾಯ ಸ್ಥಿತಿಯಲ್ಲಿ ಇರುವ ಕಡಿತಲೆ ಮಾಡಬೇಕಾದ ಮರಗಳು ಮತ್ತು ಸ್ವಂತ ಉಪಯೋಗಕ್ಕೆ ಅತಿ ಅವಶ್ಯಕವಿರುವ ಮರಗಳನ್ನು ಹಾಗೂ ಸರ್ಕಾರಿ ಕಾಮಗಾರಿಗಳಿಗೆ ಅತಿ ಅವಶ್ಯವಾಗಿ ತೆರವುಗೊಳಿಸಲೇಬೇಕಾದ ಮರಗಳು ಇದ್ದಲ್ಲಿ ನಿಯಮಾನುಸಾರ ಪರಿಶೀಲಿಸಿ ಕಡಿತಲೆ ಮಾಡಲು ಅನುಮತಿ ನೀಡಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಭಾಸ್ಕರ್ ತಿಳಿಸಿದ್ದಾರೆ.

ಕುಶಾಲನಗರ ತಾಲೂಕು ನಾರ್ಗಣೆ ಗ್ರಾಮದ ಪರಾಧೀನ ಜಾಗ ಹಾಗೂ ಅತ್ತೂರು ನಲ್ಲೂರು ಗ್ರಾಮದ ಪರಾಧೀನ ಜಾಗ ಕಾಫಿ ತೋಟದ ಅಭಿವೃದ್ಧಿ ಸಾಗುವಳಿಗಾಗಿ ಹೆಚ್ಚಿಗೆ ನೆರಳು ಕೊಡುವ ಬೀಟೆ ಮತ್ತು ಇತರ ಜಾತಿಯ ಮರಗಳನ್ನು ಕಡಿಯಲು ಜಾಗದ ಮಾಲೀಕರಿಂದ ಸಾಮಾನ್ಯ ಅಧಿಕಾರ ಪತ್ರ ಹೊಂದಿದ್ದ ಮರ ವ್ಯಾಪಾರಿ ಒಬ್ಬರಿಗೆ ನೀಡಿದ ಅನುಮತಿಯನ್ನು ಕೂಡ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ ಎಂದು ಭಾಸ್ಕರ್ ಅವರು ಮಾಹಿತಿ ನೀಡಿದ್ದಾರೆ.

ಈ ಜಾಗದ ಕಾಫಿ ತೋಟದಿಂದ ೧೩೭ ಬೀಟೆ ಮರಗಳು ಮತ್ತು ೧೦೫ ಇತರೆ ಜಾತಿಗಳ ಮರಗಳನ್ನು ಕಡಿಯಲು ೨೦೧೭ನೇ ಇಸವಿಯಲ್ಲಿ ಗುರುತು ಮಾಡಿದ್ದು ಆ ಪ್ರಕಾರ ಮರ ಕಡಿತಲೆಗೆ ಅವಕಾಶ ಕಲ್ಪಿಸಲಾಗಿತ್ತು.

ಇದೀಗ ಸದರಿ ಅನುಮತಿ ನೀಡಿದ ಪ್ರದೇಶದಲ್ಲಿ ತಕರಾರು ಇರುವ ಹಿನ್ನಲೆಯಲ್ಲಿ ಸೋಮವಾರಪೇಟೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಸ್ಥಳ ಪರಿಶೀಲಿಸಿ ವರದಿ ನೀಡಲು ಸೂಚಿಸಲಾಗಿದೆ ಎಂದು ಭಾಸ್ಕರ್ ತಿಳಿಸಿದ್ದಾರೆ. ಈಗಾಗಲೇ ನೀಡಿರುವ ಮರ ಕಡಿತಲೆ ಆದೇಶವನ್ನು ತಾತ್ಕಾಲಿಕವಾಗಿ ಮುಂದಿನ ಆದೇಶದ ತನಕ ತಡೆಹಿಡಿಯಲಾಗಿದೆ ಎಂದು ಅವರು ತಿಳಿಸಿದ್ದಾರೆ.

- ಚಂದ್ರಮೋಹನ್