ಮುಳ್ಳೂರು, ಮೇ ೩: ಈ ವರ್ಷದ ಬಿಸಿಲಿನ ತಾಪಮಾನಕ್ಕೆ ಜಲಮೂಲಗಳು ಬತ್ತಿ ಹೋಗಿ ಜನರು ಮಾತ್ರವಲ್ಲದೆ ಜಲಚರಗಳ ಪ್ರಾಣಕ್ಕೂ ಅಪಾಯ ಬಂದೊದಗಿದೆ.
ಕೆಲವೊಂದು ಕೆರೆಗಳಲ್ಲಿ ಮಧ್ಯದಲ್ಲಿ ಸ್ವಲ್ಪ ನೀರು ಸಂಗ್ರಹವಾಗಿದ್ದರೂ ಇದರಲ್ಲಿರುವ ಮೀನು, ಕಪ್ಪೆ ಮುಂತಾದ ಜಲಚರಗಳು ಬಿಸಿಲಿನ ತಾಪಕ್ಕೆ ಸತ್ತುಹೋಗುತ್ತಿವೆ. ನಿಡ್ತ ಗ್ರಾ.ಪಂ. ವ್ಯಾಪ್ತಿಗೆ ಸೇರಿದ ಶನಿವಾರಸಂತೆ-ಕುಶಾಲನಗರ ಹೆದ್ದಾರಿಯಲ್ಲಿರುವ ಮುಳ್ಳೂರು ಗ್ರಾಮದಲ್ಲಿರುವ ಇಂಟಿನಾಯಕನ ಕೆರೆಯಲ್ಲಿ ಈ ವರ್ಷದ ಬಿಸಿಲಿನ ತಾಪಮಾನಕ್ಕೆ ನೀರು ಬತ್ತಿ ಹೋಗಿದ್ದು, ಈ ಹಿಂದೆ ಕೆರೆಯಲ್ಲಿ ನೀರು ಸಂಗ್ರಹವಾಗಿದ್ದ ಹಿನ್ನೆಲೆಯಲ್ಲಿ ಕೆರೆಗೆ ಮೀನುಮರಿ ಬಿಟ್ಟಿದ್ದ ಗುತ್ತಿಗೆದಾರರು ಮೀನುಗಳನ್ನು ಹಿಡಿದು ಮಾರಾಟ ಮಾಡಿದ್ದರು.
(ಮೊದಲ ಪುಟದಿಂದ) ಆದರೆ ದಿನದಿಂದ ದಿನಕ್ಕೆ ಬಿಸಿಲಿನ ಧಗೆ ಏರಿಕೆಯಾಗುತ್ತಿದ್ದಂತೆ ಕೆರೆಯಲ್ಲಿ ನೀರು ಬತ್ತಿಹೋಗಿ ಇದೀಗ ಕೆರೆ ಮಧ್ಯಭಾಗದಲ್ಲಿ ಸ್ವಲ್ಪ ಮಾತ್ರ ನೀರಿದೆ. ತಾಪಮಾನಕ್ಕೆ ನೀರು ಬಿಸಿಯಾಗುವುದರಿಂದ ನೀರಿನಲ್ಲಿದ್ದ ಮೀನುಗಳು ಸತ್ತುಹೋಗಿ ತೇಲುತ್ತಿವೆ. ಸತ್ತುಹೋದ ಮೀನುಗಳನ್ನು ತಿನ್ನಲು ಕೊಕ್ಕರೆ, ಹದ್ದು ಮುಂತಾದ ಪಕ್ಷಿಗಳು ರಾಶಿರಾಶಿಯಾಗಿ ಬರುತ್ತಿರುವುದು ಕಂಡುಬರುತ್ತಿದೆ.