ಗೋಣಿಕೊಪ್ಪಲು, ಮೇ ೩ : ಕೊಡವ ಭಾಷಿಕ ಜನಾಂಗದ ಕ್ರೀಡಾಕೂಟಕ್ಕೆ ಸರ್ಕಾರದ ವತಿಯಿಂದ ಪ್ರತಿವರ್ಷ ವಿಶೇಷ ಅನುದಾನ ಮಂಜೂರು ಮಾಡುವಂತೆ ಕೊಡವ ತಕ್ಕ್ ಜನಾಂಗಕಾರಡ ಒಕ್ಕೂಟದ ಅಧ್ಯಕ್ಷ ಕೊರಕುಟ್ಟಿರ ಸರಾ ಚಂಗಪ್ಪ ಒತ್ತಾಯಿಸಿದರು.

ಗೋಣಿಕೊಪ್ಪ ಸಮೀಪದ ಹಾತೂರು ಶಾಲಾ ಮೈದಾನದಲ್ಲಿ ಕೊಡಗು ಹೆಗ್ಗಡೆ ಸಮಾಜದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಮೂರು ದಿನಗಳ ಕ್ರೀಡೋತ್ಸವವನ್ನು ಉದ್ಘಾಟಿಸಿ ಮಾತನಾಡಿದ ಇವರು, ಕೊಡಗಿನಲ್ಲಿರುವ ೧೮ ಮೂಲ ನಿವಾಸಿಗಳು ತಮ್ಮ ಕಲೆ ಸಂಸ್ಕೃತಿಯನ್ನು ಇಂದಿಗೂ ಉಳಿಸಿಕೊಂಡು ಬಂದಿದ್ದಾರೆ. ಸಮಾಜಕ್ಕೆ ತಮ್ಮದೆ ಆದ ಅಪಾರ ಕೊಡಗೆಯನ್ನು ನೀಡಿದ್ದಾರೆ. ಇಂದಿಗೂ ಕೂಡ ಮೂಲನಿವಾಸಿಗಳು ಆರ್ಥಿಕವಾಗಿ ಬಹಳ ಹಿಂದುಳಿದಿದ್ದಾರೆ. ಆದರೆ ತಮ್ಮ ಆಚಾರ, ವಿಚಾರ, ಪದ್ಧತಿ, ಪರಂಪರೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಇತ್ತೀಚೆಗೆ ಕ್ರೀಡಾಕೂಟವನ್ನು ಎಲ್ಲಾ ಭಾಗದಲ್ಲೂ ಆಯೋಜಿಸುತ್ತ ಬರಲಾಗುತ್ತಿದೆ. ಆದರೆ ಸರ್ಕಾರದ ಅನುದಾನವಿಲ್ಲದೆ ಕ್ರೀಡಾಕೂಟವನ್ನು ಮುಂದುವರೆಸಲು ಸಾಧ್ಯವಾಗುತ್ತಿಲ್ಲ. ಈ ನಿಟ್ಟಿನಲ್ಲಿ ಸರ್ಕಾರವು ಪ್ರತಿ ವರ್ಷ ಮೂಲನಿವಾಸಿಗಳು ನಡೆಸುವ ಕ್ರೀಡಾಕೂಟಕ್ಕೆ ಆರ್ಥಿಕ ನೆರವು ನೀಡುವಂತೆ ಮನವಿ ಮಾಡಿದರು.

ಕೊಡಗು ಹೆಗ್ಗಡೆ ಸಮಾಜ ಕಳೆದ ೨೧ ವರ್ಷಗಳಿಂದ ಕ್ರೀಡೋತ್ಸವವನ್ನು ಆಚರಿಸುತ್ತ ಬರುತ್ತಿದೆ.

(ಮೊದಲ ಪುಟದಿಂದ) ಕೊಡಗು ಸೇರಿದಂತೆ ರಾಜ್ಯದ ವಿವಿಧ ಭಾಗದಲ್ಲಿ ಹೆಗ್ಗಡೆ ಸಮಾಜದ ಜನಾಂಗವು ವಾಸವಿದ್ದು ೧೦ ಸಾವಿರಕ್ಕೂ ಅಧಿಕ ಜನಸಂಖ್ಯೆಯನ್ನು ಹೊಂದಿರುವ ಸಮುದಾಯವಾಗಿದೆ. ವಿದ್ಯಾಭ್ಯಾಸಕ್ಕೆ ಹಾಗೂ ಕ್ರೀಡೆಗೆ ಒತ್ತು ನೀಡುವ ಸಲುವಾಗಿ ವಾರ್ಷಿಕವಾಗಿ ಸಮಾಜ ಬಾಂಧÀವರು ಒಂದೆಡೆ ಸೇರುವ ಪ್ರಯತ್ನ ನಿರಂತರವಾಗಿ ನಡೆಯುತ್ತಿದೆ. ಸರ್ಕಾರವು ಮುಂದಿನ ಸಾಲಿನಿಂದ ಹೆಗ್ಗಡೆ ಸಮಾಜದ ಕ್ರೀಡೋತ್ಸವಕ್ಕೆ ಆರ್ಥಿಕ ಸಹಕಾರ ನೀಡಬೇಕು ಹಾಗೂ ರಾಜಕೀಯ ಮೀಸಲಾತಿಗೆ ಅವಕಾಶ ಕಲ್ಪಿಸಿಕೊಡಬೇಕೆಂದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಹೆಗ್ಗಡೆ ಸಮಾಜದ ಅಧ್ಯಕ್ಷರಾದ ಪಡಿಞರಂಡ ಜಿ.ಅಯ್ಯಪ್ಪ ಕಳೆದ ೨೧ ವರ್ಷಗಳಿಂದ ಸಮಾಜ ಬಾಂಧವರ ಸಹಕಾರದಿಂದ ಕ್ರೀಡೋತ್ಸವವನ್ನು ವಾರ್ಷಿಕವಾಗಿ ಆಯೋಜಿಸುತ್ತ ಬಂದಿದೆ. ಕೊಡಗಿನ ಎಲ್ಲಾ ಭಾಗದಿಂದ ಸಮುದಾಯ ಬಾಂಧವರು ಒಂದೆಡೆ ಸೇರುವ ಮೂಲಕ ಸಮುದಾಯದ ಒಗ್ಗಟ್ಟನ್ನು ಮತ್ತಷ್ಟು ಗಟ್ಟಿಗೊಳಿಸಲಾಗುತ್ತಿದೆ ಎಂದರು.

೩ ದಿನಗಳ ಕಾಲ ನಡೆಯುವ ಕ್ರೀಡೋತ್ಸವದಲ್ಲಿ ಪೊನ್ನಂಪೇಟೆ, ಹಾತೂರು, ಬಿಟ್ಟಂಗಾಲ, ಒಂಟಿಯAಗಡಿ, ಹಾಲುಗುಂದ, ಪಾರಾಣೆ, ಮೈತಾಡಿ, ಕಡಿಯತ್ತೂರು, ಬೆಟ್ಟಗೇರಿ ಹಾಗೂ ಕುಶಾಲನಗರ ೧೦ ವಲಯಗಳು ಭಾಗವಹಿಸಿದ್ದರು. ಸಮಾಜದ ಬಾಂಧವರು ತಮ್ಮ ಸಾಂಪ್ರದಾಯಿಕ ಉಡುಪಿನಲ್ಲಿ ಮೈದಾನದ ಸುತ್ತಲೂ ದುಡಿಕೊಟ್ಟಿನ ಮೂಲಕ ಮೆರವಣಿಗೆ ನಡೆಸಿ, ನಂತರ ಧ್ವಜಾರೋಹಣ ನೆರವೇರಿಸಿದರು. ನಂತರ ಕ್ರೀಡೋತ್ಸವಕ್ಕೆ ಚಾಲನೆ ನೀಡಲಾಯಿತು.

ಆರಂಭದಲ್ಲಿ ತೊತ್ತೆರ ವಿನ್ಯ ಪ್ರಾರ್ಥಿಸಿ, ಹೆಗ್ಗಡೆ ಸಮಾಜದ ಕಾರ್ಯದರ್ಶಿ ಪಡಿಞರಂಡ ಪ್ರಭುಕುಮಾರ್ ಸ್ವಾಗತಿಸಿ, ಕ್ರೀಡಾ ಸಂಚಾಲಕ ಪಂದಿಕAಡ ನಾಗೇಶ್ ನಿರೂಪಿಸಿ, ಪಾಣಿಕುಟ್ಟಿರ ರಾಧ ಕುಟ್ಟಪ್ಪ ವಂದಿಸಿದರು. ವೇದಿಕೆಯಲ್ಲಿ ಆಡಳಿತ ಮಂಡಳಿ ನಿರ್ದೇಶಕರು, ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಮಾಜ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.