ಮಡಿಕೇರಿ, ಏ. ೩೦: ಕೊಡಗು ಜಿಲ್ಲೆಯಾದ್ಯಂತ ಬಿಸಿಲಿನ ತಾಪ ಮತ್ತೆ ಹೆಚ್ಚುತ್ತಿದೆ. ಕಳೆದ ಕೆಲ ದಿನಗಳ ಹಿಂದೆ ಜಿಲ್ಲೆಯ ಅಲ್ಲಲ್ಲಿ ಒಂದಷ್ಟು ಮಳೆ ಸುರಿದ ಹಿನ್ನೆಲೆ ಜನರು ತುಸು ನಿರಾಳರಾಗಿದ್ದಾರೆ. ಆದರೆ ಇದೀಗ ಬಿಸಿಲ ಧಗೆ ದಿನೇ ದಿನೇ ಹೆಚ್ಚುತ್ತಿದ್ದು ಒಣಹವೆಯ ಪರಿಣಾಮದಿಂದ ಜನರು ಮತ್ತೆ ಆತಂಕಕ್ಕೆ ಒಳಗಾಗುವಂತಾಗಿದೆ. ಕೆಲದಿನದ ಹಿಂದಿನ ಚಿತ್ರಣ ಮತ್ತೆ ಬದಲಾಗುತ್ತಿದೆ. ಜಿಲ್ಲೆಯ ನಾಪೋಕ್ಲು ವಿಭಾಗ ಸೇರಿದಂತೆ ಕೆಲವೆಡೆಗಳಲ್ಲಿ ಒಂದಷ್ಟು ಮಳೆ ಕಂಡುಬAದಿತ್ತು. ಆದರೆ ಕೆಲವು ವಿಭಾಗಗಳಲ್ಲಿ ಇನ್ನೂ ಕೂಡ ಅತ್ಯಗತ್ಯವಾಗಿರುವ ಮಳೆ ಬಿದ್ದೇ ಇಲ್ಲ. ಕೇವಲ ಒಂದೆರಡು ಹನಿಗಳ ಸಿಂಚನವಾಗಿರುವ ಪ್ರದೇಶಗಳೂ ಇವೆ. ಇಂತಹ ಸ್ಥಳಗಳಲ್ಲಿ ಕಾಫಿ ಗಿಡಗಳು ಒಣಗಿ ಕರಕಲಾಗುತ್ತಿರುವ ದೃಶ್ಯ ಇದೀಗ ಕಂಡುಬರುತ್ತಿದ್ದು, ಬೆಳೆಗಾರರು ಭವಿಷ್ಯದ ಬಗ್ಗೆ ಭಾರೀ ಆತಂಕಕ್ಕೆ ಒಳಗಾಗುತ್ತಿದ್ದಾರೆ. ತೋಟಕ್ಕೆ ನೀರು ಹಾಯಿಸಿರುವ ಹಾಗೂ ಒಂದಷ್ಟು ಮಳೆಯಾಗಿರುವ ಕಡೆಗಳಲ್ಲೂ ಇಂತಹದ್ದೇ ಪರಿಸ್ಥಿತಿ ಎದುರಾಗುತ್ತಿರುವುದು ಮತ್ತೊಂದು ಆತಂಕಕಾರಿ ವಿಚಾರವಾಗಿದೆ.

ಕಳೆದ ಕೆಲದಿನಗಳ ಹಿಂದೆ ಮಳೆಯಾದ ಸಂತಸ ಇದೀಗ ಮರೆಯಾಗುತ್ತಿದೆ. ಕಾಫಿಯೊಂದಿಗೆ ಕರಿಮೆಣಸು ಗಿಡಗಳು ಸೇರಿದಂತೆ ಇತರ ಕೃಷಿ ಫಸಲಗಳು ಬಿಸಿಲ ತಾಪಕ್ಕೆ ಒಣಗುವಂತಾಗಿದೆ. ಇದರೊಂದಿಗೆ ಜಲಮೂಲಗಳು ಇನ್ನಷ್ಟು ಬರಿದಾಗುತ್ತಿವೆ. ಈಗಾಗಲೇ ಹಲವಾರು ನದಿ ತೊರೆಗಳಲ್ಲಿ ಸಂಪೂರ್ಣವಾಗಿ ನೀರು ಬತ್ತಿಹೋಗಿವೆ. ನದಿ-ತೋಡುಗಳ ನಡುವೆ ಇರುವ ಬಂಡೆ ಕಲ್ಲುಗಳು ಮಾತ್ರ ಕಂಡು ಬರುತ್ತಿವೆ. ಹಲವಾರು ಜನರ ಬಾವಿ-ಕೆರೆಗಳು ಕೂಡ ಬತ್ತಿ ಹೋಗಿದ್ದು, ಕುಡಿಯುವ ನೀರಿಗೂ ತತ್ವಾರ ಕಂಡುಬAದಿದೆ.

ಕಳೆದ ಕೆಲದಿನಗಳಿಂದ ಎಲ್ಲೂ ಮಳೆಯ ಲಕ್ಷಣಗಳೇ ಕಂಡುಬರುತ್ತಿಲ್ಲ. ವಿಪರೀತ ಒಣಹವೆಯಿಂದಾಗಿ ಜನರು ಹೊರ ಬರಲು ಕೂಡ ಪರಿತಪಿಸುವಂತಾಗಿದೆ. ಇದೀಗ ಏಪ್ರಿಲ್ ತಿಂಗಳಷ್ಟೇ ಮುಕ್ತಾಯಗೊಂಡಿದ್ದು, ಇನ್ನೂ ಬೇಸಿಗೆಯ ಪರ್ವ ಕಾಲವನ್ನು ಜನರು ಎದುರಿಸಬೇಕಾಗಿದೆ. ಈ ನಡುವೆ ಮಳೆಗಾಗಿ ಪ್ರಾರ್ಥಿಸಿ ಅಲ್ಲಲ್ಲಿ ಪೂಜೆ-ಪುನಸ್ಕಾರಗಳನ್ನೂ ನಡೆಸಲಾಗುತ್ತಿದೆ. ಮನುಕುಲ ಮಾತ್ರವಲ್ಲದೆ, ಪ್ರಾಣಿ ಪಕ್ಷಿ ಸಂಕಲವೂ ಮಳೆಗಾಗಿ ಪರಿತಪಿಸುತ್ತಿವೆ. ವನ್ಯ ಪ್ರಾಣಿಗಳು ನೀರನ್ನು ಆರಿಸಿ ನಾಡಿನತ್ತ ಲಗ್ಗೆ ಹಾಕುತ್ತಿರುವದೂ ಸಾಮಾನ್ಯವಾಗಿದೆ. ಹವಾಮಾನ ಇಲಾಖೆ ಕೂಡ ಇನ್ನೂ ಕೆಲದಿನಗಳ ಕಾಲ ಒಣಹವೆ ಹೆಚ್ಚಾಗಲಿರುವ ಬಗ್ಗೆ ಮಾಹಿತಿ ನೀಡಿದ್ದು, ಬಿಸಿಲಿನ ಪ್ರತಾಪ ಎದುರಿಸುವುದು ಹೇಗೆಂದು ಜನರು ಚಿಂತಿತರಾಗಿದ್ದಾರೆ. ಪ್ರಕೃತಿ ಒಲಿದು ಅಗತ್ಯ ಮಳೆಯಾಗಲಿ ಎಂಬದಷ್ಟೇ ಸದ್ಯಕ್ಕೆ ಜನರ ಪ್ರಾರ್ಥನೆಯಾಗಿದೆ. ಜಿಲ್ಲೆಯ ಬೆಳೆಗಾರರು ಕೃಷಿಕರು ಮಳೆಯ ಕೊರತೆಯಿಂದಾಗಿ ಸಂಕಷ್ಟ ಎದುರಿಸುತ್ತಿದ್ದಾರೆ. ಕೇಂದ್ರ ಸರಕಾರ ಈಗಾಗಲೇ ಬರ ಪರಿಹಾರ ಘೋಷಿಸಿದ್ದು, ರಾಜ್ಯ ಸರಕಾರ ಸ್ಪಂದಿಸಬೇಕಿದೆ ಎಂದು ಬಿಜೆಪಿ ರೈತ ಮೋರ್ಚಾ ಉಪಾಧ್ಯಕ್ಷ ಚೋಡುಮಾಡ ದಿನೇಶ್ ಆಗ್ರಹಿಸಿದ್ದಾರೆ.