ಸುಂಟಿಕೊಪ್ಪ, ಏ. ೨೯: ಸುಂಟಿಕೊಪ್ಪ ನಗರ ವ್ಯಾಪ್ತಿಯ ಪ್ರದೇಶಗಳಲ್ಲಿ ಸುಡು ಬಿಸಿಲಿನ ಧಗೆಗೆ ಮರ-ಗಿಡಗಳು, ಪ್ರಾಣಿ - ಪಕ್ಷಿಗಳು ನೀರಿಗಾಗಿ ಹಾತೊರೆಯುತ್ತಿವೆ. ಜನವರಿಯಿಂದ ಇದುವರೆಗೆ ಮಳೆಯ ಸಿಂಚನ ಆಗಲಿಲ್ಲ. ಮಾರ್ಚ್ ತಿಂಗಳಿನಿAದ ಸುಂಟಿಕೊಪ್ಪದ ಗ್ರಾಮ ದೇವತೆಯಿಂದ ಹಿಡಿದು ಬಹುತೇಕ ದೇವಾಲಯಗಳಲ್ಲಿ ಹಾಗೂ ದೈವಗಳ ಸ್ಥಾನಗಳಲ್ಲಿ ವರ್ಷಂಪ್ರತಿ ನಡೆಯುವ ಪೂಜಾ ಕೈಂಕರ್ಯಗಳು, ದೈವಗಳ ನೇಮಗಳು ನಡೆದರೂ, ಮಳೆಯ ದರ್ಶನ ಇದುವರೆಗೆ ಆಗಲಿಲ್ಲ. ಸುಂಟಿಕೊಪ್ಪದ ಮಳೂರು ಬೆಳ್ಳಾರಿಕಮ್ಮ ದೇವಾಲಯದ ವರ್ಷಾವಧಿ ಪೂಜೆ - ಪುನಸ್ಕಾರಗಳು ನಡೆದ ಕ್ಷಣದಲ್ಲಿ ಮಳೆ ಬೀಳುತ್ತಿತ್ತು. ಆದರೆ, ಇದೀಗ ಎಲ್ಲಾ ಕಾರ್ಯಗಳು ಮುಗಿದಿದ್ದರೂ, ಮಳೆಯ ದರ್ಶನದ ಭಾಗ್ಯ ಇಲ್ಲಿಯವರೆಗೆ ಕಾಣುತ್ತಿಲ್ಲ.

ದಿನದಿಂದ ದಿನಕ್ಕೆ ಬಿಸಿಲಿನ ತಾಪ ಏರುತ್ತಿದ್ದು, ಮಳೆಯ ಸಿಂಚನ ಮರೀಚಿಕೆಯಾಗಿದೆ. ಬಹುತೇಕ ಅಂತರ್ಜಲ ಪಾತಾಳಕ್ಕೆ ಇಳಿದಿದ್ದು, ಕುಸಿತ ಕಂಡಿದೆ. ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ವತಿಯಿಂದ ಎಲ್ಲಾ ಬಡಾವಣೆಗಳಿಗೆ ೩ ದಿನಕ್ಕೊಮ್ಮೆ ನೀರನ್ನು ಸರಬರಾಜು ಮಾಡುತ್ತಿದ್ದು, ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಈ ವ್ಯಾಪ್ತಿಯ ಸಣ್ಣ ಬೆಳೆಗಾರರ ಸ್ಥಿತಿ ಶೋಚನೀಯ. ಕೆರೆ, ಬಾವಿ, ಬೋರ್‌ವೆಲ್‌ಗಳು ಬತ್ತಿ ಹೋಗಿದ್ದು, ಕಾಫಿ ತೋಟದ ಗಿಡಗಳು ಬಿಸಿಲಿನ ತಾಪಕ್ಕೆ ಬಲಿಯಾಗಿದ್ದು, ತೀರಾ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಈಗಾಗಲೇ ಹರದೂರುವಿನಿಂದ ಸುಂಟಿಕೊಪ್ಪಕ್ಕೆ ಜಲಜೀವನ್ ಮಿಷನ್ ಕಾಮಗಾರಿ ನಡೆಯುತ್ತಿದ್ದು, ಸುಂಟಿಕೊಪ್ಪದ ನೀರುಣಿಸುವ ಕೊಳವೆಬಾವಿ ಬತ್ತಿ ಹೋಗುವ ಮುನ್ನ ಈ ಯೋಜನೆ ಕಾರ್ಯಗತಗೊಳ್ಳಲಿ ಎಂದು ಸಾರ್ವಜನಿಕರ ಅಭಿಪ್ರಾಯವಾಗಿದೆ.

-ರಾಜು ರೈ.