ಸೋಮವಾರಪೇಟೆ, ಏ. ೩೦: ಸಮೀಪದ ಕಲ್ಕಂದೂರು ಗ್ರಾಮದ ಧನಂಜಯ ಎಂಬುವವರ ಕಾಫಿ ತೋಟಕ್ಕೆ ಆಕಸ್ಮಿಕ ಬೆಂಕಿ ತಗಲಿ ಸುಮಾರು ಎರಡು ಏಕರೆ ತೋಟ ಸುಟ್ಟುಹೋಗಿರುವ ಘಟನೆ ನಡೆದಿದೆ.
ಮಧ್ಯಾಹ್ನದ ಸಂದರ್ಭ ತೋಟಕ್ಕೆ ಬೆಂಕಿ ತಗಲಿ ಕಾಫಿ, ಮೆಣಸು ಮತ್ತು ಬಾಳೆ ಗಿಡಗಳು ಸುಟ್ಟುಹೋಗುತ್ತಿರುವುದನ್ನು ಗಮನಿಸಿದ ಪಕ್ಕದ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರು ತಕ್ಷಣ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ ಹಿನ್ನೆಲೆ ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಬೆಂಕಿಯನ್ನು ನಂದಿಸಿದರು.
ತೋಟದ ಮಾಲೀಕರು ಬೆಂಕಿ ಬಿದ್ದು ನಷ್ಟವಾಗಿರುವ ಬಗ್ಗೆ ಅರಣ್ಯ ಇಲಾಖೆಯಲ್ಲಿ ದೂರಿಕೊಂಡಿದ್ದು, ನಷ್ಟ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.