ವಿಶೇಷ ವರದಿ : ಚಂದ್ರಮೋಹನ್
ಕುಶಾಲನಗರ, ಏ.೩೦: ಕೊಡಗು ಜಿಲ್ಲೆಯ ಸುಂಟಿಕೊಪ್ಪ ವ್ಯಾಪ್ತಿಯಲ್ಲಿ ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಅಕ್ರಮವಾಗಿ ಮರಗಳನ್ನು ಕಡಿದು ಸಾಗಾಟ ಮಾಡುತ್ತಿರುವ ಸದ್ದು ಮತ್ತೆ ಕೇಳಿಬರತೊಡಗಿದೆ.
ಕುಶಾಲನಗರ ತಾಲೂಕು ಸುಂಟಿಕೊಪ್ಪ ಪಟ್ಟಣ ಹೃದಯ ಭಾಗದಲ್ಲಿ ಕಾಫಿ ತೋಟವೊಂದರಿAದ ಹಲವು ಬೆಲೆ ಬಾಳುವ ಮರಗಳನ್ನು ಬುಡ ಸಹಿತ ತೆರವು ಮಾಡಿ ಅಕ್ರಮವಾಗಿ ಸಾಗಾಟ ಮಾಡುವುದರೊಂದಿಗೆ ಕಾಫಿ ತೋಟವನ್ನು ಗಣಿಗಾರಿಕೆ ಜೊತೆಗೆ ಅಕ್ರಮವಾಗಿ ನಿವೇಶನಗಳನ್ನಾಗಿ ಪರಿವರ್ತಿಸುತ್ತಿರುವ ಪ್ರಕರಣ ಇದಾಗಿದೆ.
ಸುಂಟಿಕೊಪ್ಪ ಪಟ್ಟಣದ ಉಲುಗುಲಿ ಗ್ರಾಮದ ಸರ್ವೆ ನಂ೧೪೪/೬ ರಲ್ಲಿ ಬೆಳೆದು ನಿಂತಿದ್ದ ಬೀಟೆ ಮರ ಸೇರಿದಂತೆ ಇತರ ಜಾತಿಯ ೬೮ ಮರಗಳನ್ನು ಇಲಾಖೆ ಅನುಮತಿ ಪಡೆಯದೆ ಪಡೆದು ಸಾಗಾಟ ಮಾಡಿದ್ದು ಪ್ರಕರಣದಲ್ಲಿ ಅಕ್ರಮ ಮರ ದಂಧೆ ಕೈವಾಡ ಇರುವುದಾಗಿ ಸ್ಥಳೀಯ ನಾಗರಿಕರು ಶಕ್ತಿಗೆ ಮಾಹಿತಿ ನೀಡಿದ್ದಾರೆ.
ಅಂದಾಜು ೩ ಎಕರೆ ಪ್ರದೇಶ ಇದೀಗ ಅರ್ಧ ಎಕರೆ ಪ್ರದೇಶ ಕಲ್ಲು ಕೋರೆಯಾಗಿ ಪರಿವರ್ತನೆಗೊಳ್ಳುವುದರೊಂದಿಗೆ ಉಳಿದ ಕಾಫಿ ತೋಟ ಬಹುತೇಕ ಮೈದಾನವಾಗಿ ಮಾರ್ಪಟ್ಟಿದೆ. ಇಲ್ಲಿ ಬೆಳೆದು ನಿಂತಿದ್ದ ಬೆಲೆಬಾಳುವ ಮರಗಳು ನಾಪತ್ತೆಯಾಗಿವೆ ಎಂದು ಸ್ಥಳೀಯರು ದೂರಿದ್ದಾರೆ. ಪಟ್ಟಣದ ಕೆಇಬಿ ಹಿಂಭಾಗ ಹೆದ್ದಾರಿ ಬದಿಯಲ್ಲಿ ಕೂಗಳತೆಯ ದೂರದಲ್ಲಿ ಬೃಹತ್ ಪ್ರಮಾಣದ ಯಂತ್ರಗಳನ್ನು ಬಳಸಿ ಇಂತಹ ಪ್ರಕರಣ ಹಗಲು ರಾತ್ರಿ ನಡೆದಿದ್ದರೂ ಅರಣ್ಯ ಇಲಾಖೆ ಅಧಿಕಾರಿ ಸಿಬ್ಬಂದಿಗಳು ಮಾತ್ರ ಎಚ್ಚರ ತಪ್ಪಿರುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಕಾಫಿ ತೋಟದಲ್ಲಿ ಬೃಹತ್ ಬಂಡೆಗಳನ್ನು ಒಡೆದು ಗಣಿಗಾರಿಕೆ ನಡೆದಿದೆ. ಒಂದು ಮೂಲಗಳ ಪ್ರಕಾರ ನಾಲ್ಕು ಬೀಟೆ ಮರ ಇತರ ೬೮ ಮರಗಳನ್ನು ಕೆಡವಲಾಗಿದ್ದು ಇವುಗಳಲ್ಲಿ ಶೇ. ೯೦ರಷ್ಟು ಮರಗಳು ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಅಕ್ರಮವಾಗಿ ಸಾಗಾಟವಾಗಿದೆ ಎನ್ನುವ ಆರೋಪಗಳು ಸ್ಥಳಕ್ಕೆ ತೆರಳಿದ ‘ಶಕ್ತಿ’ಗೆ ತಿಳಿದು ಬಂದಿದೆ. ಈ ಪ್ರಕರಣದಲ್ಲಿ ಯಾವುದೇ ಚಟುವಟಿಕೆಗಳಿಗೆ ಇಲಾಖೆಗಳಿಂದ ನಿರಪೇಕ್ಷಣ ಪತ್ರ ಪಡೆದಿಲ್ಲ. ಮರ ವ್ಯಾಪಾರಿ ಯೋರ್ವರ ಬೇನಾಮಿ ಹೆಸರಿನಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ಮರಸಾಗಾಟ ಕುಶಾಲನಗರ ಸಮೀಪದ ಇಂಜಿನಿಯರಿAಗ್ ಕಾಲೇಜು ಬಳಿಯ ಮರದ ಮಿಲ್ ಒಂದಕ್ಕೆ ಸಾಗಿಸಿರುವ ಆರೋಪಗಳು ಕೇಳಿ ಬಂದಿವೆ.
ಈ ಬಗ್ಗೆ ಮಾಹಿತಿ ತಿಳಿದ ಹಿನ್ನೆಲೆಯಲ್ಲಿ ಕುಶಾಲನಗರ ಅರಣ್ಯ ವಲಯ ಅಧಿಕಾರಿ ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಸಕ್ತ ಸ್ಥಳದಲ್ಲಿ ಕೇವಲ ಮರದ ತುಂಡುಗಳು ಅವಶೇಷಗಳು, ಸೌದೆಗಳು ಮಾತ್ರ ಕಂಡುಬರುತ್ತಿದ್ದು ಘಟನೆ ಬಗ್ಗೆ ಅರಣ್ಯ ಇಲಾಖೆ ಉನ್ನತ ಮಟ್ಟದ ತನಿಖೆ ನಡೆಸಿ ಕಟ್ಟು ನಿಟ್ಟಿನ ಕಾನೂನು ಕ್ರಮ ಕೈಗೊಳ್ಳಬೇಕಾಗಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಇತ್ತೀಚೆಗಷ್ಟೇ ಶುಂಠಿ ಬೆಳೆ ಮಾಡಲು ಕಾಫಿ ತೋಟಗಳ ಮರಗಳ ನಾಶ ಮಾಡುತ್ತಿರುವ ಪ್ರಕರಣಗಳು ‘ಶಕ್ತಿ'ಯಲ್ಲಿ ಪ್ರಕಟಗೊಂಡ ಬೆನ್ನಲ್ಲೇ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ಉನ್ನತ ಮಟ್ಟದ ತನಿಖೆ ನಡೆಸಿ ಕ್ರಮ ಕೈಗೊಂಡಿರುವುದನ್ನು ಸ್ಮರಿಸಬಹುದು.