ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ: ಸರ್ಕಾರದ ಎಸ್ಐಟಿ ತನಿಖೆಗೆ ಜೆಡಿಎಸ್ ಸ್ವಾಗತ
ಬೆಂಗಳೂರು, ಏ. ೨೮: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವೀಡಿಯೋ ಪ್ರಕರಣದ ತನಿಖೆಗೆ ಕರ್ನಾಟಕ ಸರ್ಕಾರದ ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆಯನ್ನು ಜನತಾ ದಳ (ಜಾತ್ಯತೀತ) ಸ್ವಾಗತಿಸಿದೆ. ಹಾಸನ ಸಂಸದ, ೨೦೨೪ರ ಲೋಕಸಭಾ ಚುನಾವಣೆ ಎನ್ಡಿಎ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಮತ್ತು ವೀಡಿಯೋ ಚಿತ್ರೀಕರಣ ಪ್ರಕರಣ ದೇಶದಾದ್ಯಂತ ಭಾರೀ ಸದ್ದು ಮಾಡುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ. ಈ ಪ್ರಕರಣದಿಂದ ದೇವೇಗೌಡರ ಕುಟುಂಬ ತೀವ್ರ ಮುಜುಗರ ಅನುಭವಿಸುತ್ತಿದ್ದು, ದೌರ್ಜನ್ಯಕ್ಕೊಳಗಾದ ಸಂತ್ರಸ್ತ ಮಹಿಳೆಯೊಬ್ಬರು ಇಂದು ಮಹಿಳಾ ಆಯೋಗಕ್ಕೆ ಮೊದಲ ದೂರು ನೀಡಿದ್ದಾರೆ. ಈ ದೂರು ದಾಖಲು ಬೆನ್ನಲ್ಲೇ ರಾಜ್ಯ ಸರ್ಕಾರ ರಾಜ್ಯ ಮಹಿಳಾ ಆಯೋಗದ ಮನವಿ ಮೇರೆಗೆ ಪ್ರಜ್ವಲ್ ರೇವಣ್ಣ ಅಶ್ಲೀಲ ವೀಡಿಯೋಗಳ ಪ್ರಕರಣದ ತನಿಖೆಗೆ ವಿಶೇಷ ತನಿಖಾ ತಂಡ (ಎಸ್ಐಟಿ) ರಚನೆ ಮಾಡಿದೆ. ಎಸ್ಐಟಿ ರಚನೆಯಾಗುವ ಸುದ್ದಿ ಖಚಿತವಾಗುತ್ತಿದ್ದಂತೆಯೇ ಪ್ರಜ್ವಲ್ ರೇವಣ್ಣಗೆ ಬಂಧನದ ಭೀತಿ ಆರಂಭವಾಗಿದೆ. ಅತ್ತ ರಾಜ್ಯ ಸರ್ಕಾರ ಎಸ್ಐಟಿ ತನಿಖೆಯನ್ನು ಜೆಡಿಎಸ್ ಪಕ್ಷ ಸ್ವಾಗತಿಸಿದ್ದು, ಈ ಬಗ್ಗೆ ಮಾತನಾಡಿರುವ ಜೆಡಿಎಸ್ ಕೋರ್ ಕಮಿಟಿ ಅಧ್ಯಕ್ಷ ಹಾಗೂ ಹಿರಿಯ ನಾಯಕ ಜಿ.ಟಿ. ದೇವೇಗೌಡ, ಈ ಬಗ್ಗೆ ಚರ್ಚಿಸಲು ಪಕ್ಷ ಸಭೆ ಕರೆಯಲಿದೆ. ಎಸ್ಐಟಿ ತನಿಖೆಗೆ ಸರ್ಕಾರವನ್ನು ದೂಷಿಸುವುದಿಲ್ಲ, ಪ್ರಜ್ವಲ್ ರೇವಣ್ಣ ವಿಚಾರದಲ್ಲಿ ಏನು ಕ್ರಮ ಕೈಗೊಳ್ಳಬೇಕು ಎಂದು ಕುಳಿತು ತೀರ್ಮಾನಿಸುತ್ತೇವೆ. ಸದ್ಯಕ್ಕೆ ಎಸ್ಐಟಿ ತನಿಖೆಯನ್ನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.
೩ನೇ ಹಂತದ ಮತದಾನ ಪ್ರಕ್ರಿಯೆಗೆ ಸಜ್ಜಾಗುತ್ತಿರುವ ಉತ್ತರ ಕರ್ನಾಟಕ
ಬೆಂಗಳೂರು, ಏ. ೨೮: ದಕ್ಷಿಣ ಮತ್ತು ಕರಾವಳಿ ಕರ್ನಾಟಕದ ೧೪ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ಮುಗಿದ ಒಂದು ದಿನದ ನಂತರ ಚುನಾವಣಾಧಿಕಾರಿಗಳ ಗಮನ ಕಿತ್ತೂರು, ಕಲ್ಯಾಣ ಮತ್ತು ಮಲೆನಾಡು ಕರ್ನಾಟಕ ಪ್ರದೇಶಗಳತ್ತ ನೆಟ್ಟಿದೆ. ಮೇ ೭ ರಂದು ಚಿಕ್ಕೋಡಿ, ಬೆಳಗಾವಿ, ಬಾಗಲಕೋಟೆ, ಬಿಜಾಪುರ, ಗುಲ್ಬರ್ಗ, ರಾಯಚೂರು, ಬೀದರ್, ಕೊಪ್ಪಳ, ಹಾವೇರಿ, ಧಾರವಾಡ, ಉತ್ತರ ಕನ್ನಡ, ದಾವಣಗೆರೆ ಮತ್ತು ಶಿವಮೊಗ್ಗದಲ್ಲಿ ಚುನಾವಣೆ ನಡೆಯಲಿದೆ. ಕರ್ನಾಟಕದ ಮುಖ್ಯ ಚುನಾವಣಾಧಿಕಾರಿಗಳ ಕಚೇರಿಯ ಅಧಿಕಾರಿಯೊಬ್ಬರು ಪ್ರತಿನಿಧಿಯೊಂದಿಗೆ ಮಾತನಾಡಿ, ಇಲ್ಲಿ ಒಂದೊAದು ಜಿಲ್ಲೆಯಲ್ಲಿ ಸಮಸ್ಯೆಗಳು ವಿಭಿನ್ನವಾಗಿವೆ. ಉತ್ತರ ಕರ್ನಾಟಕದಲ್ಲಿ ಬಿಸಿಲ ಧಗೆ ಹೆಚ್ಚಾಗಿದ್ದು, ಬಳ್ಳಾರಿ, ಬಾಗಲಕೋಟೆ ಮತ್ತು ಕಲಬುರಗಿಯಲ್ಲಿ ಬಿಸಿ ಮತ್ತು ಶುಷ್ಕ ಹವಾಮಾನದ ಸ್ಥಿತಿ ಚಿಂತಾಜನಕವಾಗಿದ್ದರೂ, ಪಶ್ಚಿಮ ಮತ್ತು ಪೂರ್ವದ ಘಟ್ಟ ಪ್ರದೇಶಗಳ ಭೂಪ್ರದೇಶವನ್ನು ಸೂಕ್ಷ್ಮವಾಗಿ ಗಮನಿಸಬೇಕು ಎಂದು ಅವರು ಹೇಳಿದರು. ಒಟ್ಟು ೧೭೨ ಪೊಲೀಸ್ ಗಡಿ ಚೆಕ್ಪೋಸ್ಟ್ಗಳನ್ನು ಸ್ಥಾಪಿಸಲಾಗಿದೆ, ಜೊತೆಗೆ ೪೦ ಅಬಕಾರಿ ಇಲಾಖೆಯಿಂದ ನಿರ್ವಹಿಸಲಾಗಿದೆ. ಅಗತ್ಯವಿದ್ದರೆ, ಇನ್ನಷ್ಟು ರಚಿಸಲಾಗುವುದು. ದೇಶದಲ್ಲಿ ಮೂರನೇ ಹಂತದ ಚುನಾವಣೆ ಪ್ರಕ್ರಿಯೆ ಅಡಿಯಲ್ಲಿ ಬರುವ ಪ್ರದೇಶಗಳಲ್ಲಿ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ಗೋವಾ ಮತ್ತು ಮಹಾರಾಷ್ಟç ದೊಂದಿಗೆ ಗಡಿಯನ್ನು ಹಂಚಿಕೊAಡಿದೆ. ಮತದಾನ ಪೂರ್ಣಗೊಳ್ಳುವವರೆಗೆ, ತಮಿಳುನಾಡು ಮತ್ತು ಕೇರಳದ ಗಡಿ ಪ್ರದೇಶಗಳು ಹಂತ-೨ ರ ಅಡಿಯಲ್ಲಿ ೧೯ ಅರಣ್ಯ ಚೆಕ್ಪೋಸ್ಟ್ಗಳು ಮತ್ತು ೧೫ ಸಾರಿಗೆ ಚೆಕ್ಪೋಸ್ಟ್ಗಳನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದಲ್ಲಿ ಮೂರನೇ ಹಂತದ ಚುನಾವಣೆಯಲ್ಲಿ ಮತದಾನದ ಶೇಕಡಾವಾರು ಪ್ರಮಾಣದಲ್ಲಿ ಅಲ್ಪ ಏರಿಕೆಯನ್ನು ನಿರೀಕ್ಷಿಸುತ್ತಿದ್ದೇವೆ. ಸರಾಸರಿ ಮತದಾನದ ಪ್ರಮಾಣವು ಸುಮಾರು ಶೇ. ೬೭-೬೮ ಆಗಿರಬಹುದು. ಹೆಚ್ಚಿನ ತಾಪಮಾನದ ಕಾರಣ, ಸಂಜೆ ೫ ಗಂಟೆಯ ನಂತರ ಮತ್ತು ಬೆಳಿಗ್ಗೆ ೯ ಗಂಟೆಯ ಮೊದಲು ಮತದಾರರ ಮತದಾನ ಸಂಖ್ಯೆ ಹೆಚ್ಚಾಗಬಹುದು ಎಂದು ನಿರೀಕ್ಷಿಸುತ್ತೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.
ಕೇರಳದಲ್ಲಿ ಹೆಚ್ಚಿದ ಹಕ್ಕಿಜ್ವರ; ಗಡಿಯಲ್ಲಿ ತೀವ್ರ ಕಟ್ಟೆಚ್ಚರ
ಮಂಗಳೂರು, ಏ. ೨೮: ನೆರೆಯ ಕೇರಳ ರಾಜ್ಯದಲ್ಲಿ ಹಕ್ಕಿಜ್ವರ ಭೀತಿ ಹೆಚ್ಚಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೇರಳಕ್ಕೆ ಹೊಂದಿಕೊAಡಿರುವ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಭಾಗಗಳಲ್ಲಿ ತಪಾಸಣೆಯನ್ನು ತೀವ್ರಗೊಳಿಸಲಾಗಿದೆ. ಪಶು ಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ಅರುಣ್ ಕುಮಾರ್ ಶೆಟ್ಟಿ ಮಾತನಾಡಿ, ಹಕ್ಕಿಜ್ವರ ಹರಡದಂತೆ ಸುಳ್ಯದ ಜಾಲ್ಸೂರು, ಬಂಟ್ವಾಳದ ಸಾರಡ್ಕ, ಉಳ್ಳಾಲದ ತಲಪಾಡಿ ಚೆಕ್ ಪೋಸ್ಟ್ಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ ಎಂದು ಹೇಳಿದ್ದಾರೆ. ಆಲಪ್ಪುಳ ನಮ್ಮ ಜಿಲ್ಲೆಯಿಂದ ಸುಮಾರು ೪೦೦ ಕಿಲೊ ಮೀಟರ್ ದೂರದಲ್ಲಿದೆ. ಆದ್ದರಿಂದ ಯಾರೂ ಆತಂಕಕ್ಕೆ ಒಳಗಾಗಬೇಕಾದ ಅಗತ್ಯವಿಲ್ಲ. ಕೇರಳ ಗಡಿಭಾಗ ಸುಳ್ಯದ ಜಾಲ್ಸೂರು, ಬಂಟ್ವಾಳದ ಸಾರಡ್ಕ, ಉಳ್ಳಾಲದ ತಲಪಾಡಿಯಲ್ಲಿ ತಪಾಸಣೆ ತೀವ್ರಗೊಳಿಸಲಾಗಿದೆ. ಕರ್ನಾಟಕದ ಕೋಳಿ, ಕೋಳಿ ಮಾಂಸ ಮತ್ತು ಕೋಳಿ ಉತ್ಪನ್ನಗಳಿಗೆ ಕೇರಳವೇ ದೊಡ್ಡ ಮಾರುಕಟ್ಟೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ಕೇರಳಕ್ಕೆ ಇವುಗಳನ್ನು ಸಾಗಿಸಲಾಗುತ್ತದೆ. ಈ ಸಾಗಾಟದ ವಾಹನಗಳನ್ನು ಗಡಿಭಾಗಗಳಲ್ಲಿ ಸ್ಯಾನಿಟೈಜ್ ಮಾಡಲಾಗುತ್ತದೆ. ಕೇರಳದಿಂದ ಖಾಲಿ ವಾಹನಗಳು ಬರುತ್ತವೆ. ಈ ವಾಹನಗಳನ್ನು ಕೂಡ ಗಡಿಯಲ್ಲಿ ಸ್ಯಾನಿಟೈಜ್ ಮಾಡಿದ ನಂತರವೇ ಒಳಗೆ ಬಿಡಲಾಗುತ್ತದೆ ಎಂದು ತಿಳಿಸಿದರು. ಹೊರಗಿನವರು ಮತ್ತು ಅಪರಿಚಿತರನ್ನು ಕೋಳಿ ಸಾಕಣೆ ಕೇಂದ್ರದೊಳಗೆ ಬಿಡಬಾರದು ಎಂದು ಕೇಂದ್ರಗಳ ಮಾಲೀಕರಿಗೆ ಸೂಚಿಸಲಾಗಿದೆ. ಸೋಂಕು ಹರಡುವುದನ್ನು ತಡೆಯುವುದಕ್ಕಾಗಿ ಹೊರರಾಜ್ಯದಿಂದ ಬರುವ ವಾಹನವನ್ನು ಕೇಂದ್ರದೊಳಗೆ ಬಿಡುವ ಮೊದಲು ಕಡ್ಡಾಯವಾಗಿ ಸ್ಯಾನಿಟೈಜ್ ಮಾಡಬೇಕು ಎಂದು ತಿಳಿಸಲಾಗಿದೆ. ಹಕ್ಕಿಜ್ವರ ಹೆಚ್ಚಾಗಿ ವಲಸೆ ಹಕ್ಕಿಗಳಿಂದ ಹರಡುತ್ತದೆ. ದಕ್ಷಿಣ ಕನ್ನಡ ಜಿಲ್ಲೆಗೆ ವಿದೇಶದಿಂದ ಹಕ್ಕಿಗಳ ವಲಸೆ ಇಲ್ಲ. ಕೇರಳ ಮತ್ತು ಸುತ್ತಮುತ್ತಲಿಂದ ಬರುತ್ತವೆ. ಆದರೆ ಈಗ ಕಡು ಬೇಸಿಗೆ ಇರುವುದರಿಂದ ಹಕ್ಕಿಗಳ ವಲಸೆ ತೀರಾ ಅಪರೂಪ. ಹೀಗಾಗಿ ಹಕ್ಕಿಜ್ವರದ ಸೋಂಕು ಹರಡುವ ಸಾಧ್ಯತೆ ಕಡಿಮೆ. ಆದರೂ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು. ಹಕ್ಕಿಜ್ವರ ಹರಡುವುದರ ಕುರಿತು ಮತ್ತು ಅದನ್ನು ತಡೆಯುವ ಕ್ರಮಗಳ ಬಗ್ಗೆ ಪಶುವೈದ್ಯರು ರೈತರಿಗೆ ಮಾಹಿತಿ ನೀಡಿದ್ದಾರೆ. ಕೋಳಿ ಸಾಕಣೆ ಕೇಂದ್ರ ಮತ್ತು ಮಾಂಸ ಸಂಸ್ಕರಣೆ ಘಟಕಗಳಲ್ಲಿ ಕೆಲಸ ಮಾಡುವವರಿಗೆ ಹಕ್ಕಿಜ್ವರದ ಸೋಂಕು ತಗಲುವ ಸಾಧ್ಯತೆ ಹೆಚ್ಚು ಇರುವುದರಿಂದ ಜಾಗೃತರಾಗಿರುವಂತೆ ತಿಳಿಸಲಾಗಿದೆ ಎಂದು ಹೇಳಿದರು.
ಅಮೇರಿಕಾದಲ್ಲಿ ಭೀಕರ ಅಪಘಾತ: ಭಾರತ ಮೂಲದ ಮಹಿಳೆಯರ ಸಾವು!
ವಾಷಿಂಗ್ಟನ್, ಏ. ೨೮: ಅಮೇರಿಕಾದಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಭಾರತ ಮೂಲದ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ಅಮೇರಿಕಾದಲ್ಲಿ ನಡೆದ ಭೀಕರ ಕಾರು ಅಪಘಾತದಲ್ಲಿ ಗುಜರಾತ್ ಮೂಲದ ಮೂವರು ಮಹಿಳೆಯರು ಸಾವನ್ನಪ್ಪಿದ್ದಾರೆ. ಗುಜರಾತ್ನ ಆನಂದ್ ಜಿಲ್ಲೆಯ ನಿವಾಸಿಗಳಾದ ರೇಖಾ ಬೆನ್ ಪಟೇಲ್, ಸಂಗೀತಾ ಬೆನ್ ಪಟೇಲ್ ಮತ್ತು ಮನೀಶಾ ಬೆನ್ ಪಟೇಲ್ ಅವರು ದಕ್ಷಿಣ ಕೆರೊಲಿನಾದ ಗ್ರೀನ್ವಿಲ್ಲೆ ಕೌಂಟಿಯಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ. ಮೂಲಗಳ ಪ್ರಕಾರ ಅಮೆರಿಕದ ಕೌಂಟಿ ಹೆದ್ದಾರಿಯ ಸೇತುವೆಯ ಮೇಲೆ ಅವರು ವೇಗವಾಗಿ ಎಸ್ಯುವಿ ಕಾರು ಚಲಾಯಿಸುತ್ತಿದ್ದಾಗ ಅಪಘಾತ ಸಂಭವಿಸಿದ್ದು, ಕಾರು ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿಯಾಗಿ ಮೇಲಕ್ಕೆ ಹಾರಿದೆ. ಬರೋಬ್ಬರಿ ೨೦ ಅಡಿ ಮೇಲಕ್ಕೆ ಹಾರಿದ ಕಾರು ಬಳಿಕ ಸೇತುವೆ ಬಳಿಯ ಮರಗಳಿಗೆ ಡಿಕ್ಕಿಯಾಗಿ ಅಪ್ಪಳಿಸಿದೆ. ಕಾರು ಎಲ್ಲ ಟ್ರಾಫಿಕ್ ನಿಯಮಗಳನ್ನು ಮೀರಿ ವೇಗವಾಗಿ ಚಲಿಸುತ್ತಿತ್ತು ಎಂದು ಗ್ರೀನ್ವಿಲ್ಲೆ ಕೌಂಟಿ ಕರೋನರ್ ಆಫೀಸ್ ಮಾಹಿತಿ ನೀಡಿದೆ. ಈ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಯೊಬ್ಬರು, ಕಾರು ಅತಿ ವೇಗದಲ್ಲಿತ್ತು. ಈ ವೇಳೆ ಕಾರು ಚಾಲಕರ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿಯಾಗಿದೆ. ಈ ಅಪಘಾತದಲ್ಲಿ ಬೇರೆ ಯಾವುದೇ ಕಾರುಗಳು ಭಾಗಿಯಾಗಿಲ್ಲ. ಅಪಘಾತದ ಬಳಿಕ ಕಾರು ಗಾಳಿಯಲ್ಲಿ ಸುಮಾರು ೨೦ ಅಡಿ ಮೇಲಕ್ಕೆ ಹಾರಿ ಮರಗಳ ಮೇಲೆ ಬಿದ್ದಿದೆ. ಕಾರು ಮರದ ಮೇಲೆ ಸಿಲುಕಿಕೊಂಡಿದ್ದು, ಹಲವು ತುಂಡುಗಳಾಗಿ ಛಿದ್ರಗೊಂಡಿದೆ. ದುರಂತದಲ್ಲಿ ಮೂರು ಮಹಿಳೆಯರು ಸಾವನ್ನಪ್ಪಿದ್ದು, ಅಪಘಾತದಲ್ಲಿ ಬದುಕುಳಿದ ಏಕೈಕ ವ್ಯಕ್ತಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಹೇಳಿದ್ದಾರೆ.