ಸಿದ್ದಾಪುರ, ಏ. ೨೮: ಮತದಾನದಿಂದ ದೂರ ಉಳಿಯುವ ಅದೆಷ್ಟೊ ಮಂದಿಯ ನಡುವೆ ಮೂರು ಲಕ್ಷ ನಷ್ಟವಾದರೂ ಉಮ್ರಾಹ್ ಯಾತ್ರೆ ಮುಂದೂಡಿ ಮತದಾನದಲ್ಲಿ ಪಾಲ್ಗೊಳ್ಳುವದರ ಮೂಲಕ ಪ್ರಜಾಪ್ರಭುತ್ವ ಉಳಿಯಲಿ ‘ನಮ್ಮ ವೋಟು ನಮ್ಮ ಹಕ್ಕು’ ಎಂಬ ಸಂದೇಶದೊAದಿಗೆ ೩೦ ಮಂದಿ ಯಾತ್ರಿಗಳನ್ನು ಮತದಾನದಲ್ಲಿ ಪಾಲ್ಗೊಳ್ಳುವಂತೆ ಮಾಡಿ ಎನ್‌ಸಿಟಿ ಟ್ರಾವೆಲ್ಸ್ನ ಅಕ್ಕಳತಂಡ ಮೊಯ್ದು ಮಾದರಿಯಾಗಿದ್ದಾರೆ.
ಲೋಕಸಭಾ ಚುನಾವಣೆ ಘೋಷಣೆಯ ನಿಗದಿಗಿಂತ ಮುನ್ನ ಉಮ್ರಾಹ್ ಪ್ರವಾಸ ಯಾತ್ರೆ ಕೈಗೊಳ್ಳಲು ಮೂರು ತಿಂಗಳ ಹಿಂದೆಯೇ ೩೦ ಯಾತ್ರಿಗಳು ಎನ್‌ಸಿಟಿ ಟ್ರಾವೆಲ್ಸ್ ಮೂಲಕ ಬುಕ್ಕಿಂಗ್ ಮಾಡಿದರು. ೩೦ ಜನರ ಉಮ್ರಾಹ್ ಗ್ರೂಪ್ ಮಾಡಿ ಏಪ್ರಿಲ್ ೨೪ರಂದು ಪ್ರವಾಸ ಯಾತ್ರೆಗೆ ಎಲ್ಲಾ ಸಿದ್ಧತೆಗಳನ್ನು ಕೈಗೊಳ್ಳಲಾಗಿತ್ತು. ಮುಂಗಡ ಮೂರು ಲಕ್ಷ ರೂ. ನೀಡಿ ವಿಮಾನ ಟಿಕೆಟ್ ಸಹ ಬುಕ್ ಮಾಡಲಾಗಿತ್ತು. ಪ್ರವಾಸಕ್ಕೆ ಎಲ್ಲಾ ಸಿದ್ಧತೆಗಳನ್ನು ಕೈಗೊಂಡಿರುವ ಸಂದರ್ಭ ಲೋಕಸಭಾ ಚುನಾವಣೆ ದಿನಾಂಕ ನಿಗದಿಯಾಯಿತು. ಯಾತ್ರಿಗಳೊಂದಿಗೆ ಮಾತುಕತೆ ನಡೆಸಿ ಮೇ ೯ರಂದು ಪ್ರವಾಸಕ್ಕೆ ತೆರಳಲು ದಿನಾಂಕ ನಿಗದಿಮಾಡಿ ತಾ.೨೬ರ ಲೋಕಸಭಾ ಚುನಾವಣೆಯ ಮತದಾನದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವ ಮೂಲಕ ನಮ್ಮ ಹಕ್ಕು ಚಲಾಯಿಸಬೇಕೆಂದು ಮನವಿ ಮಾಡಲಾಗಿತ್ತು. ಅದರಂತೆ ೩೦ ಯಾತ್ರಿಗಳು ಜಿಲ್ಲೆಯ ಆಯಾ ಮತಗಟ್ಟೆಗಳಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.
ಕಳೆದ ೧೨ ದಿನಗಳಿಂದ ಸೌದಿ ಅರೇಬಿಯಾ ಸರಕಾರವು ಉಮ್ರಾಹ್ ವೀಸಾ ನಿರ್ಬಂಧ ವಿಧಿಸಿದ್ದು, ಈಗ ವೀಸಾ ಲಭಿಸುತ್ತಿಲ್ಲ ಇದರಿಂದಾಗಿ ಮೇ ೯ ರಂದು ಹೊರಡಲು ಸಾಧ್ಯವಾಗದೆ - ವಿಮಾನ ಸಂಸ್ಥೆಗಳು ಗ್ರೂಪ್ ಬುಕ್ಕಿಂಗ್ ಹಣ ಮರುಪಾವತಿ ಮಾಡದೆ ಇರುವುದರಿಂದ ಸುಮಾರು ೩ ಲಕ್ಷ ನಷ್ಟ ಅನುಭವಿಸಬೇಕಾಗುತ್ತದೆ. ಆದರೂ ಇವರುಗಳು ಹಣಕ್ಕಿಂತ ಮತದಾನ ಮುಖ್ಯವೆಂಬ ಸಂದೇಶ ಸಾರಿದ್ದಾರೆ. -ಎಸ್.ಎಂ ಮುಬಾರಕ್