ಸೋಮವಾರಪೇಟೆ,ಏ.೨೭: ಸಮೀಪದ ಯಡೂರು ಗ್ರಾಮದ ಶ್ರೀ ಸಬ್ಬಮ್ಮ ದೇವಿಯ ಸುಗ್ಗಿ ಉತ್ಸವ ಗ್ರಾಮಸ್ಥರು ಹಾಗೂ ಭಕ್ತಾದಿಗಳ ಸಮ್ಮುಖದಲ್ಲಿ ಶ್ರದ್ಧಾಭಕ್ತಿಯಿಂದ ನಡೆಯಿತು.

ಯಡೂರು ಗ್ರಾಮದ ಐತಿಹಾಸಿಕ ಹಿನ್ನೆಲೆಯುಳ್ಳ ಸುಗ್ಗಿಕಟ್ಟೆಯಲ್ಲಿ ಮಲೆನಾಡಿನ ಜನರ ಗ್ರಾಮೀಣ ಸಂಸ್ಕೃತಿಯನ್ನು ಬಿಂಬಿಸುವ ಸಾಂಪ್ರದಾಯಿಕ ಪೂಜಾ ಕಾರ್ಯಗಳು ನಡೆದವು.

ರಾತ್ರಿ ಸುಗ್ಗಿಕಟ್ಟೆಯಲ್ಲಿ ದೇವಿಗೆ ಎಡೆ ಇಟ್ಟ ಗ್ರಾಮಸ್ಥರು ಊರಿನ ಸಮೃದ್ಧಿಗಾಗಿ ಸಾಮೂಹಿಕ ಪೂಜೆ ಸಲ್ಲಿಸಿದರು. ಉತ್ತಮ ಮಳೆಯಾಗಿ ಬರಗಾಲದ ಆತಂಕದಿAದ ಕೃಷಿಕರನ್ನು ಮುಕ್ತಗೊಳಿಸುವಂತೆ ದೇವಿಯಲ್ಲಿ ಪ್ರಾರ್ಥಿಸಿದರು.

ಸುಗ್ಗಿಕಟ್ಟೆಯಲ್ಲಿ ಮಹಿಳೆಯರು ಹರಕೆ ಮಾಡಿಕೊಂಡರು. ಇನ್ನು ಕೆಲವರು ತಮ್ಮ ಇಷ್ಟಾರ್ಥ ನೆರವೇರಿಕೆಗೆ ಹರಕೆ ಹೊತ್ತುಕೊಂಡರು. ಪಟಾಕಿ ಸಿಡಿಸುತ್ತ, ವಾದ್ಯಗೋಷ್ಠಿಯಲ್ಲಿ ಗ್ರಾಮಸ್ಥರು ಸುಗ್ಗಿಕಟ್ಟೆ ಪ್ರದಕ್ಷಿಣೆ ಹಾಕಿದರು. ನಂತರ ಮಡೆ ಭೋಜನ ಸ್ವೀಕರಿಸಿದರು. ಗ್ರಾಮದ ದೇವರಬಾವಿಯಲ್ಲಿ ಬಸವಣ್ಣ ಗಂಗಾಸ್ನಾನ ನಡೆಯಿತು.

ಬಸವಣ್ಣ ದೇವರನ್ನು ಅಡ್ಡಪಲ್ಲಕ್ಕಿಯಲ್ಲಿ ಕುಳ್ಳಿರಿಸಿ, ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು. ಪ್ರತಿ ಮನೆಯವರು ಈಡುಗಾಯಿಯೊಂದಿಗೆ ಪೂಜೆ ಸಲ್ಲಿಸಿದರು. ಸುಗ್ಗಿಕಟ್ಟೆಯಲ್ಲಿ ಗ್ರಾಮಸ್ಥರ ಸಾಮೂಹಿಕ ಕುಣಿತದೊಂದಿಗೆ, ದೇವತಕ್ಕರ ಮೆರವಣಿಗೆ ನಡೆಯಿತು. ತಾ.೨೮ರಂದು (ಇಂದು) ಮಲ್ಲಸುಗ್ಗಿ, ತಾ.೨೯ ರಂದು ಹಗಲು ಸುಗ್ಗಿ, ೩೦ರಂದು ಮಾರಿ ಕಳುಹಿಸುವ ಕಾರ್ಯದೊಂದಿಗೆ ಸುಗ್ಗಿ ಉತ್ಸವ ಮುಕ್ತಾಯಗೊಳ್ಳಲಿದೆ. ದೇವರ ಒಡೆಕಾರರಾದ ವೈ.ಡಿ.ನಾಗೇಶ್, ಕಾರ್ತಿಕ್, ನಾಗರಜು, ಬೆಳ್ಳಿಯಪ್ಪ, ಜಯರಾಂ, ದಯಾನಂದ ಪೂಜಾ ಕಾರ್ಯಗಳನ್ನು ನಡೆಸಿಕೊಟ್ಟರು.

ಯಡೂರು ಗ್ರಾಮಾಭಿವೃದ್ಧಿ ಮಂಡಳಿ ಅಧ್ಯಕ್ಷ ಭಾನುಪ್ರಕಾಶ್, ಕಾರ್ಯದರ್ಶಿ ಕಾರ್ತಿಕ್, ಪದಾಧಿಕಾರಿಗಳಾದ ರವಿ, ಪವನ್, ಕುಮಾರಸ್ವಾಮಿ, ವಿನಯ್, ಕಿರಣ್, ಪ್ರವೀಣ್ ಸೇರಿದಂತೆ ಗ್ರಾಮದ ಹಿರಿಯರು ಸುಗ್ಗಿ ಉತ್ಸವದ ಜವಾಬ್ದಾರಿ ವಹಿಸಿದ್ದರು.