ಮಡಿಕೇರಿ, ಏ. ೨೭: ಲೋಕಸಭಾ ಚುನಾವಣೆ ಜಿಲ್ಲೆಯಲ್ಲಿ ಶಾಂತಿಯುತವಾಗಿ ನಡೆದಿದ್ದು, ಮತಯಂತ್ರಗಳಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದೆ. ಜೂನ್ ೪ ರಂದು ಫಲಿತಾಂಶ ಪ್ರಕಟಗೊಳ್ಳಲಿದ್ದು, ಅಲ್ಲಿಯ ತನಕ ಫಲಿತಾಂಶದ ಕೌತುಕ ಮುಂದುವರೆಯಲಿದೆ.
ಜಿಲ್ಲೆಯ ೨ ಕ್ಷೇತ್ರಗಳಲ್ಲಿ ತಲಾ ೨೭೩ ರಂತೆ ೫೪೬ ಮತಗಟ್ಟೆಗಳಲ್ಲಿ ಮತದಾನ ನಡೆದಿದ್ದು, ಶೇ ೭೪.೭೪ ಗುರಿಯನ್ನು ಸಾಧಿಸಲಾಗಿದೆ. ಚುನಾವಣೆ ನಡೆದ ನಂತರ ಆಯಾ ಮತಗಟ್ಟೆಗಳಿಂದ ವಿ.ವಿ. ಪ್ಯಾಟ್, ಇ.ವಿ.ಎಂ, ಕಂಟ್ರೋಲ್ ಯೂನಿಟ್, ಬ್ಯಾಲೆಟ್ ಯೂನಿಟ್ ಅನ್ನು ಸೂಕ್ತ ಭದ್ರತೆಯೊಂದಿಗೆ ಮಡಿಕೇರಿಯ ಸಂತ ಜೋಸೆಫರ ಶಾಲೆ ಹಾಗೂ ವೀರಾಜಪೇಟೆಯ ಸಂತ ಅನ್ನಮ್ಮ ಶಾಲೆಯ ಸ್ಟಾçಂಗ್ ರೂಂನಲ್ಲಿಟ್ಟು ಡಿಮಸ್ಟರಿಂಗ್ ಕಾರ್ಯವನ್ನು ಬೆಳಿಗ್ಗೆ ೬ ಗಂಟೆಯ ತನಕ ನಡೆಸಲಾಯಿತು. ಜಿಲ್ಲೆಯ ಡಿಮಸ್ಟರಿಂಗ್ ಪೂರ್ಣಗೊಂಡ ಬಳಿಕ ೨ ವಾಹನಗಳ ಮೂಲಕ ಮೈಸೂರಿಗೆ ಮತಯಂತ್ರಗಳನ್ನು ಕಳುಹಿಸಿಕೊಡಲಾಗಿದೆ. ಜಿಲ್ಲಾಧಿಕಾರಿ ವೆಂಕಟ್ ರಾಜಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ರಾಮರಾಜನ್, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ವರ್ಣಿತ್ ನೇಗಿ, ಉಪವಿಭಾಗಾಧಿಕಾರಿ ವಿನಾಯಕ್ ನರ್ವಾಡೆ ಸ್ಟಾçಂಗ್ ರೂಂಗೆ ಭೇಟಿ ನೀಡಿ ಡಿಮಸ್ಟರಿಂಗ್ ಕುರಿತು ಪರಿಶೀಲನೆ ನಡೆಸಿದರು.
ಮೈಸೂರಿಗೆ ರವಾನೆ
ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಮತಯಂತ್ರಗಳನ್ನು ಮೈಸೂರಿನ ಪಡುವಾರಹಳ್ಳಿಯಲ್ಲಿರುವ ಮಹಾರಾಣಿ ನಿರ್ವಹಣಾ ಕಾಲೇಜಿಗೆ ಚುನಾವಣಾ ಸಿಬ್ಬಂದಿ ಇವಿಎಂ, ವಿವಿ ಪ್ಯಾಟ್ಗಳನ್ನ ಸೀಲ್ ಮಾಡಿ ಸ್ಟಾçಂಗ್ ರೂಂಗಳಿಗೆ ರವಾನೆ ಮಾಡಿದ್ದಾರೆ. ಅದೇ ರೀತಿ ಮಡಿಕೇರಿ ಹಾಗೂ ವೀರಾಜಪೇಟೆಯಿಂದಲೂ ಇವಿಎಂಗಳು ಇದೀಗ ಮೈಸೂರಿನಲ್ಲಿ ಭದ್ರವಾಗಿವೆ. ಕೊಡಗು ಸೇರಿದಂತೆ ಮೈಸೂರು ಜಿಲ್ಲೆಯ ೬ ಕ್ಷೇತ್ರಗಳಿಂದ ಹೋದ ಮತಯಂತ್ರವನ್ನು ಮಹಾರಾಣಿ ಕಾಲೇಜಿನಲ್ಲಿ ಸೂಕ್ತ ಭದ್ರತೆಯೊಂದಿಗೆ ಇರಿಸಲಾಯಿತು.
ಈ ಸಂದರ್ಭ ಮೈಸೂರು ಜಿಲ್ಲಾಧಿಕಾರಿ ಡಾ. ಕೆ.ವಿ.ರಾಜೇಂದ್ರ ಹಾಗೂ ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಅವರು ಸ್ಟಾçಂಗ್ ರೂಂಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಜಿಲ್ಲಾಧಿಕಾರಿ ಮತಯಂತ್ರಗಳಿಗೆ ಮೂರು ಹಂತದ ಭದ್ರತೆ ನೀಡಲಾಗುತ್ತಿದ್ದು, ಇವಿಎಂ, ವಿವಿ ಪ್ಯಾಟ್ ಇರುವ ರೂಂಗಳಿಗೆ ಮೊದಲ ಹಂತದಲ್ಲಿ ಕೇಂದ್ರೀಯ ಸಶಸ್ತç ಪೊಲೀಸ್ ಪಡೆ ತುಕಡಿ, ೨ನೇ ಹಂತದಲ್ಲಿ ಕರ್ನಾಟಕ ಸಶಸ್ತç ಮೀಸಲು ಪಡೆ ಹಾಗೂ ೩ನೇ ಹಂತದಲ್ಲಿ ಸ್ಥಳೀಯ ಸಿವಿಲ್ ಪೊಲೀಸ್ ಸಿಬ್ಬಂದಿಯನ್ನು ಬಂದೋಬಸ್ತ್ಗಾಗಿ ನಿಯೋಜಿಸಲಾಗಿದೆ. ಕಟ್ಟಡದ ಎಲ್ಲಾ ಸ್ಟಾçಂಗ್ ರೂಂಗಳು, ಮತ ಎಣಿಕಾ ಕೇಂದ್ರಗಳಿಗೆ ಹೆಚ್ಚು ಸಿಸಿ ಕ್ಯಾಮರಾಗಳನ್ನು ಅಳವಡಿಸಿ, ಕಟ್ಟೆಚ್ಚರ ವಹಿಸಲಾಗಿದೆ ಎಂದು ಮಾಹಿತಿ ನೀಡಿದರು.
ಈ ಸಂದರ್ಭ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಎಂ.ಮುತ್ತುರಾಜ್, ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಮಹೇಶ್ ಹಾಗೂ ಇತರೆ ಚುನಾವಣಾ ಅಧಿಕಾರಿಗಳು ಉಪಸ್ಥಿತರಿದ್ದರು