ಮಡಿಕೇರಿ, ಏ. ೨೬ : ಪ್ರಜಾಪ್ರಭುತ್ವದ ಹಬ್ಬ ಎಂದೇ ಬಿಂಬಿತವಾಗಿರುವ ಲೋಕಸಭಾ ಚುನಾವಣೆಯ ಪ್ರಥಮ ಹಂತದ ಮತದಾನ ಇಂದು ರಾಜ್ಯದ ೧೪ ಕ್ಷೇತ್ರಗಳಲ್ಲಿ ಜರುಗಿತು. ಈ ಬಾರಿಯ ಚುನಾವಣೆಯಲ್ಲಿ ರಾಜ್ಯದ ‘‘ಹೈ ವೋಲ್ಟೇಜ್’ ಕ್ಷೇತ್ರಗಳಲ್ಲಿ ಒಂದಾಗಿ ಗುರುತಿಸಲ್ಪಟ್ಟಿರುವ ಕೊಡಗು - ಮೈಸೂರು ಕ್ಷೇತ್ರಕ್ಕೂ ಇಂದು ಚುನಾವಣೆ ನಡೆದಿದ್ದು ಲೋಕಸಭಾ ಸ್ಥಾನದ ಪ್ರತಿನಿಧಿಯ ಆಯ್ಕೆಗೆ ಕೊಡಗು ಜಿಲ್ಲೆಯ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಸುಡು ಬಿಸಿಲಿನ ವಾತಾವರಣದ ನಡುವೆಯೂ ಜನರು ಉತ್ಸಾಹದೊಂದಿಗೆ ಮತದಾನ ಪ್ರಕ್ರಿಯೆಯಲ್ಲಿ ಭಾಗಿಗಳಾದರು. ಕೊಡಗು ಜಿಲ್ಲೆಯಲ್ಲಿ ಶಾಂತಿಯುತ ಮತದಾನದ ಪ್ರಕ್ರಿಯೆ

ನಡೆದಿದ್ದು ಶೇ. ೭೪.೭೪ ಮತ ಚಲಾವಣೆಯಾಗಿದೆ. ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಸರಾಸರಿ ಶೇ. ೭೦.೪೫ ಮತದಾನ ನಡೆದಿದೆ. ಕೊಡಗಿನಲ್ಲಿ ಜಿಲ್ಲೆಯ ಹಾಲಿ-ಮಾಜಿ ಜನಪ್ರತಿನಿಧಿಗಳು, ಅಧಿಕಾರಿಗಳು, ಪಕ್ಷಗಳ ಪ್ರಮುಖರು ಸೇರಿದಂತೆ ಇತರ ಮತದಾರರು ನೂತನ ಪ್ರತಿನಿಧಿಯ ಆಯ್ಕೆಯ ಕಗ್ಗಂಟಿನ ಪ್ರಶ್ನೆಗೆ ಉತ್ತರ ನೀಡಿದ್ದಾರೆ.

ಜಿಲ್ಲೆಯಲ್ಲಿ ಒಟ್ಟು ೪,೭೦,೭೬೬ ಮಂದಿ ಈ ಬಾರಿಯ ಚುನಾವಣೆಯಲ್ಲಿ ಮತ ಚಲಾಯಿಸುವ ಹಕ್ಕನ್ನು ಹೊಂದಿದ್ದರು.ಈ ಕ್ಷೇತ್ರದಲ್ಲಿ ಒಟ್ಟು ೧೮ ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ. ಆದರೂ ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿ.ಜೆ.ಪಿ. - ಜೆ.ಡಿ.ಎಸ್. ಮೈತ್ರಿ ಅಭ್ಯರ್ಥಿ ನಡುವೆ ನೇರ ಹಣಾಹಣಿ ಇದ್ದು ಇದೀಗ ಮತದಾರರ ತೀರ್ಪು ಮತಯಂತ್ರದಲ್ಲಿ ದಾಖಲಾಗಿದ್ದು ಫಲಿತಾಂಶಕ್ಕೆ ಜೂನ್ ೪ರ ತನಕ ಕಾಯಬೇಕಾಗಿದ್ದು. ಅಲ್ಲಿಯ ತನಕ ಕುತೂಹಲ ಮುಂದುವರಿಯಲಿದೆ. ಕಾಂಗ್ರೆಸ್‌ನ ಎಂ. ಲಕ್ಷö್ಮಣ್ ಹಾಗೂ ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಯಾಗಿ ಯದುವೀರ್ ಅವರು ನೇರ ಸ್ಪರ್ಧೆಯಲ್ಲಿದ್ದಾರೆ

ಕೊಡಗು-ಮೈಸೂರು ಲೋಕಸಭಾ ಕ್ಷೇತ್ರ ಒಟ್ಟು ೮ ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದೆ. ಇದರಲ್ಲಿ ಕೊಡಗು ಜಿಲ್ಲೆಯ ಮಡಿಕೇರಿ ಹಾಗೂ ವೀರಾಜಪೇಟೆ ಕ್ಷೇತ್ರಗಳು ಒಂದಾಗಿದ್ದು ಈ ಎರಡು ಕ್ಷೇತ್ರ ವ್ಯಾಪ್ತಿಯ ನಿಗದಿತ ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಿತು. ಎರಡು ಕ್ಷೇತ್ರಗಳಲ್ಲಿ ತಲಾ ೨೭೩ ಮತಗಟ್ಟೆಗಳಂತೆ ಒಟ್ಟು ೫೪೬ ಮತಗಟ್ಟೆಗಳಲ್ಲಿ ಮತ ಚಲಾವಣೆ ನಡೆದಿದೆ. ಕೆಲವು ಮತಗಟ್ಟೆಗಳಲ್ಲಿ ಬೆಳಿಗ್ಗೆಯಿಂದಲೇ ಸರತಿ ಸಾಲಿನಲ್ಲಿ ಚುರುಕಿನ ಮತದಾನ ಕಂಡುಬAದರೆ ಒಂದಷ್ಟು ಮತಗಟ್ಟೆಗಳಲ್ಲಿ ಆರಂಭದಲ್ಲಿ ನೀರಸ ಪ್ರತಿಕ್ರಿಯೆ ಇತ್ತು. ನಂತರದಲ್ಲಿ ಮತದಾರರು ಉತ್ಸಾಹದಿಂದ ಮತಗಟ್ಟೆೆಗೆ ಆಗಮಿಸಿದರು. ಬಿಸಿಲಿನ ಕಾರಣದಿಂದ ಬೆಳಿಗ್ಗೆ ಹಾಗೂ ಸಂಜೆ ವೇಳೆ ಒಂದಷ್ಟು ಬಿರುಸು ಹಲವೆಡೆ ಕಂಡುಬAದಿತು.

ಜಿಲ್ಲೆಯಲ್ಲಿ ಮತದಾನದ ಹಕ್ಕು ಹೊಂದಿದ್ದ ೪,೭೦,೭೬೬ ಮತದಾರರ ಪೈಕಿ ಮಡಿಕೇರಿ ಕ್ಷೇತ್ರದಲ್ಲಿ ೧,೧೬,೧೪೩ ಪುರುಷರು, ೧,೧೪,೪೨೫ ಮಹಿಳೆಯರು ಇತರೆ ೯ ಸೇರಿದಂತೆ ೨,೩೦,೫೬೮ ಮತದಾರರು ಹಾಗೂ ವೀರಾಜಪೇಟೆ ಕ್ಷೇತ್ರದಲ್ಲಿ ೧,೧೪,೪೨೫ ಪುರುಷರು, ೧,೧೭,೬೦೧ ಮಹಿಳೆಯರು, ಇತರೆ ೭ ಮಂದಿ ಸೇರಿದಂತೆ ೨,೩೨,೦೩೩ ಮಂದಿ ಮತದಾರರಿದ್ದರು. ಒಟ್ಟಾರೆಯಾಗಿ ಜಿಲ್ಲೆಯಲ್ಲಿ ಶೇ. ೭೪.೭೪ ಮತದಾನವಾಗಿದೆ.

ಚುನಾವಣಾ ಆಯೋಗದ ನಿರ್ದೇಶನಕ್ಕೆ ಒಳಪಟ್ಟು ಜಿಲ್ಲಾಡಳಿತ ಹಾಗೂ ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ಅಧಿಕಾರಿಗಳು, ಸಿಬ್ಬಂದಿಗಳು ಮತ ಚಲಾವಣೆ ಪ್ರಕ್ರಿಯೆಯನ್ನು ಸುಸೂತ್ರವಾಗಿ ನಡೆಸುವಲ್ಲಿ ಯಶಸ್ವಿಯಾದರು. ಜಿಲ್ಲಾಧಿಕಾರಿ ವೆಂಕಟ್ ರಾಜಾ ಸೇರಿದಂತೆ ಜಿಲ್ಲೆಯ ಪ್ರಮುಖ ಅಧಿಕಾರಿಗಳು ಜಿಲ್ಲೆಯಲ್ಲೇ ಮತ ಚಲಾಯಿಸಿದ್ದಲ್ಲದೆ ಇತರರು ಮತ ಚಲಾಯಿಸುವಂತೆ ಪ್ರೇರೇಪಿಸುವ ಪ್ರಯತ್ನ ನಡೆಸಿದ್ದು ವಿಶೇಷವಾಗಿತ್ತು. ಎಸ್.ಪಿ. ಕೆ. ರಾಮರಾಜನ್ ನೇತೃತ್ವದಲ್ಲಿ ಜಿಲ್ಲೆಯಾದ್ಯಂತ ಸೂಕ್ತ ಪೊಲೀಸ್ ಬಂದೋಬಸ್ತ್ ಅನ್ನು ಕಲ್ಪಿಸಲಾಗಿತ್ತು. ಎರಡು ಕ್ಷೇತ್ರಗಳಲ್ಲಿ ೬೦೪ ಪಿ.ಆರ್.ಓ., ೬೦೪ ಎ.ಪಿಆರ್.ಓ. ೧೨೦೮ ಪಿ.ಓ.ಗಳು ಸೇರಿ ಒಟ್ಟು ೨೪೧೬ ಸಿಬ್ಬಂದಿಗಳು ಚುನಾವಣಾ ಪ್ರಕ್ರಿಯೆಗೆ ನಿಯೋಜಿತರಾಗಿದ್ದರು.

ಪೊಲೀಸ್ ವ್ಯವಸ್ಥೆ

ಓರ್ವ ಎಸ್.ಪಿ., ಓರ್ವ ಎ.ಎಸ್.ಪಿ. ನೇತೃತ್ವದಲ್ಲಿ ಜಿಲ್ಲೆಯ ಪೊಲೀಸರು, ಗೃಹರಕ್ಷಕ ದಳದ ಸಿಬ್ಬಂದಿ ಸೇರಿದಂತೆ ನೆರೆಯ ಜಿಲ್ಲೆಗಳಿಂದಲೂ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿತ್ತು. ೬ ಡಿ.ವೈ.ಎಸ್.ಪಿ. ೧೪ ಇನ್ಸ್ಪೆಕ್ಟರ್, ೪೫ ಸಬ್‌ಇನ್ಸ್ಪೆಕ್ಟರ್, ೫೯ ಎ.ಎಸ್.ಐ.ಗಳು ಸೇರಿದರು. ಇವರೊಂದಿಗೆ ಇತರ ಸಿಬ್ಬಂದಿ, ಗೃಹರಕ್ಷಕದಳ, ಡಿ.ಎ.ಆರ್. ತುಕಡಿ, ಗುಜರಾತ್‌ನಿಂದ ಕರೆಸಲಾಗಿದ್ದ ಎರಡು ಶಸಸ್ತç ಪಡೆಯ ೧೯೦ ಸಿಬ್ಬಂದಿ ಸೇರಿ ಒಟ್ಟು ೧೬೦೦ ಮಂದಿ ಬಂದೋಬಸ್ತ್ನಲ್ಲಿ ನಿರತರಾಗಿದ್ದರು. ಸೂಕ್ಷö್ಮ - ಅತಿಸೂಕ್ಷö್ಮ ಸೇರಿದಂತೆ ನಕ್ಸಲ್ ಪೀಡಿತ ಪ್ರದೇಶಗಳ ಮತಗಟ್ಟೆಗಳಲ್ಲಿ ಹೆಚ್ಚಿನ ರಕ್ಷಣಾ ವ್ಯವಸ್ಥೆ ಮಾಡಲಾಗಿತ್ತು. ವನ್ಯಪ್ರಾಣಿಗಳ ಉಪಟಳವಿರುವ ಪ್ರದೇಶಗಳಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಗಳೂ ವಿಶೇಷವಾಗಿ ಕರ್ತವ್ಯ ನಿರ್ವಹಿಸಿದರು.

ಸ್ಟಾçಂಗ್ ರೂಂನಲ್ಲಿ ಮತಯಂತ್ರಗಳು

ಚುನಾವಣೆ ಮುಗಿದ ಬಳಿಕ ಎಲ್ಲ ಮತಗಟ್ಟೆಗಳಲ್ಲಿನ ಮತಯಂತ್ರಗಳನ್ನು ಮಡಿಕೇರಿ ಸಂತ ಜೋಸೆಫರ ಶಾಲೆ ಹಾಗೂ ವೀರಾಜಪೇಟೆ ಜೂನಿಯರ್ ಕಾಲೇಜಿನಲ್ಲಿ ತೆರೆಯಲಾಗಿರುವ ಸ್ಟಾçಂಗ್ ರೂಂನಲ್ಲಿ ಬಿಗಿ ಪೊಲೀಸ್ ಭದ್ರತೆಯೊಂದಿಗೆ ಇರಿಸಲಾಗಿದೆ. ಮಡಿಕೇರಿ ಸ್ಟಾçಂಗ್ ರೂಂಗೆ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಭೇಟಿ ನೀಡಿ ಪರಿಶೀಲಿಸಿದರು.