ಗೋಣಿಕೊಪ್ಪಲು, ಏ. ೨೬: ದಕ್ಷಿಣ ಕೊಡಗಿನ ಎಲ್ಲಾ ಭಾಗಗಳಲ್ಲಿಯೂ ಉತ್ತಮ ರೀತಿಯಲ್ಲಿ ಮತದಾನ ನಡೆಯಿತು. ದಕ್ಷಿಣ ಕೊಡಗಿನ ಕಾಕೂರು ಪ್ರಾಥಮಿಕ ಶಾಲೆಯ ಬೂತ್ ಸಂಖ್ಯೆ ೨೫೫ ರಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಸರತಿ ಸಾಲು ಕಂಡು ಬಂತು. ಬಿಸಿಲಿನ ತಾಪವನ್ನು ಲೆಕ್ಕಿಸದೆ ಅನೇಕರು ಮತದಾನದಲ್ಲಿ ಪಾಲ್ಗೊಂಡಿದ್ದರು. ಮಧ್ಯಾಹ್ನದ ವೇಳೆ ದ. ಕೊಡಗಿನಲ್ಲಿ ಶೇ.೫೦ ಮತದಾನವಾಗಿತ್ತು. ಶ್ರೀಮಂಗಲ ಭಾಗದಲ್ಲಿ ಬಿಜೆಪಿ ಪಕ್ಷದ ಸದಸ್ಯರು ಕೇಸರಿ ಶಾಲು ಧರಿಸಿ ಮತಯಾಚನೆ ನಡೆಸುತ್ತಿದ್ದರು. ಪ್ರತಿ ಬೂತ್‌ನಲ್ಲಿಯೂ ಪೋಲಿಸರು ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕ ಸಾಲಿನಲ್ಲಿ ನಿಂತು ಮತದಾನ ಕೇಂದ್ರದ ಒಳಗೆ ಪ್ರವೇಶ ಮಾಡಲು ಅವಕಾಶ ಕಲ್ಪಿಸಿದ್ದರು. ಹುದಿಕೇರಿಯ ಬೇಗೂರು ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಮತಯಾಚನೆ ನಡೆಸಿದರು.